ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಹೆಚ್ಚಿದ ಹಂದಿ, ನಾಯಿಗಳ ಕಾಟ: ಸ್ಥಳಾಂತರಕ್ಕೆ ಆಗ್ರಹ

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒತ್ತಾಯ
Last Updated 8 ಏಪ್ರಿಲ್ 2019, 9:49 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಬೀದಿ ನಾಯಿ, ಹಂದಿಗಳ ಕಾಟ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತೀವ್ರತೊಂದರೆ ಆಗುತ್ತಿದೆ. ಬೀದಿಯಲ್ಲಿ ನಾಯಿ, ಹಂದಿಗಳು ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಎಲ್ಲರೂ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.

‘ನಗರದ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ, ಸುಭಾಷ ವೃತ್ತ, ಶಿವಬಸವೇಶ್ವರ ನಗರ, ಮುಲ್ಲಾನಕೆರೆ, ಶಿವಲಿಂಗ ನಗರ, ಬಸವೇಶ್ವರ ನಗರ, ನಾಗೇಂದ್ರನಮಟ್ಟಿ, ಸೂಲಮಟ್ಟಿ, ಶಿವಾಜಿನಗರ, ಅಶ್ವಿನಿ ನಗರ ಹಾಗೂ ಇಜಾರಿಲಕಮಾಪುರ ನಿವಾಸಿಗಳು ನಾಯಿಗಳ ಕಾಟಕ್ಕೆ ರೋಸಿ ಹೋಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಇಮಾಂಸಾಬ್‌ ದೂರಿದರು.

‘ರಸ್ತೆಯಲ್ಲಿ ಓಡಾಡುವಾಗ ನಾಯಿಗಳ ಹಿಂಡನ್ನು ಕಂಡು ಪಾದಚಾರಿಗಳು, ದ್ವಿಚಕ್ರಸವಾರರು ಹೆದರುತ್ತಿದ್ದಾರೆ. ಮನೆಯ ಸುತ್ತ ಮಕ್ಕಳು ಆಟವಾಡುತ್ತಿದ್ದರೆ ನಾಯಿಗಳು ಏಕಾಏಕಿ ದಾಳಿ ಮಾಡುತ್ತಿವೆ. ರಸ್ತೆಯಲ್ಲಿ ಬೈಕ್‌, ಸೈಕಲ್‌ಗಳಲ್ಲಿ ಓಡಾಡದಂತಾಗಿದೆ. ಕೆಲ ದಿನಗಳಹಿಂದೆ ನನಗೂ ನಾಯಿ ಕಚ್ಚಿದೆ. ಗಾಯ ಇನ್ನೂ ಕೂಡ ಮಾಸಿಲ್ಲ’ ಎಂದು ಚಮನಸಾಬ್‌ ಕರ್ಜಗಿ ಹೇಳಿದರು.

‘ಇಷ್ಟು ದಿನ ನಾಯಿಗಳ ಕಾಟವಷ್ಟೇ ಇತ್ತು. ಈಗೀಗ ಹಂದಿಗಳೂ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಮನೆಯ ಬಾಗಿಲು ತೆರೆದಿದ್ದರೆ ಹಂದಿಗಳು ಒಳಗೆ ನುಗ್ಗುತ್ತವೆ. ಬಿಸಿಲಿಗೆ ಒಣಗಿಸಲು ಹಾಕಿದ ಬಟ್ಟೆಗಳನ್ನು ಎಳೆದುಕೊಂಡು ಹೋಗುತ್ತವೆ. ಚರಂಡಿ ಕೊಚ್ಚೆಯಲ್ಲಿ ಮುಳುಗಿ ಹೊರಬಂದುಗಲೀಜು ಹರಡುತ್ತವೆ. ಹಂದಿ, ನಾಯಿಗಳ ಕಾಟದಿಂದ ನಗರದ ಸಾರ್ವಜನಿಕರು ತೊಂದರೆಗೀಡಾಗಿದ್ದು, ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು. ಇಲ್ಲವೇ, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು’ ಎಂದು ನಾಗೇಂದ್ರನಮಟ್ಟಿಯ ಖೈರುನ್ ಶೇಖ್ ಆಗ್ರಹಿಸಿದರು.

‘ಸಂಜೆಯಾದರೆ ಸಾಕು ಹೋಟೆಲ್, ಚಿಕನ್, ಮಟನ್, ಎಗ್‌ರೈಸ್ ಅಂಗಡಿ, ಆಹಾರ ಮಾರಾಟದ ಮಳಿಗೆ ಬಳಿ ನಾಯಿ, ಹಂದಿಗಳು ಸೇರುತ್ತವೆ. ನಗರದ ಪ್ರಮುಖ ಬಡಾವಣೆಗಳಲ್ಲಿ ಸುಶಿಕ್ಷಿತರೇ ನಾಯಿಗಳಿಗೆ ಊಟ ಹಾಕಿ ಅಪಾಯಆಹ್ವಾನಿಸುತ್ತಿದ್ದಾರೆ. ರಾತ್ರಿ ಹೊತ್ತು ಗುಂಪು ಗುಂಪಾಗಿ ತಿರುಗುವ ನಾಯಿಗಳಿಂದ ಜನರುಭಯ ಪಡುವಂತಾಗಿದೆ. ಕರ್ಕಶ ಧ್ವನಿಯಲ್ಲಿ ಬೋಗಳುತ್ತಾ ನಾಯಿಗಳು ಜನರ ನಿದ್ದೆಗೆಡಿಸುತ್ತಿವೆ’ ಎಂದು ನಗರದ ನಿವಾಸಿ ಪಾರವ್ವ ಕುಮ್ಮಣ್ಣನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT