ಮಣ್ಣು ಕೊಟ್ಟ ಹಾವು ಮತ್ತು ಮುಗ್ಧ ಬಾನಾಡಿಗಳು

7
ಮಕ್ಕಳ ಕಥೆ

ಮಣ್ಣು ಕೊಟ್ಟ ಹಾವು ಮತ್ತು ಮುಗ್ಧ ಬಾನಾಡಿಗಳು

Published:
Updated:
ಚಿತ್ರ: ವಿಜಯಕುಮಾರಿ ಆರ್.

ನೀ ಲಾಕಾಶದಲ್ಲಿ ಮೋಡಗಳಾಚೆಗೂ ಹಾರಾಡುವ ಶಕ್ತಿಯುಳ್ಳ ಬಾನಾಡಿ ಹಕ್ಕಿಯೊಂದು ಮಲೆಮಹದೇಶ್ವರ ಬೆಟ್ಟದ ತುದಿಯಲ್ಲಿತ್ತು. ಪ್ರತಿ ವರ್ಷ ಬೇಸಿಗೆ ಮುಗಿದು ಮಳೆಗಾಲ ಶುರುವಾಗುತ್ತಿದ್ದಂತೆ ಗೂಡು ಕಟ್ಟುತ್ತಿತ್ತು. ಗೂಡಿನಲ್ಲಿ ಮೊಟ್ಟೆ ಇಟ್ಟು, ಮರಿ ಮಾಡುತ್ತಿತ್ತು. ಅಂತೆಯೇ ಒಮ್ಮೆ ಧಾರಾಕಾರವಾಗಿ ಸುರಿದ ಮೊದಲ ಮಳೆಗೆ ನೆನೆದ ಬಾನಾಡಿ ತನ್ನ ಸಂಗಾತಿಯೊಂದಿಗೆ ಗೂಡು ನಿರ್ಮಿಸಲು ಸಂಕಲ್ಪ ಮಾಡಿತು.

ಜೇಡಿಮಣ್ಣನ್ನು ತಂದು ಗೂಡು ಕಟ್ಟುವ ಬಾನಾಡಿ ಮೊದಲಿಗೆ ಸಾಮಾನ್ಯ ಹಕ್ಕಿಗಳಂತೆ ಮರ, ಗಿಡಗಳ ಮೇಲೆ ಗೂಡು ಕಟ್ಟಲು ಪ್ರಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಹತ್ತಿರದಲ್ಲಿಯೇ ಈಚಲ ಮರದ ಗರಿಗಳ ತುದಿಯಲ್ಲಿ ಹುಲ್ಲು, ನಾರು, ದಾರಗಳಿಂದ ನೇಯ್ದು ಗೂಡು ನಿರ್ಮಿಸುತ್ತಿದ್ದ ಗೀಜಗನನ್ನು ನೋಡಿದ ಬಾನಾಡಿ ತಾನೂ ಹಾಗೆ ಮಾಡಲು ಪ್ರಯತ್ನಿಸಿತು. ಆಗಲೂ ವ್ಯವಸ್ಥಿತವಾದ ಗೂಡು ನಿರ್ಮಿಸಲು ಆಗಲಿಲ್ಲ. ಕೊನೆಗೆ ಪ್ರತಿ ವರ್ಷ ತಾನು ನಿರ್ಮಿಸುತ್ತಿದ್ದ ಮಣ್ಣಿನ ಗೂಡನ್ನು ನಿರ್ಮಿಸಲು ಮುಂದಾಯಿತು. ಅದಕ್ಕಾಗಿ ಸೂಕ್ತ ಜಾಗ ಹುಡುಕತೊಡಗಿತು.

ಹೀಗಿರಲೊಂದು ದಿನ ಬಾನಾಡಿ ತನ್ನ ಸಂಗಾತಿಯೊಂದಿಗೆ ಬೆಟ್ಟದ ಬುಡಕ್ಕೆ ಹಾರಿಬಂತು. ಅಲ್ಲಿದ್ದ ದೊಡ್ಡ ದೊಡ್ಡ ಬಂಡೆಗಲ್ಲುಗಳ ಸಂದಿಯಲ್ಲಿ ಒಂದು ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡಿತು. ಆದರೆ ಅದಕ್ಕೊಂದು ಸಮಸ್ಯೆ ಎದುರಾಯಿತು. ಗೂಡು ನಿರ್ಮಿಸಲು ಬೇಕಾದ ಶುದ್ಧ ಜೇಡಿಮಣ್ಣು ಹತ್ತಿರದಲ್ಲೆಲ್ಲೂ ಸಿಗಲಿಲ್ಲ. ಹಾಗಂತ ಬೇಸರಗೊಳ್ಳದ ಬಾನಾಡಿ ಸುತ್ತಮುತ್ತ ಮೈಲಿಗಟ್ಟಲೇ ದೂರಕ್ಕೆ ಹಾರಿಕೊಂಡು ಹೋಯಿತು. ಆದರೆ ಜೇಡಿಮಣ್ಣು ಸಿಗಲಿಲ್ಲ. ಸುಸ್ತಾದ ಬಾನಾಡಿ ಬಂಡೆಗಲ್ಲಿನ ಮೇಲೆ ಸಪ್ಪೆಮೋರೆ ಮಾಡಿಕೊಂಡು ಕುಳಿತಿತು.

ಆಗ ಬಂಡೆಗಲ್ಲಿನ ಕೆಳಗೆ ಇದ್ದ ಹುತ್ತದೊಳಗಿನಿಂದ ಮಾರುದ್ದದ ನಾಗರ ಹಾವು ಹೊರಬಂತು, ‘ಯಾಕೆ ಬಾನಾಡಿ ಬೇಜಾರಿನಿಂದ ಕುಂತಿದ್ದೀಯಾ? ಏನಾಯಿತು?’ ಎಂದು ಕೇಳಿತು.

‘ಏನು ಹೇಳಲಿ ನಾಗಣ್ಣ, ನನ್ನ ಕಷ್ಟ ಬಹಳ ದೊಡ್ಡದು. ಹೇಳಿ ಪ್ರಯೋಜನವಿಲ್ಲ ಬಿಡು’ ಅಂದಿತು ಬಾನಾಡಿ.

‘ಪರವಾಗಿಲ್ಲ ಹೇಳು... ಕಷ್ಟ ಎಲ್ಲರಿಗೂ ಬರುತ್ತದೆ. ಹಾಗಂತ ಮನಸ್ಸಿನಲ್ಲಿಯೇ ಇಟ್ಟುಕೊಂಡರೆ ಪರಿಹಾರ ಆಗುವುದಿಲ್ಲ. ಕಷ್ಟದ ಸಂಗತಿಗಳನ್ನು ಪರಸ್ಪರ ಹೇಳಿಕೊಂಡರೆ ಸಮಾಧಾನ’ ಎಂದಿತು ನಾಗ.

‘ಪ್ರತಿ ವರ್ಷದಂತೆ ಈ ವರ್ಷವೂ ಗೂಡು ನಿರ್ಮಿಸಿ, ಮೊಟ್ಟೆ ಇಟ್ಟು, ಮರಿ ಮಾಡಬೇಕು. ಆದರೆ ಗೂಡು ನಿರ್ಮಿಸಲು ಬೇಕಾದ ಶುದ್ಧ ಜೇಡಿಮಣ್ಣು ಹತ್ತಿರದಲ್ಲೆಲ್ಲೂ ಸಿಗುತ್ತಿಲ್ಲ. ನಾಲ್ಕೈದು ದಿನಗಳಿಂದ ತಿರುಗಾಡಿ ನೋಡಿದೆ. ಎಲ್ಲೂ ಸಿಗಲಿಲ್ಲ. ಏನು ಮಾಡಲಿ?’ ಅನ್ನುತ್ತಲೇ ಬೇಸರದಿಂದ ತಲೆ ಕೆಳಗೆ ಹಾಕಿತು ಬಾನಾಡಿ.

ಆಗ ನಾಗರ ಹಾವು, ‘ಅದಕ್ಕೆಲ್ಲ ಬೇಜಾರು ಮಾಡಿಕೊಳ್ಳಬೇಡ. ನಾ ನಿನಗೆ ಸಹಾಯ ಮಾಡುವೆ. ನನ್ನ ಹುತ್ತದ ಮಣ್ಣನ್ನು ಸಂಕೋಚವಿಲ್ಲದೆ ತೆಗೆದುಕೊಂಡು ನಿನ್ನ ಗೂಡನ್ನು ನಿರ್ಮಿಸಿಕೊ’ ಎಂದು ಸಲಹೆ ನೀಡಿತು.

‘ಸರಿ, ಆಗಬಹುದು. ಆದರೆ ಹುತ್ತದಿಂದ ಮಣ್ಣು ತೆಗೆದುಕೊಂಡರೆ ನಿನಗೆ ತೊಂದರೆ ಆಗುತ್ತಲ್ಲ?’ ಎಂದು ತಲೆ ಮೇಲೆತ್ತಿ ಹೇಳಿತು ಬಾನಾಡಿ.

‘ಪರವಾಗಿಲ್ಲ ಬಾನಾಡಿ, ಹುತ್ತದ ಕೆಳಗಿನ ಒಂದು ಬದಿಯಲ್ಲಿನ ಮಣ್ಣನ್ನು ತೆಗೆದುಕೊ. ಇಲ್ಲಿ ನಾನೊಬ್ಬನೆ ಇರುವುದು. ನೀನು ಹಾಗಲ್ಲ, ಮೊಟ್ಟೆ ಇಟ್ಟು ಮರಿ ಮಾಡಬೇಕು. ಬಹಳ ದಿನಗಳ ಕಾಲ ಅವುಗಳನ್ನು ಸಾಕಬೇಕು. ಅದಕ್ಕಾಗಿ ಗೂಡು ಬೇಕೇಬೇಕು. ಈ ಸಮಯದಲ್ಲಿ ನಿನಗೆ ನಾನು ಸಹಾಯ ಮಾಡದಿದ್ದರೆ ಆ ದೇವರು ಮೆಚ್ಚುತ್ತಾನಾ? ಸಂಕೋಚ ಬೇಡ. ನನ್ನ ಹುತ್ತದಲ್ಲಿನ ಮೆತ್ತನೆಯ ಮಣ್ಣನ್ನು ತಡಮಾಡದೇ ತೆಗೆದುಕೊಂಡು ಹೋಗು. ಆದಷ್ಟು ಬೇಗ ನಿನ್ನ ಗೂಡನ್ನು ನಿರ್ಮಿಸು’ ಎಂದು ನಾಗರ ಹಾವು ಪ್ರೀತಿಯಿಂದ ಹೇಳಿತು.

ನಾಗರ ಹಾವಿನ ಆತ್ಮೀಯ ಮಾತುಗಳನ್ನು ಕೇಳಿದ ಬಾನಾಡಿಯ ಹೃದಯ ಅರಳಿತು. ಹಾವಿಗೆ ಧನ್ಯವಾದ ಹೇಳಿತು. ಹುತ್ತದ ಮಣ್ಣನ್ನು ಬಳಸಿ ಬಂಡೆಗಲ್ಲಿನ ನಡುವೆ ಅರ್ಧ ತೆಂಗಿನ ಚಿಪ್ಪಿನಾಕಾರದಲ್ಲಿ ಅಂದವಾದ ಗೂಡನ್ನು ನಿರ್ಮಿಸಿತು. ಗೂಡಿನೊಳಗೆ ಎರಡು ಮೊಟ್ಟೆ ಇಟ್ಟಿತು. ಆ ಮೊಟ್ಟೆಗಳಿಗೆ ಕಾವು ಕೊಟ್ಟಿತು. ಹದಿನೈದು ದಿನಕ್ಕೆಲ್ಲಾ ಮೊಟ್ಟೆಗಳು ಒಡೆದು ಅಂದವಾದ ಎರಡು ಮರಿಗಳು ಹೊರಬಂದವು. ಮರಿಗಳು ಬಂದ ಸಂತಸದ ಸಂಗತಿಯನ್ನು ಬಾನಾಡಿ ನಾಗರ ಹಾವಿಗೆ ತಿಳಿಸಿತು. ಆಗ ಅದು ಸಂತೋಷಗೊಂಡಿತು.

ಪ್ರತಿ ದಿನವೂ ತನ್ನ ಮರಿಗಳಿಗೆ ಬಾನಾಡಿ ತನ್ನ ಸಂಗಾತಿಯೊಂದಿಗೆ ಗುಟುಕು ನೀಡತೊಡಗಿತು. ದಿನಗಳೆದಂತೆ ಮರಿಗಳು ಬೆಳೆದು ದೊಡ್ಡದಾಗತೊಡಗಿದವು. ಆಗ ಅವುಗಳಿಗೆ ಹೆಚ್ಚು ಹೆಚ್ಚು ಆಹಾರ ನೀಡಬೇಕಾಯಿತು. ಆಗ ಬಾನಾಡಿ ತನ್ನ ಸಂಗಾತಿಯೊಂದಿಗೆ ಆಹಾರ ಹುಡುಕಿಕೊಂಡು ದೂರ ದೂರ ಅಲೆಯುವಂತಾಯಿತು.

ಏಕೆಂದರೆ ಮೊದಲ ಮಳೆಯ ನಂತರ ಮತ್ತೆ ಮಳೆ ಸುರಿಯಲೇ ಇಲ್ಲ. ಹಾಗಾಗಿ ಬೆಟ್ಟದ ತುಂಬ ಬರಗಾಲದ ಛಾಯೆ ಆವರಿಸಿತು. ಕುಡಿಯುವ ನೀರಿನ ಅಭಾವ ಹೆಚ್ಚಾಯಿತು. ಒಂದೊಂದು ದಿನ ಬಾನಾಡಿ ತನ್ನ ಸಂಗಾತಿಯೊಂದಿಗೆ ಆಹಾರ ಹುಡುಕಲು ಬೆಳಿಗ್ಗೆ ಹೊರಟರೆ ಮಧ್ಯಾಹ್ನಕ್ಕೆ ಮರಳುತ್ತಿತ್ತು. ನಂತರ ಮತ್ತೆ ಹೊರಟು ಹೋದರೆ ಸಂಜೆಯೇ ಗೂಡು ಸೇರಿಕೊಳ್ಳುತ್ತಿತ್ತು.

ಹೀಗಿರುವಾಗ ಒಂದು ದಿನ ಮಧ್ಯಾಹ್ನ ಬಾನಾಡಿ ತನ್ನ ಸಂಗಾತಿಯೊಂದಿಗೆ ಆಹಾರ ತೆಗೆದುಕೊಂಡು ಗೂಡಿನತ್ತ ಬರಲಿಲ್ಲ. ಆಗ ನಾಗರ ಹಾವು ಬಾನಾಡಿಯ ಗೂಡಿನತ್ತ ಹೋಯಿತು. ಗೂಡಿನಲ್ಲಿ ರೆಕ್ಕೆಪುಕ್ಕ ಬಲಿತು ದುಂಡಗೆ ಇದ್ದ ಬಾನಾಡಿಯ ಮರಿಗಳನ್ನು ಕಂಡ ನಾಗರ ಹಾವಿಗೆ ಆಸೆಯಾಯಿತು. ಎರಡು ಮರಿಗಳನ್ನು ನುಂಗಲು ಮುಂದಾಯಿತು. ಒಮ್ಮೆ ಅತ್ತಿತ್ತ ನೋಡಿ ತನ್ನ ಬಾಯಿಯನ್ನು ಅಗಲಿಸಿತು. ಇನ್ನೇನು ಮರಿಗಳನ್ನು ಹಾವು ನುಂಗುತ್ತದೆ ಎನ್ನುವಷ್ಟರಲ್ಲಿ ಹಾರಿಬಂದ ರಣಹದ್ದು ಹಾವನ್ನು ಎತ್ತಿಕೊಂಡು ಹಾರಿತು. ಅಷ್ಟರಲ್ಲಿ ಆಕಾಶದಲ್ಲಿ ರಣಹದ್ದಿಗೆ ಬಾನಾಡಿಗಳು ಎದುರಾದವು.

‘ಏನು ಹದ್ದಣ್ಣ, ಆರಾಮಾಗಿ ಇದ್ದೀಯಾ? ನಿನ್ನ ನೋಡಿ ಬಹಳ ದಿನಗಳಾದವು. ಬಹಳ ದಿನಗಳ ನಂತರ ಬೆಟ್ಟದ ತುದಿಯಿಂದ ಕೆಳಗೆ ಬಂದಿದ್ದೀಯಾ? ಭರ್ಜರಿ ಬೇಟೆಯನ್ನೇ ಹಿಡಿದಿದ್ದೀಯಾ?’ ಎಂದು ಬಾನಾಡಿ ವಿಚಾರಿಸಿತು.

‘ಸದ್ಯ ಮಾತನಾಡಲು ಸಮಯವಿಲ್ಲ. ನೀವು ಹೋಗಿ ಮರಿಗಳಿಗೆ ಗುಟುಕು ನೀಡಿ, ನಾನು ಸಂಜೆ ನಿಮ್ಮನ್ನು ಕಾಣಲು ಬರುವೆ’ ಎಂದು ಹೇಳಿ ಬಹಳ ಎತ್ತರಕ್ಕೆ ಹಾರಿ ಹೋಯಿತು ರಣಹದ್ದು.

ವೇಗವಾಗಿ ಹಾರುತ್ತಿದ್ದ ರಣಹದ್ದಿನ ಕಾಲಿನಲ್ಲಿ ಬಂದಿಯಾಗಿದ್ದ ಹಾವನ್ನು ಬಾನಾಡಿಗಳು ಗುರುತು ಹಿಡಿಯಲಿಲ್ಲ. ಕೆಲವು ದಿನಗಳ ಬಳಿಕ ಬಾನಾಡಿ ದಂಪತಿಗಳು ಮರಿಗಳೊಂದಿಗೆ ಗೂಡನ್ನು ತೊರೆದು ಮಲೆಮಹದೇಶ್ವರ ಬೆಟ್ಟದ ತುದಿಯತ್ತ ಪಯಣಿಸಲು ಅಣಿಯಾದವು. ತಮಗೆ ಸಹಾಯ ಮಾಡಿದ ಹಾವಿಗೆ ಕೃತಜ್ಞತೆ ಹೇಳಲು ಹುತ್ತದ ಬಳಿಗೆ ಹೋದವು. ಆದರೆ ಅಲ್ಲಿ ಹಾವಿನ ಪೊರೆ ಮಾತ್ರ ಇತ್ತು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !