ಶನಿವಾರ, ಸೆಪ್ಟೆಂಬರ್ 21, 2019
21 °C
'ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ'

ಗೆಲ್ಲುವ ವಿಶ್ವಾಸವಿದೆ: ಶ್ರೀನಿವಾಸ ಪ್ರಸಾದ್‌

Published:
Updated:
Prajavani

ಚಾಮರಾಜನಗರ: ‘ಅತ್ಯಂತ ಕಷ್ಟಕರವಾಗಿದ್ದ ಈ ಬಾರಿಯ ಚುನಾವಣೆ ಕ್ಷೇತ್ರದಲ್ಲಿ ಚೆನ್ನಾಗಿ ನಡೆದಿದೆ. ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಜನರ ಬೆಂಬಲವನ್ನು ಗಳಿಸಿದ್ದೇವೆ. ನಾನು ಗೆಲ್ಲುವ ವಿಶ್ವಾಸ ಇದೆ’ ಎಂದು ಬಿಜೆಪಿ ಮುಖಂಡ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ‌ಹೇಳಿದರು.

‘ಗುಂಡ್ಲುಪೇಟೆ, ಚಾಮರಾಜನಗರ, ಎಚ್‌.ಡಿ.ಕೋಟೆ, ಕೊಳ್ಳೇಗಾಲ, ನಂಜನಗೂಡು ಕ್ಷೇತ್ರಗಳಲ್ಲಿ ಜನರು ನನ್ನನ್ನು ಬೆಂಬಲಿಸಿದ್ದಾರೆ. ಇಲ್ಲೆಲ್ಲ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಹಿಂದೆ ಸಿದ್ದರಾಮಯ್ಯ ಅವರ ಕ್ಷೇತ್ರವಾಗಿದ್ದ ವರುಣಾದಲ್ಲಿ ಮುನ್ನಡೆ ಬರುವ ಸಾಧ್ಯತೆಯೂ ಇದೆ’ ಎಂದು ಹೇಳಿದರು.

ಕಾರ್ಯತಂತ್ರ: ‘ಚುನಾವಣೆಗೆ ಮುನ್ನವೇ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ರಾಜಕೀಯ ಚಿತ್ರಣ, ಹಿಂದಿನ ಚುನಾವಣೆಯಲ್ಲಿ ಪಕ್ಷದ ಹಾಗೂ ಕಾಂಗ್ರೆಸ್‌ ಸಾಧನೆಗಳನ್ನು ಅಧ್ಯಯನ ಮಾಡಿದ್ದೆವು. ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಗಿದ್ದರಿಂದ, ಹಿಂದಿನ ಚುನಾವಣೆಗಳ ಅಂಕಿ- ಅಂಶಗಳ ಆಧಾರದಲ್ಲಿ ಕ್ಷೇತ್ರದಲ್ಲಿ 3.60 ಲಕ್ಷದಷ್ಟು ಹೆಚ್ಚು ಮತಗಳನ್ನು ಅವರು ಗಳಿಸಿದ್ದರು. ಈ ಚುನಾವಣೆಯಲ್ಲಿ ನಾವು ಅದನ್ನು ಮೀರಬೇಕಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

‘ಪ್ರಧಾನಿ ಮೋದಿ ಅವರ ಅಲೆ, ಯಡಿಯೂರಪ್ಪ ಅವರ ವರ್ಚಸ್ಸು, ನನ್ನ ರಾಜಕೀಯ ಅನುಭವ ಮತ್ತು ಶ್ರೀರಾಮುಲು ಅವರ ಪ್ರಭಾವದ ಆಧಾರದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದೆವು. ಚುನಾವಣೆಗೆ ಸ್ಪರ್ಧಿಸುವುದುಕ್ಕೂ ಮೊದಲು ವರಿಷ್ಠರು, ರಾಜ್ಯ ಮುಖಂಡರು ಮತ್ತು ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದ್ದೆ. ಇಡೀ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಿರುವ ತೃಪ್ತಿ ಇದೆ’ ಎಂದು ಹೇಳಿದರು. 

ವೈಯಕ್ತಿಕ ಹೇಳಿಕೆ: ‘ಮೈಸೂರಿನಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ, ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿರುವ ಸಾಧ್ಯತೆ ಇದೆ ಎಂದು ಜೆಡಿಎಸ್‌ ಮುಖಂಡ ಜಿ.ಟಿ.ದೇವೇಗೌಡ ಅವರು ಹೇಳಿದ್ದಾರೆ. ಅದೇ ರೀತಿ ಇಲ್ಲೂ ನಡೆದಿರುವ ಸಾಧ್ಯತೆ ಇದೆಯೇ’ ಎಂದು ಕೇಳಿದ್ದಕ್ಕೆ, ‘ಜಿ.ಟಿ.ದೇವೇಗೌಡ ಅವರು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿ ಆಗಿದೆ. ಚುನಾವಣೆಗೆ ಮುನ್ನವೇ ಮೈತ್ರಿ ವಿಚಾರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ನಡುವೆ ಭಿನ್ನ ಹೇಳಿಕೆ ನೀಡಿದ್ದರು.  ಚಾಮರಾಜನಗರ ಕ್ಷೇತ್ರದಲ್ಲಿ ಅಂತಹ ಹೇಳಿಕೆಗಳು ಯಾವುದು ಬಂದಿರಲಿಲ್ಲ. ಅಂತಹ ವಾತಾವರಣವೂ ಇರಲಿಲ್ಲ. ಹಾಗಾಗಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಉತ್ತರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಾಜೇಂದ್ರ, ಮುಖಂಡರಾದ ಸಿ.ಗುರುಸ್ವಾಮಿ, ಸುಂದರ್‌, ಬಸವೇಗೌಡ, ಚಿನ್ನಸ್ವಾಮಿ, ಹನುಮಂತುಶೆಟ್ಟಿ ಇದ್ದರು.

‘ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ’

‘ಇದು ರಾಷ್ಟ್ರಮಟ್ಟದ ಚುನಾವಣೆ. 18 ಲಕ್ಷ ಮತದಾರರಿದ್ದಾರೆ. ಎಲ್ಲ ಹಳ್ಳಿಗಳಿಗೂ ಪ್ರಚಾರಕ್ಕಾಗಿ ಹೋಗಲು ಸಾಧ್ಯವಿಲ್ಲ. ಸ್ಥಳೀಯ ಮುಖಂಡರ ಸಾಮರ್ಥ್ಯದ ಮೇಲೆ ಅಭ್ಯರ್ಥಿಯ ಗೆಲುವು–ಸೋಲು ನಿರ್ಧಾರ ಆಗುತ್ತದೆ. 9 ಚುನಾವಣೆಗಳನ್ನು ಎದುರಿಸಿದವನಿಗೆ ಪ್ರಚಾರ ಹೇಗೆ ಮಾಡಬೇಕೆಂದು ಗೊತ್ತಿಲ್ಲವೇ? ಎಲ್ಲ ಮುಖಂಡರು ಒಗ್ಗೂಡಿ ಕೆಲಸ ಮಾಡಿದ್ದಾರೆ. ಸಮರ್ಥವಾಗಿ ಪ್ರಚಾರ ಮಾಡಿರುವ ಸಮಾಧಾನ ನನಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

Post Comments (+)