ಮೆಟ್ರೊ ಕಾಮಗಾರಿಗೆ ‘ಆಮೆ’ವೇಗ!

7
ಬನ್ನೇರುಘಟ್ಟ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ

ಮೆಟ್ರೊ ಕಾಮಗಾರಿಗೆ ‘ಆಮೆ’ವೇಗ!

Published:
Updated:
Deccan Herald

ಬೆಂಗಳೂರು: ಮೆಟ್ರೊ ಮಾರ್ಗದ ಕಾಮಗಾರಿ ಬನ್ನೇರುಘಟ್ಟ ಪ್ರದೇಶದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸ್ಥಳೀಯರಿಂದ ಅಸಮಾಧಾನದ ಕೂಗು ಎದ್ದಿದೆ. ವೈಟ್‌ಫೀಲ್ಡ್‌, ಕೆಂಗೇರಿ ಪ್ರದೇಶದಲ್ಲಿ ನಡೆಯುವ ಕಾಮಗಾರಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ ಎಂಬುದು ಜನರ ಬೇಸರ. ಈ ಬಗ್ಗೆ ಟ್ವಿಟರ್‌ನಲ್ಲಿ ಅಳಲು ದಾಖಲಿಸಿದ್ದಾರೆ. 

ಏನು ನಡೆದಿದೆ?: ಮೆಟ್ರೊ ಎರಡನೇ ಹಂತದ ಯೋಜನೆಯ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಗೊಟ್ಟಿಗೆರೆ – ನಾಗವಾರದ ಮಧ್ಯೆ ಒಟ್ಟು 21.25 ಕಿಲೊ ಮೀಟರ್‌ ಉದ್ದದ ಮಾರ್ಗವಿದು. ಇದರಲ್ಲಿ 7.5 ಕಿಲೊ ಮೀಟರ್‌ ಎತ್ತರಿಸಲಾದ ಮಾರ್ಗವಿದೆ. ಮುಂದೆ ಸ್ವಾಗತ್‌ ಕ್ರಾಸ್‌ ರೋಡ್‌ನಿಂದ ಭೂಗತ ಮಾರ್ಗದ ಕಾಮಗಾರಿ ನಡೆಯಬೇಕಿದೆ.

ಸದ್ಯ ಐಐಎಂ, ಅಪೋಲೊ ಫೋರ್ಟಿಸ್‌ ಆಸ್ಪತ್ರೆಯ ಮುಂಭಾಗ ಎಲಿವೇಟೆಡ್‌ ಮಾರ್ಗದ ಪಿಲ್ಲರ್‌ ನಿರ್ಮಿಸಲಾಗಿದೆ. ಸ್ವಲ್ಪ ಮುಂದೆ ಅರ್ಧಭಾಗ ನಿರ್ಮಾಣವಾದ ಪಿಲ್ಲರ್‌ಗಳ ಸಾಲು ಕಾಣಸಿಗುತ್ತದೆ. ಕಾಮಗಾರಿ ವಿಳಂಬದಿಂದ ಸಂಚಾರ ದಟ್ಟಣೆ ವಿಪರೀತವಾಗಿದೆ ಎಂದು ಇಲ್ಲಿ ಓಡಾಡುತ್ತಿರುವ ವಾಹನ ಸವಾರರು ಅಳಲು ತೋಡಿಕೊಂಡರು. 

ನಗರದ ಹೊರವಲಯ ಎಂಬ ಉದಾಸೀನವೋ ಅಥವಾ ಬೇರೆ ಭಾಗಗಳ ಕಾಮಗಾರಿಯತ್ತ ಒತ್ತು ಕೊಟ್ಟಿರುವ ಕಾರಣವೋ ಗೊತ್ತಿಲ್ಲ. ಈ ಭಾಗದ ಜನ ಸಮಸ್ಯೆ ಅನುಭವಿಸುವುದು ತಪ್ಪಿಲ್ಲ ಎಂದು ಆಟೊ ಚಾಲಕರು ಬೇಸರ ವ್ಯಕ್ತಪಡಿಸಿದರು. 

‘ಮಾರ್ಗದ ಆಸುಪಾಸಿನಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಹಾಕಲಾಗಿದೆ. ಒಮ್ಮೆಲೆ ಸರಿಸುವಂತೆಯೂ ಇಲ್ಲ. ಸಮೀಪದಲ್ಲೇ ಆಸ್ಪತ್ರೆಗಳಿವೆ. ತುರ್ತು ವಾಹನಗಳು ಹೋಗುವ ಸಂದರ್ಭದಲ್ಲಂತೂ ಸಾಕಷ್ಟು ಅಡಚಣೆ ಎದುರಿಸಬೇಕಾಗುತ್ತದೆ’ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದರು.

ಜೂನ್‌ನಲ್ಲಿ ಮೆಟ್ರೊ ಕಾಮಗಾರಿ ನಡೆಸುತ್ತಿದ್ದ ಕ್ರೇನ್‌–ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರ ಮೃತಪಟ್ಟ ಘಟನೆಯೂ ನಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ಅಜಯ್‌ ಸೇಠ್‌, ‘ಎಲಿವೇಟೆಡ್‌ ಮಾರ್ಗದ ಕಾಮಗಾರಿ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಬೇಕು. ಬಿಬಿಎಂಪಿ ರಸ್ತೆ ವಿಸ್ತರಿಸುವುದಾಗಿ ಹೇಳಿದೆ. ರಸ್ತೆ ವಿಸ್ತರಿಸಿದಾಗ ಸಮಸ್ಯೆ ಬಗೆಹರಿಯಲಿದೆ. ಫೋರ್ಟಿಸ್‌ ಆಸ್ಪತ್ರೆ ಮುಂಭಾಗ ನಮ್ಮ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆ ಆಗಿದ್ದರೆ ಆ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಹೇಳಿದರು. 

ಎರಡನೆ ಹಂತದ ಯೋಜನೆ ₹ 11,014 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಎರಡನೇ ಹಂತದ ರೀಚ್‌–6ನಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಮೆಟ್ರೊವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವಲ್ಲಿ ಈ ಮಾರ್ಗ ಅತ್ಯಂತ ಮಹತ್ವದ್ದು. ಭೂಗತ ಮಾರ್ಗದ ಕಾಮಗಾರಿಗೆ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಮೆಟ್ರೊ ನಿಗಮದ ಮೂಲಗಳು ಹೇಳಿವೆ.

6 ಬೋಗಿಯ ರೈಲಿಗೆ ಚಾಲನೆ

ನಗರದ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ (ಮೆಜೆಸ್ಟಿಕ್‌) ಆರು ಬೋಗಿಗಳನ್ನೊಳಗೊಂಡ ಎರಡನೇ ರೈಲಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದೆ. 

ಮೂರು ಬೋಗಿಯ ರೈಲಿನಲ್ಲಿ ಒಮ್ಮೆಗೆ 945 ಜನ ಪ್ರಯಾಣಿಸಬಹುದು. ಮತ್ತೆ ಮೂರು ಬೋಗಿಗಳನ್ನು ಅಳವಡಿಸಿದಾಗ ಈ ಪ್ರಮಾಣ ದುಪ್ಪಟ್ಟಾಗಲಿದೆ.ಪ್ರತಿದಿನ ಸುಮಾರು 4 ಲಕ್ಷ ಜನ ಮೆಟ್ರೊ ಮೂಲಕ ಪ್ರಯಾಣಿಸುತ್ತಾರೆ.

ಮೆಟ್ರೊ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಲ್ದಾಣಕ್ಕೆ ಹೋಗುವ ಪಾದಚಾರಿ ಸೇತುವೆಯ ಉದ್ಘಾಟನೆಯೂ ಗುರುವಾರ ನಡೆಯಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !