ಜಾಹೀರಾತು: ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ

7

ಜಾಹೀರಾತು: ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ

Published:
Updated:

ಬೆಂಗಳೂರು: ಒಂದು ವರ್ಷದ ಅವಧಿಗೆ ನಗರ ವ್ಯಾಪ್ತಿಯಲ್ಲಿ ಎಲ್ಲ ಮಾದರಿಯ ಜಾಹೀರಾತು ಪ್ರದರ್ಶನ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿದ್ದ ನಿರ್ಣಯ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಬುಧವಾರವಷ್ಟೇ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಗುರುವಾರ ತಡೆ ನೀಡಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಬಿಬಿಎಂಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಎಂ.ನಂಜುಂಡರೆಡ್ಡಿ, ‘ಜಾಹೀರಾತು ಕಂಪನಿಗಳ ರಿಟ್‌ ಅರ್ಜಿಗಳು ಇನ್ನೂ ವಿಚಾರಣೆಗೆ ಬಾಕಿ ಇವೆ. ಈ ಸಂದರ್ಭದಲ್ಲಿ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶ ಸೂಕ್ತವಾಗಿಲ್ಲ. ಆದ್ದರಿಂದ ಆದೇಶಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ಆದೇಶ ಅರ್ಜಿಗಳ ಮುಖ್ಯ ಮನವಿಗೆ ಪೂರಕವಾಗಿಲ್ಲ’ ಎಂಬ ಅಭಿಪ್ರಾಯದೊಂದಿಗೆ ತಡೆ ನೀಡಿತು.

ಖಡಕ್‌ ತಾಕೀತು: ‘ಸಾರ್ವಜನಿಕ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ, ಸೌಂದರ್ಯ ವಿರೂಪಗೊಳಿಸುವ ಕೆಲಸದಲ್ಲಿ ತೊಡಗಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಹಾಗೂ ತಪ್ಪಿತಸ್ಥರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಖಡಕ್‌ ತಾಕೀತು ಮಾಡಿದೆ.

ಅನಧಿಕೃತ ಜಾಹೀರಾತುಗಳ ಹಾವಳಿ ನಿಯಂತ್ರಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತು ಬಿಬಿಎಂಪಿಗೆ ಗುರುವಾರ ಮೌಖಿಕ ಸೂಚನೆ ನೀಡಿದೆ.

ಇದೇ ವೇಳೆ ಬಿಬಿಎಂಪಿ ಪರ ವಕೀಲರು, ‘ಜಾಹೀರಾತು ಬೈ–ಲಾ ಕರಡನ್ನು ಅಂತಿಮಗೊಳಿಸಿ ಶುಕ್ರವಾರ (ಫೆ.8) ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅದರ ಆಧಾರದ ಮೇಲೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ’ ಎಂದು ವಿವರಿಸಿದರು. 

ನಗರ ಪೊಲೀಸ್ ಇಲಾಖೆ ಪ್ರಮಾಣ ಪತ್ರ ಸಲ್ಲಿಸಿ, ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ 2018ರ ಡಿ.8ರಿಂದ 2019ರ ಫೆ.5ರವರೆಗೆ ದಾಖಲಿಸಿದ ಪ್ರಕರಣಗಳ ಕುರಿತು ಮಾಹಿತಿ ನೀಡಿತು.

ಜಾಹೀರಾತು ಕಂಪನಿಗಳ ಪರ ವಕೀಲರು, ‘ಬಿಬಿಎಂಪಿ ಜಾಹೀರಾತು ಅಳವಡಿಕೆ ನಿಷೇದಿಸಿರುವ ಕಾರಣ ಇದನ್ನು ನೆಚ್ಚಿಕೊಂಡ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಅವರ ಜೀವನಾಧಾರದ ಹಿತದೃಷ್ಟಿಯಿಂದ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, ‘ಸರ್ಕಾರ ಜಾಹೀರಾತು ಬೈ–ಲಾವನ್ನು ಅಂತಿಮಗೊಳಿಸುವರೆಗೂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !