ಮಂಗಳವಾರ, ಸೆಪ್ಟೆಂಬರ್ 28, 2021
23 °C

ಪ್ರತಿಮಾ ರಾಜಕಾರಣದ ‘ಅ’ಜ್ಞಾನ

ಸುಬ್ರಮಣ್ಯ ಎಚ್‌.ಎಂ. Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರತಿಮೆಗಳ ರಾಜಕಾರಣದ ಬಿರುಗಾಳಿ ಎದ್ದಿದೆ. ಪ್ರಾಧ್ಯಾಪಕ ವರ್ಗ, ವಿದ್ಯಾರ್ಥಿಗಳು ಈ ಬಿರುಗಾಳಿಗೆ ಸಿಲುಕಿದ್ದಾರೆ. ವೈಚಾರಿಕ ಸಂಘರ್ಷದ ಮತ್ತು ಸಾಂಪ್ರದಾಯಿಕ ಚೌಕಟ್ಟಿನ ಪರಂಪರೆ ಪ್ರತಿಪಾದಿಸುವವರ ನಡುವಿನ ಸಮರ ನಾಡಿನ ಗಮನ ಸೆಳೆದಿದೆ. ಈ ವಿವಾದದ ಸುತ್ತ ‘ಮೆಟ್ರೊ’ ನೋಟವಿದು.

***

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಒಂದು ಘಟನೆ ಅವರ ಗಮನಕ್ಕೆ ಬರುತ್ತದೆ. ಅಂದಿನ ಬಾಂಬೆ ಕಾರ್ಪೊರೇಷನ್‌ಗೆ ಅಪಾರ ಕೊಡುಗೆ ನೀಡಿದ್ದ ಮೆಹತಾ ಪ್ರತಿಮೆ ಸ್ಥಾಪನೆಗೆ ಚಿಂತನೆ ನಡೆದಿತ್ತು. ಈ ವಿಷಯವಾಗಿ ಅಂಬೇಡ್ಕರ್, ಟೈಮ್ಸ್‌ ಜರ್ನಲ್‌ಗೆ ಪತ್ರ ಬರೆಯುತ್ತಾರೆ. ‘ಮೆಹತಾ ಬದುಕಿದ್ದರೆ ಇದನ್ನು ಖಂಡಿತವಾಗಿಯೂ ವಿರೋಧಿಸುತ್ತಿದ್ದರು. ಪ್ರತಿಮೆಗೆ ವ್ಯಯ ಮಾಡುವ ₹50 ಸಾವಿರದಲ್ಲಿ 50 ಗ್ರಂಥಾಲಯ ತೆರೆಯಬಹುದು ಎಂದು ಹೇಳುತ್ತಿದ್ದರು‘ ಎಂದು ಅಂಬೇಡ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

–ಇದು ಚರಿತ್ರೆಯಲ್ಲಿ ದಾಖಲಾದ ವಿಷಯ.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸರಸ್ವತಿ–ಬುದ್ಧ ಪ್ರತಿಮೆಗಳ ರಾಜಕಾರಣದ ಬಿರುಗಾಳಿಗೆ ಸಿಲುಕಿರುವ ಅಲ್ಲಿನ ಪ್ರಾಧ್ಯಾಪಕರ ವರ್ಗ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ವಿವೇಕ, ಅರಿವು ಇಲ್ಲವಾಗಿದೆ ಎನ್ನುವುದು ವಿದ್ವತ್‌ ವರ್ಗದ ವಿಷಾದ.

ಅಕಾಡೆಮಿಕ್‌ ಕೆಲಸಗಳಿಗಾಗಿ ಹೆಸರಾಗಬೇಕಾದ ಸ್ಥಳದಲ್ಲಿ ವಿವಾದದ ಕಿಡಿವೊಂದು ಹೊತ್ತಿಕೊಂಡಿದೆ. ವಸ್ತುವೊಂದಕ್ಕೆ ಹಲವು ಆಯಾಮ ಇರುವಂತೆಯೇ ಈ ಪ್ರತಿಮೆಗಳ ಸುತ್ತಲೂ ಸಿದ್ಧಾಂತಗಳ ಮೇಲಾಟ, ನಂಬಿಕೆ – ವಿಚಾರಗಳ ತಾಕಲಾಟ, ಭಾವನಾತ್ಮಕ ಸಂಘರ್ಷ, ಪ್ರತಿಷ್ಠೆ, ವೈಯಕ್ತಿಕ ಹಿತಾಸಕ್ತಿಯ ರಾಜಕಾರಣ ಗುಪ್ತಗಾಮಿನಿಯಾಗಿ ಕೆಲಸ ಮಾಡಿದೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಬೊಟ್ಟು ಮಾಡಿ ತೋರಿಸುತ್ತಾರೆ.

ಪರಸ್ಪರ ಕೆಸರೆರಚಾಟ

ವಿಶ್ವವಿದ್ಯಾಯಲದಲ್ಲಿ ‘ಪ್ರಭಾವಿ’ ಪ್ರಾಧ್ಯಾಪಕರೊಬ್ಬರ ಅಧಿಕಾರದ ಸ್ಥಾನಪಲ್ಲಟ ವಿಷಯಾಂತರಗೊಳಿಸಲು ಮುಗ್ಧ ವಿದ್ಯಾರ್ಥಿಗಳ ಮೂಲಕ ಈ ವಿವಾದ ಸೃಷ್ಟಿಸಲಾಗಿದೆ ಎಂಬುದು ಕೆಲವರ ನೇರ ಆರೋಪ. ವಿಶ್ವವಿದ್ಯಾಲಯ ಕೇಂದ್ರ ಕಚೇರಿ ಪ್ರವೇಶ ದ್ವಾರದ ಬಳಿ ಇದ್ದ 300 ಕೆ.ಜಿ ತೂಕದ ಸರಸ್ವತಿ ಪ್ರತಿಮೆಯನ್ನು ದುರಸ್ತಿ ಕಾರಣಕ್ಕಾಗಿ ಕೆಲ ದಿನಗಳಿಂದಷ್ಟೇ ತೆರವುಗೊಳಿಸಲಾಗಿತ್ತು. ವಿಶ್ವವಿದ್ಯಾಲಯದ ಎಂಜಿನಿಯರ್ ಮತ್ತು ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಬುದ್ಧ ಅಧ್ಯಯನ ಕೇಂದ್ರದಿಂದ ಪ್ರತಿಮೆ ತಂದು ತೆರವುಗೊಂಡ ಖಾಲಿ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿದ್ದರ ಫಲವೇ ಈ ವಿವಾದ ಎನ್ನುವುದು ಒಂದು ಪ್ರಾಧ್ಯಾಪಕರ  ಬಣದ ಆರೋಪ.


ಬೆಂಗಳೂರು ವಿಶ್ವವಿದ್ಯಾಲಯ ಕೇಂದ್ರ ಕಚೇರಿ ದ್ವಾರದ ಮುಂಭಾಗ ಸರಸ್ವತಿ ಪ್ರತಿಮೆ ಇದ್ದ ಜಾಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ

ಈ ವಿವಾದದ ಕೇಂದ್ರ ಬಿಂದುಗಳಾದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ದಲಿತ ವರ್ಗಕ್ಕೆ ಸೇರಿದವರು. ಇದರಲ್ಲಿ ದಲಿತರ ಎಡ–ಬಲ ಜಾತಿ ರಾಜಕಾರಣವೂ ಸೇರಿಕೊಂಡಿದೆ. ‘ಬಲಗೈ’(ಹೊಲೆಯ) ಗುಂಪಿನ ಪ್ರಾಧ್ಯಾಪಕರು ಬುದ್ಧನ ಪ್ರತಿಮೆ ವಿವಾದದ ಪರವಾಗಿದ್ದರೆ, ‘ಎಡಗೈ’(ಮಾದಿಗ) ಪ್ರಾಧ್ಯಾಪಕರು ಇದಕ್ಕೆ ವಿರೋಧವಾಗಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ತಟಸ್ಥವಾಗಿರುವಂತೆ ಎಡಗೈ ಸಮುದಾಯದ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಸಿದ್ಧಾಂತ ಹೇರುವ ಹುನ್ನಾರ

‘ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌ ಅವರು ಸರಸ್ವತಿ ಪ್ರತಿಮೆ ದುರಸ್ತಿಗೆ ವೈಯಕ್ತಿಕವಾಗಿ ಹಣದ ನೆರವು ನೀಡಿದ್ದಾರೆ. ಇನ್ನೂ ಎರಡು ಪ್ರತಿಮೆಗಳ ನಿರ್ಮಾಣಕ್ಕೂ ಆಸಕ್ತಿ ತೋರಿದ್ದಾರೆ. ಹೋಮ–ಹವನ ನಡೆಸುವ ತಯಾರಿ ಕೂಡ ನಡೆಸಿದ್ದರು. ಈ ಮೂಲಕ ಸಿದ್ಧಾಂತವೊಂದನ್ನು ಹೇರುವ ವ್ಯವಸ್ಥಿತ ಹುನ್ನಾರ ನಡೆಸಿದ್ದಾರೆ. 800ಕೆ.ಜಿ ತೂಕದ ಬುದ್ಧನ ಪ್ರತಿಮೆಯನ್ನು ಕ್ರೇನ್‌ ಮೂಲಕ ಅದೂ ಬೆಳಿಗ್ಗೆ ಸಮಯದಲ್ಲಿ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಕುಲಪತಿ ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕಿತ್ತು. ಅವರ ನಿಷ್ಕ್ರಿಯತೆ, ಆಡಳಿತ ವೈಫಲವೇ ಇದಕ್ಕೆ ಕಾರಣ’ ಎನ್ನುವುದು ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರ ಆರೋಪ.


ಕುಲಪತಿ ಚೇಂಬರ್‌ನಲ್ಲಿ ಇಟ್ಟಿರುವ ಸರಸ್ವತಿ ಪ್ರತಿಮೆಗೆ ಹೊದಿಕೆ 

‘ವಿಶ್ವವಿದ್ಯಾಲಯದಂತಹ ಪ್ರಬುದ್ಧ ಮಟ್ಟದ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಮೆಗಳ ಅಗತ್ಯವಿದೆಯೇ? ಯಾವುದೇ ಧರ್ಮವನ್ನು ಪ್ರತಿನಿಧಿಸುವ ಮೂರ್ತಿಗಳು, ಚಿತ್ರಗಳು, ಜಯಂತಿ, ಪುಣ್ಯತಿಥಿಯಂಥ ಆಚರಣೆಗಳು ಬೇಕೇ? ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಜಾತ್ಯತೀತ, ಧರ್ಮನಿರಪೇಕ್ಷವಾಗಿರಬೇಕು. ಸಂವಿಧಾನದ ಆಶಯವೂ ಇದೇ ಆಗಿದೆ’ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಸಹಾಯಕ ಪ್ರಾಧ್ಯಾಪಕ ಡಾ.ಪ್ರದೀಪ್‌ ರಮಾವತ್‌ ಪ್ರತಿಪಾದಿಸುತ್ತಾರೆ.

ಪ್ರತಿಮೆಗಳ ಸ್ಥಾಪನೆಗೆ ಮಾದರಿ ನಿಯಮಾವಳಿ

‌‘ವಿದ್ಯಾರ್ಥಿಗಳು ಬುದ್ಧನ ಪ್ರತಿಮೆ ಸ್ಥಾಪನೆಗೂ ಮೊದಲು ಅನುಮತಿ ಪಡೆದಿರಲಿಲ್ಲ. ಸದ್ಯಕ್ಕೆ ವಿವಾದ ತಣ್ಣಗಾಗಿದೆ. ವಿವಾದದ ಕೇಂದ್ರ ಬಿಂದು ಸರಸ್ವತಿ ಪ್ರತಿಮೆ, ಈಗಾಗಲೇ ಸ್ಥಾಪನೆಗೊಂಡಿರುವ ವಿಶ್ವೇಶ್ವರಯ್ಯ, ವಿವೇಕಾನಂದ ಪ್ರತಿಮೆಗಳಿಗೂ ‌ಯಾವುದೇ ಅನುಮತಿ, ನಿಯಾಮವಳಿ ರೂಪಿಸಿಲ್ಲ. ಈಗಷ್ಟೇ ಮಾದರಿ ನಿಯಾಮಾವಳಿ ರೂಪಿಸಬೇಕಿದೆ. ಈಗಾಗಲೇ ಬಸವಣ್ಣ, ಕನಕದಾಸರು, ನಾಡಪ್ರಭು ಕಂಪೇಗೌಡ, ಸಂತಸೇವಾಲಾಲ್‌, ವಾಲ್ಮೀಕಿ, ಸಂತ ಶಿಶುನಾಳ ಶರೀಫ ಅವರ ಪ್ರತಿಮೆಗಳ ಸ್ಥಾಪನೆಗೂ ಅವಕಾಶ ನೀಡಬೇಕೆಂಬ ಕೂಗು ಎದ್ದಿದೆ. ಕೆಲ ಮಹಾತ್ಮರ ಅಧ್ಯಯನ ಪೀಠಗಳು ತೆರೆಯಲಾಗಿದೆ. ಈ ಬಗ್ಗೆ ಅಧ್ಯಯನ ನಡೆಯಲಿ. ಆದರೆ, ಪ್ರತಿಮೆಗಳ ನಿರ್ಮಾಣ ಸಲ್ಲದು’ 

– ಪ್ರೊ. ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ

ಸಿಂಡಿಕೇಟ್‌ ಉಪಸಮಿತಿಯಲ್ಲಿ ತೀರ್ಮಾನ

‘ನಮ್ಮ ಪರಂಪರೆಯಲ್ಲಿ ಬುದ್ಧ ಮತ್ತು ಸರಸ್ವತಿ ಜ್ಞಾನದ ಪ್ರತೀಕ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಎರಡು ಪ್ರತಿಮೆಗಳ ಸ್ಥಾಪನೆಗೆ ಶಿಫಾರಸು ಮಾಡಲಾಗಿದೆ. ಎಲ್ಲ ಧರ್ಮ, ಜಾತಿ, ಪಂಥಗಳಿಗೂ ಮೀರಿದ ಬುದ್ಧ ಜಗತ್ತೀಗೆ ಸಮಾನತೆ ಸಾರಿದ ಮಹನೀಯ, ಅರಿವಿನ ಬೆಳಕು. ಸರಸ್ವತಿ ಕೂಡ ಧಾರ್ಮಿಕ ಚೌಕಟ್ಟಿನೊಳಗೆ ಪೂಜ್ಯನೀಯ. ಸಿಂಡಿಕೇಟ್‌ ಉಪಸಮಿತಿ ರಚನೆಯಾಗಿದ್ದು ಈ ವಿವಾದ ಯಾರಿಗೂ ಘಾಸಿಯಾಗದಂತೆ ಸೌಹಾರ್ದಯುತವಾಗಿ ಬಗೆಹರಿಯಲಿದೆ.’

– ಬಿ.ಶಿವಣ್ಣ, ಸಿಂಡಿಕೇಟ್‌ ಸದಸ್ಯ

ವಿನಾಕಾರಣ ವಿವಾದ

‘ಪ್ರತಿಮೆಗಳು ನಮಗೆ ಊಟ – ಉದ್ಯೋಗ ನೀಡುತ್ತವೆಯೇ ? ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಿನಾಕಾರಣ ವಿವಾದ ಸೃಷ್ಟಿಸಲಾಗಿದೆ. ಇದರಿಂದ ಕಿಂಚಿತ್ತೂ ಪ್ರಯೋಜನವಿಲ್ಲ. ದೇವರು, ಮಹಾತ್ಮರು ನಮ್ಮ ಕೇರಿಗಳಲ್ಲಿ ಇರಲಿ. ನಮಗೆ ಸ್ಫೂರ್ತಿ ತುಂಬಲಿ. ಆದರೆ,ವಿವಾದಕ್ಕೆ ಸಿಲುಕಿಸುವುದು ಬೇಡ’.

- ನವೀನ್‌ ಸರ್ಜಾಪುರ, ಸ್ನಾತಕೋತ್ತರ ವಿದ್ಯಾರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು