ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮನ್ವಯದಿಂದ ಕಾರ್ಯ ನಿರ್ವಹಿಸಿ; ಸಂತ್ರಸ್ತರಿಗೆ ನೆರವು ಒದಗಿಸಿ’

ಮೈಸೂರು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ
Last Updated 16 ಆಗಸ್ಟ್ 2019, 10:26 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಚುರುಕಾಗಿ ಕರ್ತವ್ಯ ನಿರ್ವಹಿಸಿ. ಸಂತ್ರಸ್ತರಿಗೆ ನೆರವು ಒದಗಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.

ಕಡಕೊಳ ಗ್ರಾಮದಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯಲ್ಲಿ ಸೋಮವಾರ ರಾತ್ರಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ, ಜಿಲ್ಲೆಯ ಪ್ರವಾಹದ ಚಿತ್ರಣ ಪಡೆದುಕೊಂಡರು.

‘ನಿವೇಶನವಿಲ್ಲದ ನಿರಾಶ್ರಿತರಿಗೆ ಮನೆ ನಿರ್ಮಿಸಲು ಸರ್ಕಾರದಿಂದ ನಿವೇಶನ ಒದಗಿಸುವ ಸಂದರ್ಭದಲ್ಲಿ, 30*50 ನಿವೇಶನವನ್ನು ನೀಡಿ. ಸರ್ಕಾರದ ಯೋಜನೆಯಡಿ ಮನೆ ನಿರ್ಮಿಸಿ ಕೊಡಿ. ಕೆಲವು ಸಂತ್ರಸ್ತರ ಮನೆ ಸಂಪೂರ್ಣ ನಾಶವಾಗಿದ್ದು, ಖಾತೆಗಳು ಅವರ ಪೂವರ್ಜರ ಹೆಸರಿನಲ್ಲಿವೆ. ಅವರ ವಂಶವೃಕ್ಷಗಳನ್ನು ಪರಿಶೀಲಿಸಿ, ಸಂತ್ರಸ್ತರ ಹೆಸರಿನಲ್ಲಿ ಖಾತೆ ಮಾಡಿ ಅವರಿಗೆ ಪರಿಹಾರ ಒದಗಿಸಿ’ ಎಂದು ಆದೇಶಿಸಿದರು.

‘ಮನೆ ನಿರ್ಮಾಣವಾಗುವ ತನಕ ಬಾಡಿಗೆ ಮನೆಯಲ್ಲಿ ಇರಲು ನಿರಾಶ್ರಿತರಿಗೆ ತಿಂಗಳಿಗೆ ₹ 5000 ಬಾಡಿಗೆ ನೀಡಬೇಕು. ಪ್ರವಾಹದಲ್ಲಿ ಮೃತರಾದವರ ಕುಟುಂಬಕ್ಕೆ ₹ 5 ಲಕ್ಷ ತಕ್ಷಣದಲ್ಲೇ ಪರಿಹಾರ ನೀಡಬೇಕು. ನಿರಾಶ್ರಿತರ ಕ್ಯಾಂಪ್‍ಗಳಲ್ಲಿ ವಾಸವಿರುವವರಿಗೆ ತಕ್ಷಣ ₹ 10,000 ನೀಡಬೇಕು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕಾಗಿ ₹ 5 ಲಕ್ಷ, ಮನೆಗೆ ಹಾನಿಯಾಗಿದ್ದಲ್ಲಿ ರಿಪೇರಿಗಾಗಿ ₹ 1 ಲಕ್ಷವನ್ನು ಯಾವುದೇ ತಾರತಮ್ಯ ಮಾಡದೇ ವಿತರಿಸಿ’ ಎಂದು ಅಧಿಕಾರಿ ಸಮೂಹಕ್ಕೆ ಸೂಚಿಸಿದರು.

‘ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಹ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹ 12 ಕೋಟಿ ಅನುದಾನ ಲಭ್ಯವಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಬಿಎಸ್‌ವೈ ಹೇಳಿದರು.

ಸಂಸದ ಶ್ರೀನಿವಾಸ್ ಪ್ರಸಾದ್ ಮಾತನಾಡಿ ‘ಪರಿಹಾರ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ಯಾವುದೇ ದೂರು ಬಾರದ ರೀತಿ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು. ರಾಜ್ಯದ ಸಂಸದರು ತಮ್ಮ ನಿಧಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದು ಉತ್ತಮ’ ಎಂದರು.

ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್‌.ಎ.ರಾಮ್‍ದಾಸ್, ಬಿ.ಹರ್ಷವರ್ಧನ್, ಎಲ್.ನಾಗೇಂದ್ರ, ಡಾ.ಯತೀಂದ್ರ, ಅನಿಲ್ ಕುಮಾರ್ ಎಸ್., ಅಶ್ವಿನ್ ಕುಮಾರ್, ಮಹದೇವ್, ನಿರಂಜನ್, ವಿಧಾನ ಪರಿಷತ್ ಸದಸ್ಯರಾದ ಆರ್.ಧರ್ಮಸೇನ, ಸಂದೇಶ್‌ ನಾಗರಾಜು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT