ಕಡಿಮೆ ಹಾಜರಾತಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ತಿಗಣೆ ಔಷಧಿ ಕುಡಿದು ಅಸ್ವಸ್ಥಗೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜನಾರ್ದನ್ ಎಂಬಾತ, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಅಸುನೀಗಿದ್ದಾನೆ.
ಬೈಯಪ್ಪನಹಳ್ಳಿ ಬಳಿಯ ನಾಗವಾರಪಾಳ್ಯದ ಯಲ್ಲಮ್ಮ ದೇವಸ್ಥಾನ ರಸ್ತೆಯಲ್ಲಿ ವಾಸವಿದ್ದ ಜನಾರ್ದನ್, ಜೀವನ್ಬಿಮಾನಗರದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ತಾಯಿ ಶ್ರೀದೇವಿ ಹಾಗೂ ಅಣ್ಣನ ಜೊತೆ ವಾಸವಿದ್ದ ಆತ, ಫೆ. 6ರಂದು ತಿಗಣೆ ಔಷಧಿ ಕುಡಿದು ಮನೆಗೆ ಬಂದಿದ್ದ. ವಾಂತಿ ಮಾಡಿಕೊಳ್ಳುತ್ತಿದ್ದ ಆತನನ್ನು ತಾಯಿಯೇ ಸಿ.ವಿ.ರಾಮನ್ ಆಸ್ಪತ್ರೆಗೆ ಕರೆದೊಯ್ದಿದ್ದರು. ತೀವ್ರ ಅಸ್ವಸ್ಥಗೊಂಡಿದ್ದರಿಂದ ಆತನನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
‘ಜನಾರ್ದನ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತಿಗಣೆ ಔಷಧಿ ಕುಡಿದಿದ್ದ ಎಂದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತಾಯಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಬೈಯಪ್ಪನಹಳ್ಳಿ ಪೊಲೀಸರು ಹೇಳಿದರು.
‘ತಂದೆ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ತಾಯಿಯೇ ಮನೆಗೆಲಸ ಮಾಡಿ ಇಬ್ಬರೂ ಮಕ್ಕಳನ್ನು ಸಾಕುತ್ತಿದ್ದರು. ಜನಾರ್ದನ್, ಶಾಲೆಯ ತರಗತಿಗಳಿಗೆ ನಿರಂತರವಾಗಿ ಗೈರಾಗುತ್ತಿದ್ದ. ಕಳೆದ ವಾರ ತಾಯಿಯನ್ನು ಶಾಲೆಗೆ ಕರೆಸಿದ್ದ ಶಿಕ್ಷಕರು, ‘ಮಗನ ಹಾಜರಾತಿ ಕಡಿಮೆ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ಸಿಗುವುದು ಅನುಮಾನ’ ಎಂದು ಹೇಳಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಮನೆಗೆ ಬಂದಿದ್ದ ತಾಯಿ, ಶಾಲೆಗೆ ಹೋಗುವಂತೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಫೆ. 6ರಂದು ಟ್ಯೂಷನ್ಗೆ ಹೋಗುವುದಾಗಿ ಹೇಳಿ ಹೊರಗಡೆ ಹೋಗಿದ್ದ ಜನಾರ್ದನ್, ತಿಗಣೆ ಔಷಧಿ ಕುಡಿದು ಮನೆಗೆ ವಾಪಸ್ ಬಂದಿದ್ದ’ ಎಂದು ತಿಳಿಸಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All