ಮಂಗಳವಾರ, ನವೆಂಬರ್ 19, 2019
23 °C
ಮನೆಮುರುಕರ್‍ಯಾರು ಸಿ.ಟಿ ರವಿಗೆ ಕಲಾವಿದರ ಪ್ರಶ್ನೆ

ಸಚಿವರ ಹೇಳಿಕೆಗೆ ಸಾಂಸ್ಕೃತಿಕ ವಲಯದಲ್ಲಿ ಕಿಡಿ

Published:
Updated:
Prajavani

ಬೆಂಗಳೂರು: ‘ವಿವಿಧ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಮನೆಹಾಳು ಜನರನ್ನು ದೂರ ಇಟ್ಟಿದ್ದೇವೆ’ ಎಂಬ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರು ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ. ’ಮನೆಮುರುಕರು ಯಾರು? ಯಾವ ಸಾಹಿತಿ, ಕಲಾವಿದರು ಯಾರ ಮನೆಯನ್ನು ಮುರಿದಿದ್ದಾರೆ? ಇಲ್ಲಿವರೆಗೂ ಅಕಾಡೆಮಿಗಳು, ಪ್ರಾಧಿಕಾರಿಗಳಿಗೆ ಆಯ್ಕೆಯಾದವರಲ್ಲಿ ಯಾರು ಸಾಂಸ್ಕೃತಿಕ ಕ್ಷೇತ್ರ ಹಾಳು ಮಾಡಿದ್ದಾರೆ? ಕದಡುವ, ಒಡೆಯುವ ಮನಸ್ಥಿತಿಯನ್ನು ಯಾರು ಹೊಂದಿದ್ದಾರೆ’ ಎಂದು ಸಾಮಾಜಿಕ ಜಾಲದಲ್ಲಿ ಪ್ರಶ್ನೆ ಮಾಡಿದ್ದಾರೆ.

‘ಇಲ್ಲಿಯವರೆಗೆ ಯಾವೊಬ್ಬ ಸಾಹಿತಿ, ಕಲಾವಿದರೂ ವಿಧಾನಸೌಧದ ಮೆಟ್ಟಿಲನ್ನು ಹತ್ತಿ ಅಧ್ಯಕ್ಷ ಹುದ್ದೆ ಪಡೆದಿಲ್ಲ. ರಾಜಕಾರಣಿಗಳ ಮುಂದೆ ನಿಂತು ಹಲ್ಲು ಗಿಂಜಿಲ್ಲ. ಒಮ್ಮೆ ಸರ್ಕಾರ ನೇಮಿಸಿದ ಮೇಲೆ ಬೇರೆ ಸರ್ಕಾರ ಬಂದರೂ ಅಧ್ಯಕ್ಷ ಹುದ್ದೆಯಲ್ಲಿದ್ದವರನ್ನು ಕೆಳಗಿಳಿಸಲು ಹಿಂದೇಟು ಹಾಕುತಿತ್ತು. ಪ್ರತಿಯೊಬ್ಬರೂ ಅರ್ಹತೆ ಹೊಂದಿದ್ದವರೇ ಆಗಿದ್ದು, ಸಚಿವರು ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಸದಸ್ಯ ಶಶಿಕಾಂತ ಯಡಹಳ್ಳಿ ಒತ್ತಾಯಿಸಿದ್ದಾರೆ.

‘ಮಂತ್ರಿಗಿರಿ ಸಿಕ್ಕಿತೆಂದು ಬಾಯಿಗೆ ಬಂದ ಹಾಗೆ ಮಾತನಾಡುವುದು ಯಾವ ಸಂಸ್ಕೃತಿ. ಕಲಾವಿದರು, ಸಾಹಿತಿಗಳನ್ನು ಗೌರವಿಸುವ ಮೂಲಕ ತಮ್ಮ ಸ್ಥಾನಕ್ಕೆ ಶೋಭೆ ತರುವಂತಹ ಕೆಲಸ ಮಾಡಿ’ ಎಂದು ಕಲಾವಿದರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

‘ಇದು ಆಘಾತಕಾರಿ ಮಾತುಗಳು. ಕಲಾವಿದರು ಇದನ್ನು ಪ್ರತಿಭಟಿಸಬೇಕು. ಸಂಸ್ಕೃತಿ ಸಚಿವರ ಮಾತು ಸುಸಂಸ್ಕೃತವಾಗಿರಲಿ’ ಎಂಬ ಸಂದೇಶಗಳು ಹರಿದಾಡಿವೆ.

ಪ್ರತಿಕ್ರಿಯಿಸಿ (+)