ಟೆಂಡರ್ ರದ್ದುಗೊಳಿಸುವಂತೆ ಮನವಿ

ಮಂಗಳವಾರ, ಏಪ್ರಿಲ್ 23, 2019
29 °C
₹1.50 ಕೋಟಿ ಬಾಕಿ ಉಳಿಸಿಕೊಂಡ ಪಾಲಿಕೆ: ಇಂದಿರಾ ಕ್ಯಾಂಟೀನ್ ಬಂದ್‌ ಆಗುವ ಸಾಧ್ಯತೆ?

ಟೆಂಡರ್ ರದ್ದುಗೊಳಿಸುವಂತೆ ಮನವಿ

Published:
Updated:

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್‌ಗೆ ನೀಡಬೇಕಾದ ಬರೋಬ್ಬರಿ ₹1.50 ಕೋಟಿ ಅನುದಾನವನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಕ್ಯಾಂಟೀನ್ ಆರಂಭವಾಗಿ ಆರು ತಿಂಗಳು ಕಳೆದರೂ ಒಂದೇ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಅನುದಾನಕ್ಕಾಗಿ ಪಾಲಿಕೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿರುವ ಗುತ್ತಿಗೆದಾರರು ‘ಟೆಂಡರ್ ರದ್ದು’ ಎಂದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ– ಧಾರವಾಡ ವ್ಯಾಪ್ತಿಗೆ ಒಟ್ಟು 12 ಕ್ಯಾಂಟೀನ್‌ಗಳು ಮಂಜೂರಾಗಿದ್ದವು. ಅವುಗಳಲ್ಲಿ ಈಗಾಗಲೇ 9 ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಬಾಕಿ ಮೊತ್ತ ಬೃಹದಾಕಾರವಾಗಿ ಬೆಳೆದಿರುವುದರಿಂದ ಟೆಂಡರ್ ಪಡೆದಿರುವ ಮಯೂರ ಆದಿತ್ಯ ರೆಸಾರ್ಟ್ ಸಂಸ್ಥೆಯವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

‘ಕ್ಯಾಂಟೀನ್ ಮುಂದುವರೆಸಲು ಬಾಕಿ ಅನುದಾನ ಬಿಡುಗಡೆ ಅಗತ್ಯವಾಗಿದೆ. ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನಾ ಆಗಿಲ್ಲ. ಆರ್ಥಿಕ ಹೊರೆ ಹೆಚ್ಚಾಗುತ್ತಿರುವುದರಿಂದ ಮುಂದುವರೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಟೆಂಡರ್ ಸ್ಥಗಿತಗೊಳಿಸಿ ಎಂದು ಸಹ ಮನವಿ ಮಾಡಿದ್ದೇನೆ. ಆದರೆ ಕೆಲವು ಅಧಿಕಾರಿಗಳು ಸ್ವಲ್ಪ ಸಮಾಧಾನ ವಹಿಸಿ ಎನ್ನುತ್ತಿದ್ದಾರೆ’ ಎಂದು ಆದಿತ್ಯ ರೆಸಾರ್ಟ್ ಸಂಸ್ಥೆ ಮುಖ್ಯಸ್ಥ ಮನೋಹರ್ ಮೋರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೆಂಡರ್ ಷರತ್ತಿನಂತೆ ₹86 ಲಕ್ಷ ಡೆಪಾಸಿಟ್ ಸಹ ಇಡಲಾಗಿದೆ. ಪ್ರತಿ ದಿನದ ನಿರ್ವಹಣೆಗೆ ಹೆಚ್ಚಿನ ಮೊತ್ತ ಖರ್ಚಾಗುತ್ತದೆ. ಪಾಲಿಕೆ ಹಣ ಬಿಡುಗಡೆ ಮಾಡಿದರೆ ಮಾತ್ರ ಮುಂದುವರೆಯಲು ಸಾಧ್ಯ. ಇಲ್ಲವಾದರೆ ಕಷ್ಟ’ ಎಂದು ಅವರು ತಿಳಿಸಿದರು.

‘ಒಟ್ಟು 12 ಕ್ಯಾಂಟೀನ್‌ಗಳಿಗೆ ಟೆಂಡರ್ ಆಗಿದ್ದು, 9 ಮಾತ್ರ ಆರಂಭವಾಗಿವೆ. 3 ಕ್ಯಾಂಟೀನ್‌ ಆರಂಭವಾಗದಿರುವುದು ಸಹ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆ ಧಾರವಾಡದಲ್ಲಿ ಅಡುಗೆ ಮನೆ ಆರಂಭಿಸದ ಕಾರಣ, ಹುಬ್ಬಳ್ಳಿಯಿಂದಲೇ ಅಲ್ಲಿಗೂ ಪೂರೈಕೆ ಮಾಡಲಾಗುತ್ತಿದ್ದು, ಸಾಗಣೆ ವೆಚ್ಚವನ್ನು ಹೆಚ್ಚುವರಿಯಾಗಿ ಭರಿಸಬೇಕಾಗಿದೆ’ ಎಂದು ಮಯೂರ್ ಆದಿತ್ಯ ರೆಸಾರ್ಟ್‌ ಸಿಇಒ ಹೇಮಲ್ ದೇಸಾಯಿ ತಿಳಿಸಿದರು.

‘ಸದ್ಯ ಶೇ25ರಷ್ಟು ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟು ಹಣ ಬಿಡುಗಡೆಯಾದರೂ ಇನ್ನೂ ಸುಮಾರು ₹1 ಕೋಟಿ ಹಣ ಬಾಕಿಯಾಗಲಿದೆ. ಸಂಪೂರ್ಣ ಹಣ ಬಿಡುಗಡೆಯಾದರೆ ಅನುಕೂಲವಾಗಲಿದೆ’ ಎಂದು ಅವರು ಹೇಳುತ್ತಾರೆ.

‘ಕ್ಯಾಂಟೀನ್ ಆರಂಭವಾದಗಿನಿಂದ ಇಲ್ಲಿಯ ವರೆಗೆ ಗುಣಮಟ್ಟ ಕಾಪಾಡಿಕೊಂಡು ಬರಲಾಗಿದೆ. ಈ ವರೆಗೆ ಒಂದೇ ಒಂದು ದೂರು ಸಹ ಕೇಳಿ ಬಂದಿಲ್ಲ’ ಎಂದು ಅವರು ಹೇಳುತ್ತಾರೆ. ಪಾಲಿಕೆ ವ್ಯಾಪ್ತಿಯ ಕ್ಯಾಂಟೀನ್‌ಗಳಿಗೆ ಶೇ30ರಷ್ಟು ಅನುದಾನ ಕಾರ್ಮಿಕ ಇಲಾಖೆ ನೀಡುತ್ತದೆ, ಉಳಿದದ್ದನ್ನು ಪಾಲಿಕೆಯೇ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !