ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಕರ್ನಾಟಕ

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌: ಮಿಂಚಿದ ಮನೀಷ್‌ ಪಾಂಡೆ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಡೋದರ (ಪಿಟಿಐ): ಮನೀಷ್‌ ಪಾಂಡೆ (ಅಜೇಯ 99) ಮತ್ತು ಸ್ಟುವರ್ಟ್‌ ಬಿನ್ನಿ (58) ಅವರ ಉತ್ತಮ ಆಟದ ನೆರವಿನಿಂದ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಇಲ್ಲಿನ ರಿಲಯನ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿನಯ್‌ ಕುಮಾರ್‌ ನೇತೃತ್ವದ ಕರ್ನಾಟಕ 4 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 286 ರನ್‌ ಗಳಿಸಿದರೆ, ಕರ್ನಾಟಕ 49.4 ಓವರ್‌ಗಳಲ್ಲಿ 6 ವಿಕೆಟ್‌ಗೆ 187 ರನ್‌ ಗಳಿಸಿ ಜಯ ಸಾಧಿಸಿತು. ಭಾನುವಾರ ನಡೆಯುವ ನಾಲ್ಕರಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡ ಬಂಗಾಳ ವಿರುದ್ಧ ಪೈಪೋಟಿ ನಡೆಸಲಿದೆ.

ಟಾಸ್‌ ಗೆದ್ದ ಕರ್ನಾಟಕ ಬೌಲ್‌ ಮಾಡಲು ನಿರ್ಧರಿಸಿತು. 59 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ಮುಂಬೈ ಆರಂಭಿಕ ಆಘಾತಕ್ಕೆ ಒಳಗಾಯಿತು. 

ಆದರೆ ಶ್ರೇಯಸ್‌ ಅಯ್ಯರ್‌ (77, 67 ಎಸೆತ, 8 ಬೌಂ, 1 ಸಿ) ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ (67, 81 ಎಸೆತ, 4 ಬೌಂ, 3 ಸಿ) ನಾಲ್ಕನೇ ವಿಕೆಟ್‌ಗೆ 135 ರನ್‌ಗಳನ್ನು ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಕರ್ನಾಟಕದ ಪರ ಅಭಿಮನ್ಯು ಮಿಥುನ್‌ ಮತ್ತು ಎಸ್‌. ಅರವಿಂದ್‌ ತಲಾ ಎರಡು ವಿಕೆಟ್‌ ಪಡೆದರು.

ಸವಾಲಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ರಾಬಿನ್‌ ಉತ್ತಪ್ಪ (43, 45 ಎಸೆತ, 6 ಬೌಂ) ಮತ್ತು ಮಯಂಕ್‌ ಅಗರ್‌ವಾಲ್‌ (14) ಮೊದಲ ವಿಕೆಟ್‌ಗೆ 33 ರನ್‌ ಸೇರಿಸಿದರು. ರಾಬಿನ್‌ ಆ ಬಳಿಕ ಶ್ರೇಯಸ್‌ ಗೋಪಾಲ್‌ (17) ಅವರೊಂದಿಗೆ 42 ರನ್‌ಗಳ ಜತೆಯಾಟ ನೀಡಿದರು.

ಒಂಬತ್ತು ರನ್‌ಗಳ ಅಂತರದಲ್ಲಿ ರಾಬಿನ್‌ ಮತ್ತು ಶ್ರೇಯಸ್‌ ಔಟಾದಾಗ ಕರ್ನಾಟಕ ಅಲ್ಪ ಒತ್ತಡಕ್ಕೆ ಒಳಗಾಯಿತು. ಆದರೆ ಪಾಂಡೆ ಅವರು ಬಿನ್ನಿ ಮತ್ತು ಕರುಣ್‌ ನಾಯರ್‌ (32, 23 ಎಸೆತ, 3 ಬೌಂ, 1 ಸಿ) ಅವರೊಂದಿಗೆ ಉತ್ತಮ ಜತೆಯಾಟ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

112 ಎಸೆತಗಳನ್ನು ಎದುರಿಸಿದ ಪಾಂಡೆ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು. ಬಿನ್ನಿ 67 ಎಸೆತಗಳನ್ನು ಎದುರಿಸಿದರು. ಪಾಂಡೆ ಮತ್ತು ಬಿನ್ನಿ ನಾಲ್ಕನೇ ವಿಕೆಟ್‌ಗೆ 119 ರನ್‌ ಕಲೆಹಾಕಿ ಮುಂಬೈ ತಂಡದ ಗೆಲುವಿನ ಕನಸಿಗೆ ಅಡ್ಡಿಯಾದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 286 (ಶ್ರೇಯಸ್‌ ಅಯ್ಯರ್‌ 77, ಸೂರ್ಯಕುಮಾರ್‌ ಯಾದವ್‌ 67, ಆದಿತ್ಯ ತಾರೆ 23, ಅಭಿಷೇಕ್‌ ನಾಯರ್‌ 21, ಅಭಿಮನ್ಯು ಮಿಥುನ್‌ 57ಕ್ಕೆ 2, ಎಸ್‌. ಅರವಿಂದ್‌ 73ಕ್ಕೆ 2)

ಕರ್ನಾಟಕ: 49.4 ಓವರ್‌ಗಳಲ್ಲಿ 6 ವಿಕೆಟ್‌ಗೆ 287 (ರಾಬಿನ್‌ ಉತ್ತಪ್ಪ 43, ಮಯಂಕ್‌ ಅಗರ್‌ವಾಲ್‌ 14, ಶ್ರೇಯಸ್‌ ಗೋಪಾಲ್‌ 17, ಮನೀಷ್‌ ಪಾಂಡೆ ಔಟಾಗದೆ 99, ಸ್ಟುವರ್ಟ್‌ ಬಿನ್ನಿ 58, ಕರುಣ್‌ ನಾಯರ್‌ 32, ವಿಲ್ಕಿನ್‌ ಮೋಟಾ 39ಕ್ಕೆ 2, ಸೌರಭ್‌ ನೆತ್ರಾವಲ್ಕರ್‌ 43ಕ್ಕೆ 2)

ಫಲಿತಾಂಶ: ಕರ್ನಾಟಕ್ಕೆ 6 ವಿಕೆಟ್‌ ಗೆಲುವು ಹಾಗೂ ಸೆಮಿಫೈನಲ್‌ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT