ಕಬ್ಬಿಗೆ ಹೆಚ್ಚುವರಿ ಹಣ ಪಾವತಿಸುವಂತೆ ಆಗ್ರಹಿಸಿ 18ಕ್ಕೆ ವಿಧಾನಸೌಧ ಮುತ್ತಿಗೆ

7
ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಭರವಸೆ ನೀಡಿದಂತೆ ಹೆಚ್ಚುವರಿ ಟನ್‌ಗೆ ₹350 ಪಾವತಿ ಮಾಡಿಲ್ಲ

ಕಬ್ಬಿಗೆ ಹೆಚ್ಚುವರಿ ಹಣ ಪಾವತಿಸುವಂತೆ ಆಗ್ರಹಿಸಿ 18ಕ್ಕೆ ವಿಧಾನಸೌಧ ಮುತ್ತಿಗೆ

Published:
Updated:

ಹುಬ್ಬಳ್ಳಿ: ಹಳಿಯಾಳದ ಹುಲ್ಲಟ್ಟಿಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಭರವಸೆ ನೀಡಿದಂತೆ ಟನ್‌ ಕಬ್ಬಿಗೆ ಹೆಚ್ಚುವರಿ ₹350 ಪಾವತಿ ಮಾಡಿಲ್ಲ. ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಪ್ರಯೋಜನಾ ಆಗದ ಕಾರಣ ಇದೇ 18ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ‍್ರಧಾನ ಕಾರ್ಯದರ್ಶಿ ಎಸ್‌.ಎನ್. ಬನವಣ್ಣವರ ಹೇಳಿದರು.

ಧಾರವಾಡ ಜಿಲ್ಲೆಯ ಕಲಘಟಗಿ, ಧಾರವಾಡದ ರೈತರು ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ್ದಾರೆ. 2016–17ನೇ ರಲ್ಲಿ ಟನ್‌ಗೆ ₹2,700 ಬೆಲೆ ನಿಗದಿಪಡಿಸಿದ್ದರು. ಆದರೆ ರೇಣುಕಾ ಶುಗರ್ಸ್ ಕಾರ್ಖಾನೆಯವರು ₹350 ಹೆಚ್ಚುವರಿ ನೀಡುವುದಾಗಿ ರೈತರಿಗೆ ಭರವಸೆ ನೀಡಿ, ಕಬ್ಬು ಪೂರೈಸುವಂತೆ ಮನವಿ ಮಾಡಿದರು. ಆ ನಂತರ ಈಐಡಿ ಪ್ಯಾರಿ ಕಾರ್ಖಾನೆಯವರು ಸಹ ₹350 ಹೆಚ್ಚುವರಿ ಕೊಡುವ ಭರವಸೆ ನೀಡಿದರು. ಅದನ್ನು ನಂಬಿ ಕಬ್ಬು ಪೂರೈಕೆ ಮಾಡಲಾಯಿತು. ಆದರೆ ಹೆಚ್ಚುವರಿ ಹಣವನ್ನು ಈ ವರೆಗೆ ನೀಡಿಲ್ಲ. ಒಟ್ಟು 5 ಸಾವಿರ ರೈತರಿಗೆ ₹20 ಕೋಟಿ ಬಾಕಿ ಬರಬೇಕಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಣ ನೀಡುವಂತೆ ಹಲವು ಬಾರಿ ಹೋರಾಟ ನಡೆಸಲಾಯಿತು. ಉತ್ತರಕನ್ನಡ ಜಿಲ್ಲಾಧಿಕಾರಿ ಅವರು ರೈತರು ಹಾಗೂ ಕಾರ್ಖಾನೆಯ ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚುವರಿ ಹಣ ಪಾವತಿ ಮಾಡುವುದಾಗಿ ಆಗ ಅವರು ಭರವಸೆ ನೀಡಿದ್ದರು. ಆದರೆ ಈ ವರೆಗೆ ನೀಡಿಲ್ಲ. ಹಣಪಾವತಿ ಮಾಡಿದರೆ ಕಾರ್ಖಾನೆಗೆ ಹೊರೆಯಾಗಲಿದೆ ಎಂಬುದು ಅವರ ವಾದವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನಾ ಆಗಿಲ್ಲ. ಇದರಿಂದಾಗಿ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಸುಮಾರು ನಾಲ್ಕು ಸಾವಿರ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಹಣ ಪಾವತಿ ಆಗುವ ವರೆಗೂ ಹೋರಾಟ ನಿಲ್ಲದು. 17ರಂದು ಸಂಜೆ ರೈಲಿನಲ್ಲಿ ರೈತರು ಹೊರಡಲಿದ್ದಾರೆ ಎಂದರು. ಸಂಘದ ಧಾರವಾಡ ಘಟಕದ ಅಧ್ಯಕ್ಷ ನಿಜಗುಣಿ ಕೆಲಗೇರಿ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !