ಇದು ಆಟೊ ಅಷ್ಟೇ ಅಲ್ಲ...!

7

ಇದು ಆಟೊ ಅಷ್ಟೇ ಅಲ್ಲ...!

Published:
Updated:
ತಮ್ಮ ವಿಶಿಷ್ಟ ವಿನ್ಯಾಸದ ವಾಹನದೊಂದಿಗೆ ಆಟೋರಿಕ್ಷಾ ಚಾಲಕ ನಟರಾಜನ್‌ -ಪ್ರಜಾವಾಣಿ ಚಿತ್ರ- ಕೃಷ್ಣಕುಮಾರ್‌ ಪಿ.ಎಸ್‌.

ಎಷ್ಟೇ ಗಡಿಬಿಡಿ, ಒತ್ತಡ ಅಥವಾ ಆತುರ ಇದ್ದರೂ ಈ ಆಟೊ ಏರುತ್ತಿದ್ದಂತೆಯೇ ಖುಷಿ, ನೆಮ್ಮದಿ ಎನಿಸುತ್ತದೆ. ಚಿಂತೆಯಿಂದ ಮನಸ್ಸನ್ನು ದೂರಮಾಡಿ ಹೊಸ ಆಲೋಚನೆಯತ್ತ ಹೊರಳುವಂತೆ ಮಾಡುತ್ತದೆ. ಹೊಸ ವಿಚಾರ, ಸೌಹಾರ್ದ, ಪ್ರೀತಿ, ವಿಶ್ವಾಸ, ಸ್ನೇಹ, ನಂಬಿಕೆ ಬೆಳೆಸುತ್ತದೆ ಈ ಆಟೊ.

2011ರ ಮಾಡೆಲ್‌ನ ಈ ಆಟೊ ಹೊಸದರಂತೆಯೇ ಇದೆ. ಶುಚಿತ್ವವನ್ನು ಕಾಪಾಡಿಕೊಂಡಿರುವ ಆಟೊ ಒಳಹೋದರೆ, ಇದೇನು ಆಟೊನಾ ಅಥವಾ ಕಾರಾ ಎಂಬ ಪ್ರಶ್ನೆ ಕಾಡದೇ ಬಿಡದು. ತನ್ನ ಬದುಕಿನ ಬಂಡಿ ಸಾಗಲು ನೆರವಾಗಿರುವ ಆಟೊವನ್ನು ವಿಭಿನ್ನ ಮತ್ತು ವಿಶೇಷವಾಗಿ ಅಲಂಕರಿಸಿರುವ ಚಾಲಕ ಈ ಮೂಲಕ ಗ್ರಾಹಕರಿಗೆ ಖುಷಿ, ಸಂತಸ ದೊರೆಯಬೇಕು ಎಂಬ ಕನಸು ಹೊಂದಿದ್ದಾರೆ.

ಬಿಸಿಲಿನ ತಾಪದಿಂದ ಸಾಕಾಗಿ ಈ ಆಟೊ ಪ್ರವೇಶಿಸುವವರಿಗೆ ಅಲ್ಲಿನ ಕುಷನ್‌ ಸೀಟ್‌ ಮೊದಲಿಗೆ ಇಷ್ಟವಾಗುತ್ತದೆ. ಸೀಟಿನ ಸುರಕ್ಷತೆ ಬಗ್ಗೆಯೂ ಕಾಳಜಿ ಹೊಂದಿರುವ ಚಾಲಕ ಸೀಟಿಗೆ ಲ್ಯಾಮಿನೇಷನ್‌ ಕೂಡ ಮಾಡಿಸಿದ್ದಾರೆ. ಇನ್ನು ಇಲ್ಲಿ ತಂಪಾದ ಗಾಳಿ ಬೀಸಲು ಎರಡು ಪುಟಾಣಿ ಫ್ಯಾನ್‌ಗಳೂ ಇವೆ. ಅವು ಗ್ರಾಹಕರ ಕೋಪ, ತಾಪವನ್ನು ತಣ್ಣಗೆ ಮಾಡುತ್ತವೆ. ಅವರ ಏರುಸಿರನ್ನು ನಿಯಂತ್ರಿಸಿ ಸಮಾಧಾನ ಪಡಿಸುತ್ತವೆ.‌

ಟಿ.ವಿ ಇರುವ ಆಟೊ: ಗ್ರಾಹಕರಿಗೆ ಮನರಂಜನೆ ಒದಗಿಸಲು ಆಟೊದಲ್ಲಿ ಟಿ.ವಿ ಸಹ ಇದೆ. ಅದೂ ಒಂದಲ್ಲ, ಎರಡು. ಚಾಲಕನ ಸೀಟಿನ ಹಿಂಬದಿಯಲ್ಲಿ ಅಳವಡಿಸಿರುವ ಟಿ.ವಿ ಗ್ರಾಹಕರ ವೀಕ್ಷಣೆಗಾಗಿದ್ದರೆ, ಚಾಲಕನ ಮುಂಭಾಗ ಅಳವಡಿಸಿರುವ ಪುಟಾಣಿ ಸ್ಕ್ರೀನ್‌ನ ಟಿ.ವಿ ಚಾಲಕನ ವೀಕ್ಷಣೆಗಾಗಿದೆ. ಈ ಟಿ.ವಿಯಲ್ಲಿ ಕನ್ನಡ ಚಲನಚಿತ್ರ ಗೀತೆಗಳು, ಕನ್ನಡ ಸಿನಿಮಾ ಪ್ರಸಾರವಾಗುತ್ತಿರುತ್ತವೆ.

ಖ್ಯಾತನಾಮರ ಭಾವಚಿತ್ರಗಳು: ಆಟೊ ಸುತ್ತ ಒಮ್ಮೆ ಕಣ್ಣಾಯಿಸಿದರೆ ಅಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ. ಅಬ್ದುಲ್‌ ಕಲಾಂ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌, ವರನಟ ಡಾ. ರಾಜ್‌ಕುಮಾರ್‌, ನಟರಾದ ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಷ್‌, ಶಿವರಾಜ್‌ಕುಮಾರ್‌, ಪುನಿತ್‌ ರಾಜ್‌ಕುಮಾರ್‌, ಟೈಗರ್‌ ಪ್ರಭಾಕರ್‌ ಅವರ ಭಾವಚಿತ್ರಗಳಿವೆ. ಜತಗೆ ಕನ್ನಡ ಧ್ವಜವೂ ರಾರಾಜಿಸುತ್ತಿದೆ. ಇವು ಕನ್ನಡ ಪ್ರೇಮದ ಜತೆಗೆ ರಾಷ್ಟ್ರಪ್ರೇಮವನ್ನು ಉಕ್ಕಿಸುತ್ತವೆ.

ಸಹಿಷ್ಣು ಸಾರುವ ಆಟೊ: ಇದರ ಜತೆಗೆ ಈ ಆಟೊ ಸರ್ವಧರ್ಮ ಸಹಿಷ್ಣುವನ್ನೂ ಸಾರುತ್ತಿದೆ. ಆಟೊದಲ್ಲಿ ಮಸೀದಿ, ಏಸು ಕ್ರಿಸ್ತ, ವಿನಾಯಕನ ಫೋಟೊಗಳೂ ಇವೆ. ಜತೆಗೆ ಮಲೇ ಮಹದೇಶ್ವರ ಸ್ವಾಮಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ಸಾಯಿ ಬಾಬಾ ಅವರ ಚಿತ್ರಗಳೂ ಇದ್ದು, ಜಾತ್ಯತೀತ ತತ್ವಗಳನ್ನು ಬಿಂಬಿಸುತ್ತಿವೆ.

ಕುಬೇರನ ಎರಡು ಮೂರ್ತಿ: ಗ್ರಾಹಕರು ಚೆನ್ನಾಗಿರಬೇಕು. ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು ಎಂದು ಬಯಸಿರುವ ಆಟೊ ಚಾಲಕ ಆಟೊದಲ್ಲಿ ಕುಬೇರನ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಒಂದು ಮೂರ್ತಿಯನ್ನು ಆಟೊ ಮೀಟರ್‌ ಮೇಲಿಟ್ಟಿದ್ದು, ಅದು ನೇರವಾಗಿ ಗ್ರಾಹಕರ ಕಡೆ ಮುಖ ಮಾಡಿದೆ. ಇನ್ನೊಂದು ಮೂರ್ತಿಯನ್ನು ಮೀಟರ್‌ ಪಕ್ಕದಲ್ಲಿಟ್ಟಿದ್ದು, ಅದು ಚಾಲಕನ ಕಡೆ ಮುಖ ಮಾಡಿದೆ. ಅಂದರೆ ಗ್ರಾಹಕರು ಚೆನ್ನಾಗಿರಬೇಕು, ಆ ಮೂಲಕ ತಾನೂ ಚೆನ್ನಾಗಿರಬೇಕು ಎಂಬುದು ಈ ಆಟೊ ಚಾಲಕನ ಮನೋಧರ್ಮ.

ಎಲ್‌ಇಡಿ ಲೈಟಿಂಗ್‌ನ ಡಿಸೈನ್‌: ಆಟೊದಲ್ಲಿ ಸೀಟಿನ ಮೇಲ್ಭಾಗ, ಆಟೊ ಮೇಲ್ಛಾವಣಿಯ ಒಳಭಾಗದಲ್ಲಿ ಎಲ್‌ಇಡಿ ಲೈಟಿಂಗ್‌ ಡಿಸೈನ್‌ ಕೂಡ ಮಾಡಲಾಗಿದೆ. ಇವುಗಳ ಜತೆಗೆ ಚಾಲಕನ ತಾಯಿ, ತಮ್ಮ, ಭಾಮೈದುನನ ಫೋಟೊಗಳನ್ನು ಹಾಕಿ ಅವರನ್ನು ನಿತ್ಯ ಸ್ಮರಿಸಲಾಗುತ್ತಿದೆ.

ಕನ್ನಡ ಪ್ರೇಮಿ ಚಾಲಕ: ಈ ರೀತಿಯ ವಿಶಿಷ್ಟ, ವಿಭಿನ್ನ, ವಿನೂತನ ಆಟೊ ಇರುವುದು ಆರ್‌ಪಿಸಿ ಬಡಾವಣೆಯ ಪೈಪ್‌ಲೈನ್‌ ರಸ್ತೆ ಬಳಿ. ಈ ಆಟೊ ಚಾಲಕರ ಹೆಸರು ನಟರಾಜನ್‌. ತಮಿಳು ಮಾತೃಭಾಷೆಯಾದರೂ ಅಪ್ಪಟ ಕನ್ನಡ ಪ್ರೇಮಿ. ತಮಿಳು, ಕನ್ನಡದ ಜತೆಗೆ ತೆಲುಗು, ಹಿಂದಿಯನ್ನು ಬಲ್ಲವರಿವರು.

‘ಕರ್ನಾಟಕದಲ್ಲಿ ಇದ್ದ ಮೇಲೆ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಇಲ್ಲಿನ ಗಾಳಿ, ಬೆಳಕು, ನೀರನ್ನು ಸೇವಿಸಿದ ಮೇಲೆ ಇಲ್ಲಿನ ಭಾಷೆ ಕಲಿಯದಿದ್ದರೆ ಹೇಗೆ. ನನ್ನ ಆಟೊದಲ್ಲಿ ಬರುವ ಕನ್ನಡೇತರರಿಗೆ ಈ ಮಾತುಗಳನ್ನು ಹೇಳುತ್ತೇನೆ. ಅಲ್ಲದೆ ಕನ್ನಡ ಕಲಿಯಲಿ ಎಂದು 30 ದಿನಗಳಲ್ಲಿ ಕನ್ನಡ ಕಲಿಯುವ ಪುಸ್ತಕವನ್ನೂ ಆಟೊದಲ್ಲಿ ಇಟ್ಟಿದ್ದೆ. ಇತ್ತೀಚೆಗೆ ಗ್ರಾಹಕರೊಬ್ಬರು ಅದನ್ನು ಎತ್ತಿಕೊಂಡು ಹೋಗಿದ್ದಾರೆ. ಬಹುಶಃ ಕನ್ನಡ ಕಲಿಯಲು ತೆಗೆದುಕೊಂಡಿರಬೇಕು. ಇನ್ನೊಂದು ಪುಸ್ತಕ ತಂದಿಡುತ್ತೇನೆ’ ಎಂದು ನಗುತ್ತಾರೆ ಅವರು.

ಆಟೊ ಅಲ್ಲ ಗುಡಿ: ಆಟೊ ಏರುವ ಗ್ರಾಹಕರಿಗೆ ಗುಡಿಗೆ ಬಂದಂತಾಗಬೇಕು. ಆಲ್ಲಿ ದೊರೆಯುವ ನೆಮ್ಮದಿ ಇಲ್ಲೂ ಸಿಗಬೇಕು ಎಂಬ ಉದ್ದೇಶದಿಂದ ಆಟೊವನ್ನು ಈ ರೀತಿ ಸಿಂಗರಿಸಿದ್ದೇನೆ. ಹೀಗಿ ಶೃಂಗಾರ ಮಾಡುವುದು ನನಗೆ ಶೋಕಿಯೂ ಆಗಿಬಿಟ್ಟಿದೆ. ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಏನಾದರೂ ಹೊಸದನ್ನು ಸೇರಿಸಿ ಆಟೋದ ಸಿಂಗಾರವನ್ನು ಹೆಚ್ಚಿಸುತ್ತಿದ್ದೇನೆ ಎನ್ನುತ್ತಾರೆ ನಟರಾಜನ್‌.

ಆರ್‌ಪಿಸಿ ಲೇಔಟ್‌ನ ಸುತ್ತಮುತ್ತ ಹಿಂದು, ಮುಸ್ಲಿಂ, ಕ್ರೈಸ್ತರಿದ್ದಾರೆ. ಅಲ್ಲದೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷಿಗರೂ ಇದ್ದಾರೆ. ಇವರೆಲ್ಲರಿಗೂ ಆಟೊ ನಮ್ಮದು ಎಂಬ ಸುರಕ್ಷಿತ ಭಾವ ಬರಲಿ ಎಂದೂ ಹೀಗೆಲ್ಲ ಮಾಡಿದ್ದೇನೆ ಎಂದು ಅವರು ವಿವರಿಸುತ್ತಾರೆ.

‘ನನಗೆ ಪತ್ನಿ ಮತ್ತು ಐವರು ಮಕ್ಕಳು. ಇಬ್ಬರು ಹೆಣ್ಣು, ಮೂವರು ಗಂಡು ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು ಚೆನ್ನಾಗಿದ್ದಾರೆ. ಬಾಡಿಗೆ ಮನೆಯಲ್ಲಿಯೇ ನಮ್ಮ ಜೀವನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಟೊ ಓಡಿಸುತ್ತೇನೆ. ದಿನಕ್ಕೆ ಅಂದಾಜು ₹ 1,000 ಸಂಪಾದಿಸುತ್ತೇನೆ. ಕುಡಿತ, ಬೀಡಿ, ಸಿಗರೇಟು, ಜರದಾಗಳ ಚಟವಿಲ್ಲ. ಆಟೊಗೆ ಸಿಂಗರಿಸುವುದೇ ನನ್ನ ಚಟ. ಆ ಮೂಲಕ ಗ್ರಾಹಕರ ಮುಖದಲ್ಲಿ ನಗು, ನೆಮ್ಮದಿ ತರಿಸುವುದೇ ಹೆಬ್ಬಯಕೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !