ಶನಿವಾರ, ಅಕ್ಟೋಬರ್ 19, 2019
27 °C

ನೆರಳುಂಟು, ನೀರು, ಶೌಚಾಲಯವಿಲ್ಲ: ಇದು ಬಳ್ಳಾರಿಯ ಡಿ.ಸಿ. ಕಚೇರಿ!

Published:
Updated:

ಬಳ್ಳಾರಿ: ಬ್ರಿಟಿಷ್‌ ಆಡಳಿತದ ಚರಿತ್ರೆಯ ಪ್ರಮುಖ ದಾಖಲೆಗಳುಳ್ಳ ಇದು ಜಿಲ್ಲಾ ಆಡಳಿತದ ಕೇಂದ್ರ ಸ್ಥಾನ. ಜಿಲ್ಲಾಧಿಕಾರಿ ಕಚೇರಿ. ಮದ್ರಾಸ್‌ ಪ್ರೆಸಿಡೆನ್ಸಿ ಆಡಳಿತದ ಕಾಲದಲ್ಲಿ ಈ ಜಿಲ್ಲೆಗೆ ಸರ್‌ ಥಾಮಸ್‌ ಮನ್ರೋ ಮೊದಲ ಡಿಸ್ಟ್ರಿಕ್ಟ್‌ ಕಲೆಕ್ಟರ್‌ ಆಗಿ ಆಡಳಿತ ನಡೆಸಿದ್ದರು.

ಇಂಥ ಭವ್ಯ ಇತಿಹಾಸವುಳ್ಳ ಜಿಲ್ಲೆಗೆ ಇತ್ತೀಚೆಗೆ ಸೇರ್ಪಡೆಗೊಂಡ ಹರಪನಹಳ್ಳಿ ಸೇರಿದಂತೆ 11 ತಾಲ್ಲೂಕುಗಳ ಜನ ಪ್ರಮುಖ ಕೆಲಸಗಳಿಗಾಗಿ ಇಲ್ಲಿಗೇ ಬರಬೇಕು. ಬರುವಾಗ ಕುಡಿಯುವ ನೀರು ಮತ್ತು ಶೌಚಾಲಯವನ್ನು ನಿರೀಕ್ಷಿಸುವಂತಿಲ್ಲ. ಬರುವವರು ಬಾಟಲಿ ನೀರು ತರಬೇಕು. ಪೇ ಅಂಡ್‌ ಯೂಸ್‌ ಶೌಚಾಲಯಕ್ಕೆ ಹೋಗಿಯೇ ಬರಬೇಕು. ಅಷ್ಟು ತಾಳ್ಮೆ ಇಲ್ಲದ ಮಂದಿ ಗೋಡೆ ಮರೆಯ ಜಾಗವನ್ನೇ ಹುಡುಕುತ್ತಾರೆ. ಇಂಥ ಸನ್ನಿವೇಶಗಳಲ್ಲಿ ಮಹಿಳೆಯರ ಕಷ್ಟೇ ಹೇಳತೀರದು.

ಇತ್ತೀಚೆಗಷ್ಟೇ ಇಲ್ಲಿ ಕಾಂಕ್ರಿಟ್‌ ಬೆಂಚ್‌ಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಕುಳಿತು ಸುಧಾರಿಸಿಕೊಳ್ಳಬಹುದು. ಸುಸ್ತಾದರೆ ಕೆಲ ನಿಮಿಷ ಮಲಗಲೂಬಹುದು. ಯಾರೂ ತೊಂದರೆ ಕೊಡುವುದಿಲ್ಲ. ಅಂದಹಾಗೆ, ಈ ಸೌಕರ್ಯ ಇಷ್ಟೂ ವರ್ಷ ಇಲ್ಲಿ ಇರಲೇ ಇಲ್ಲ. ಅಂದ ಹಾಗೆ ಇಲ್ಲಿ ನೂರಾರು ಮರಗಿಡಗಳಿವೆ. ಹೀಗಾಗಿ ನೆರಳಿಗೆ ಕೊರತೆ ಇಲ್ಲ. ಉದ್ಯಾನಗಳಿದ್ದರೂ ನಿರ್ವಹಣೆ ಇಲ್ಲ.

ಜಿಲ್ಲಾಧಿಕಾರಿ ಕಚೇರಿಗೆ ಈ ಹಿಂದಿನ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್‌ ಅವರ ಅವಧಿಯಲ್ಲಿ ಭದ್ರವಾದ ಎತ್ತರದ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಕಚೇರಿಯ ಕಲ್ಲು ಕಟ್ಟಡಗಳಿಗೆ ಪಾಲಿಷ್‌ ಮಾಡಲಾಗಿದೆ. ಹೊಸ ಫಲಕಗಳನ್ನೂವನ್ನೂ ಅಳವಡಿಸಲಾಗಿದೆ. ಇಷ್ಟೊಂದು ಹೊಳಪು–ಭದ್ರತೆಯುಳ್ಳ ಕಚೇರಿಯೊಳಗೆ ಎಲ್ಲಿಯೂ ಸಾಮೂಹಿಕ ಶೌಚಾಲಯವಿಲ್ಲ. ಕುಡಿಯುವ ನೀರಿನ ಸೌಕರ್ಯವೂ ಇಲ್ಲ. ಜನರ ಪರದಾಟವೂ ನಿಂತಿಲ್ಲ.

ಈ ಕಚೇರಿಯಲ್ಲಿ ಸದ್ಯ ಉಪವಿಭಾಗಾಧಿಕಾರಿ, ಜಿಲ್ಲಾ ಗ್ರಾಹಕರ ವೇದಿಕೆ, ವಾರ್ತಾ ಇಲಾಖೆ, ಆಹಾರ ಇಲಾಖೆ, ಸಣ್ಣ ಉಳಿತಾಯ ಇಲಾಖೆ, ಭೂಮಾಪನ ಇಲಾಖೆ, ಜಿಲ್ಲಾ ಖಜಾನೆ, ಅಂಕಿ ಅಂಶಗಳ ಇಲಾಖೆ, ನೆಹರು ಯುವ ಕೇಂದ್ರ, ಸರ್ಕಾರಿ ನೌಕರರ ಸಂಘದ ಕಚೇರಿ, ಪತ್ರಕರ್ತರ ಭವನ, ಸ್ಪಂದನ ವಿಭಾಗ, ಸಂಸದರ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿಗಳಿವೆ. ದಿನವೂ ನೂರಾರು ಮಂದಿ ಈ ಕಚೇರಿಗಳಿಗೆ ಭೇಟಿ ಕೊಡುತ್ತಾರೆ.

ನೀರಿಲ್ಲ: ಜೈನ ಸಮುದಾಯವರು ಹಲವು ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿದ್ದ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ. ಕಚೇರಿ ಒಳಗೆ ಮತ್ತು ಹೊರಗೆ ನಿಂತವರಿಬ್ಬರಿಗೂ ಅನುಕೂಲವಾಗುವಂತೆ ನಲ್ಲಿಗಳನ್ನು ಅಳವಡಿಸಲಾಗಿತ್ತು. ಅಲ್ಲಿಯೇ ನೀರಿನ ತೊಟ್ಟಿಯೂ ಇದೆ. ಇವೆಲ್ಲವು ಬಳಕೆಯಾಗದೇ ದೂಳು ಹಿಡಿದಿವೆ.

ಜಿಲ್ಲಾ ಖಜಾನೆ ಹಿಂಭಾಗದಲ್ಲಿ ಶೌಚಾಲಯವಿದ್ದರೂ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಶೌಚಾಲಯದ ಆಸುಪಾಸಿನ ಕಚೇರಿಗಳ ಗೋಡೆಗಳಿಗೆ ಆತುಕೊಂಡೇ ಜನ ಮೂತ್ರವಿಸರ್ಜಿಸುವುದು ಸಾಮಾನ್ಯ ದೃಶ್ಯ. ಜಿಲ್ಲಾಧಿಕಾರಿ ಕಚೇರಿಯ ಹಲವು ಮೂಲೆಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತದೆ. ಕಸ ವಿಲೇವಾರಿ ಕೂಡ ಇಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ.

ಮಳೆ ಬಂದರೆ ಕೆರೆ: ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ಬಂದರೆ ನೀರು ನಿಲ್ಲುವಂತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ನೀರು ನಿಲ್ಲುವುದರಿಂದ ಜನರಿಗೆ ನಡೆದಾಡುವುದು ಕಷ್ಟವಾಗುತ್ತದೆ. ಉಪವಿಭಾಗಾಧಿಕಾರಿ ಕಚೇರಿ ಮುಂಭಾ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಈ ಸಮಸ್ಯೆ ಹೆಚ್ಚು. ಹಿಂದಿನ ವರ್ಷವಷ್ಟೇ ಆವರಣದ ಒಳ ರಸ್ತೆಗಳಿಗೆ ಡಾಂಬರಿನ ಭಾಗ್ಯ ಬಂದಿದೆ. ಅದಕ್ಕೂ ಮುನ್ನ ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಸಂಚರಿಸುವುದು ಕಡುಕಷ್ಟವಾಗಿತ್ತು.

ಹೊಸ ಕಚೇರಿ ನಿರ್ಮಾಣ ಆರಂಭ

ನೂರಾರು ವರ್ಷಗಳ ಇತಿಹಾಸವುಳ್ಳ ಕಚೇರಿಯಲ್ಲಿ ಸೌಕರ್ಯಗಳ ಕೊರತೆಗಳಿರುವಾಗಲೇ, ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಕಾರ್ಯವೂ ಆರಂಭವಾಗಿದೆ. ₹23 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, 2020 ಅಕ್ಟೋಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಶುದ್ಧ ನೀರಿನ ಘಟಕ ಶೀಘ್ರ: ಡಿ.ಸಿ.

‘ದೂರದ ಊರುಗಳಿಂದ ಬರುವವರಿಗೆ ನೀರು ಮತ್ತು ಶೌಚಾಲಯ ಸೌಕರ್ಯ ಅತ್ಯಗತ್ಯ. ನಮ್ಮ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರು ಮತ್ತು ಶೌಚಾಲಯ ಕೊರತೆಯ ಸಮಸ್ಯೆ ನೀಗಿಸುವ ಪ್ರಯತ್ನ ನಡೆದಿದೆ. ಪಾಲಿಕೆಯ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗುವುದು. ಬಳಕೆಯಾಗದ ಶೌಚಾಲಯವನ್ನು ಶೀಘ್ರ ನವೀಕರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದ್ದಾರೆ.

**

ಡಿ.ಸಿ.ಕಚೇರಿಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾರ್ಪಡಿಸಬೇಕು. ಮೊದಲು ಕುಡಿಯುವ ನೀರು, ಶೌಚಾಲಯ ಸೌಕರ್ಯವನ್ನು ಕಲ್ಪಿಸಬೇಕು
–ವೆಂಕಟೇಶ್‌, ವೈ.ಕಗ್ಗಲ್ ನಿವಾಸಿ

**

ಬೆಂಚ್‌ಗಳನ್ನು ಅಳವಡಿಸಿ ಎಂದು ಹಿಂದಿನ ಜಿಲ್ಲಾಧಿಕಾರಿಗೆ ನೀಡಿದ್ದ ಮನವಿ ಈಗಿನ ಜಿಲ್ಲಾಧಿಕಾರಿ ಅವಧಿಯಲ್ಲಿ ಈಡೇರಿದೆ. ಮಳೆ ಬಂದರೆ ಇಲ್ಲಿ ಓಡಾಡಲು ಆಗುವುದಿಲ್ಲ. ಅದನ್ನು ಸರಿಪಡಿಸಬೇಕು.
–ಈರಣ್ಣ, ವಿಶ್ವನಾಥಪುರ ನಿವಾಸಿ

Post Comments (+)