ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಪ್ರತಿಷ್ಠಿತ ಸಮಾಜ

ಬಂಟರ ಸಂಘದ ವಾರ್ಷಿಕ ಸ್ನೇಹ ಕೂಟ ಸಮಾರಂಭದಲ್ಲಿ ಶಾಸಕ ರಘುಪತಿ ಭಟ್ ಅಭಿಮತ
Last Updated 20 ಜನವರಿ 2019, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಿನಿಮಾ, ರಾಜಕೀಯ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬಂಟ ಸಮಾಜ ತನ್ನದೇ ಆದ ಛಾಪು ಮೂಡಿಸಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಹುಬ್ಬಳ್ಳಿ– ಧಾರವಾಡ ಬಂಟರ ಸಂಘ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ, ದೇಶ, ವಿದೇಶಗಳಲ್ಲಿರುವ ಬಂಟ ಸಮಾಜ ಮಾತೃಭೂಮಿಯ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ) ಬಗ್ಗೆ ಈಗಲೂ ಅಪಾರ ಪ್ರೀತಿಯನ್ನು ಹೊಂದಿದೆ. ಹುಟ್ಟೂರಿನ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸುವ ಮೂಲಕ ಅಭಿಮಾನ ತೋರುತ್ತಿದೆ. ಸ್ನೇಹ– ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರು ಈ ಸಮಾಜ ಎಂದು ಬಣ್ಣಿಸಿದರು.

ಆರ್ಥಿಕವಾಗಿ ಸಬಲವಾಗಿರುವ ಸಮಾಜ ಎಂದು ಗುರುತಿಸಲಾಗುತ್ತದೆ. ಆದರೆ, ವಿದ್ಯಾಭ್ಯಾಸಕ್ಕೆ ಸಹ ಕಷ್ಟಪಡುವಂತಹ ಬಡವರು ಈ ಸಮಾಜದಲ್ಲಿ ಈಗಲೂ ಇದ್ದಾರೆ. ಈ ವಿಷಯವನ್ನು ಪರಿಗಣಿಸಿ ಸಂಘದ ಮೂಲಕ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಸಂಘಟನೆಯ ಬಲಿಷ್ಠವಾಗಿದ್ದಾಗ ಮಾತ್ರ ದೊಡ್ಡ ಶಕ್ತಿ ಬರುತ್ತದೆ. ಈ ಸಂಘಟನೆಯನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸಿ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪ ಕುಲ ಸಚಿವ ಡಾ. ಬಿ. ವಸಂತ ಶೆಟ್ಟಿ ಮಾತನಾಡಿ, ಸುಮಾರು 48 ವರ್ಷಗಳಿಂದ ಹುಬ್ಬಳ್ಳಿ– ಧಾರವಾಡ ಬಂಟ ಸಮಾಜಕ್ಕೆ ಚುನಾವಣೆಯೇ ನಡೆದಿಲ್ಲ, ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದೊಂದು ಮಾದರಿ ಮತ್ತು ಆದರ್ಶ. ಈ ಸಮಾಜ ಮೌಲ್ಯಗಳ ಆಧಾರದ ಮೇಲೆ ನಿಂತಿದೆ ಎಂದರು.

ಜೀವನದಲ್ಲಿ ಎಲ್ಲವನ್ನೂ ಮರಳಿ ತರಬಹುದು ಆದರೆ ಸಮಯ ಕಳೆದು ಹೋದರೆ ಮತ್ತೆ ಸಿಗದು. ಅಂತಹ ಸಮಯಕ್ಕೆ ಯಾರು ಬೆಲೆ ನೀಡುತ್ತಾರೋ ಅವರು ಸಾಧನೆ ಮಾಡುತ್ತಾರೆ. ಸಮಾಜದ ಎಲ್ಲರಿಗೂ ಗುಣಾತ್ಮ ಶಿಕ್ಷಣ ಸಿಕ್ಕಾಗ ಮಾತ್ರ ಬದಲಾವಣೆ ತರಬಹುದು. ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಹೇಳಿಕೊಡುವ ಮೂಲಕ ಉತ್ತಮ ನಾಗರಿಕನಾಗಿ ರೂಪಿಸಬೇಕು ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹೋಟೆಲ್ ಉದ್ಯಮಿ ಮಹೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕ ಸಂಚಿಕೆ ‘ಬಂಟ ಧ್ವನಿ’ ಬಿಡುಗಡೆ ಮಾಡಲಾಯಿತು.

ನಿವೃತ್ತ ರಾಯಭಾರಿ ಬಿ. ಬಾಲಕೃಷ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಡಾ. ಆರ್‌.ಎನ್. ಶೆಟ್ಟಿ, ಕಾರ್ಯಾಧ್ಯಕ್ಷ ಎಚ್‌. ದಿನೇಶ್ ಶೆಟ್ಟಿ, ಉಪಾಧ್ಯಕ್ಷರಾದ ಎಸ್. ಸುಭಾಶ್ಚಂದ್ರ ಶೆಟ್ಟಿ, ಕೆ. ಸುಧಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ಕೆ. ಸುರೇಶ ಶೆಟ್ಟಿ, ಖಜಾಂಚಿ ಬೇಳೂರು ಭುಜಂಗ್ ಶೆಟ್ಟಿ, ಸಹ ಕಾರ್ಯದರ್ಶಿ ಮಂಜುರಾಮ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT