ಪೀಣ್ಯ: ನಾಲ್ಕು ಕೆರೆಗಳು ಮಲಿನ

7

ಪೀಣ್ಯ: ನಾಲ್ಕು ಕೆರೆಗಳು ಮಲಿನ

Published:
Updated:

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ಮಲಿನ ನೀರು ಮತ್ತು ಸುಂಕದಕಟ್ಟೆ, ತಿಗಳರಪಾಳ್ಯ, ರಾಜಗೋಪಾಲನಗರದ ಚರಂಡಿ ನೀರು ಗಂಗೊಂಡನಹಳ್ಳಿ ಕೆರೆಗ ಹರಿದು ಬರುತ್ತಿರುವ ಕಾರಣ ಅದು ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಗಂಗೊಂಡನಹಳ್ಳಿ ಗ್ರಾಮದ ಐದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕೊಳವೆ ಬಾವಿಯನ್ನು ಕೊರೆದರೆ ಕಲುಷಿತ ನೀರು ಬರುತ್ತಿದೆ. ಕೆರೆಯಲ್ಲಿ ಸಂಗ್ರಹವಾಗಿರುವ ಮಲಿನ ನೀರಿನಿಂದ ಗಬ್ಬುವಾಸನೆ ಬರುತ್ತಿದ್ದು, ಗ್ರಾಮಸ್ಥರು ಈ ವಾಸನೆಯಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. 
ಗಂಗೊಂಡನಹಳ್ಳಿ ಕೆರೆಯ ಮಲಿನ ನೀರು ಲಕ್ಕೇನಹಳ್ಳಿ ಕೆರೆಗೆ, ಲಕ್ಕೇನಹಳ್ಳಿ ಕೆರೆ ನೀರು ಮಾಚೋಹಳ್ಳಿ ಕೆರೆಗೆ ಹರಿಯುತ್ತದೆ.

ಕಾಚೋಹಳ್ಳಿ ಗ್ರಾಮದ ಕೆರೆಯಲ್ಲಿ ಅಂತರಗಂಗೆ ಸಸಿ ಬೆಳೆದಿದ್ದು ನೀರು ಕಲುಷಿತಗೊಂಡಿದೆ. ಆ ಕೆರೆಯ ನೀರು ಕೂಡ ಮಾಚೋಹಳ್ಳಿ ಕೆರೆಗೆ ಬಂದು ಸೇರುತ್ತದೆ. ಮೂರು ಕೆರೆಗಳ ಕಲುಷಿತ ನೀರು ಮಾಚೋಹಳ್ಳಿ ಕೆರೆಗೆ ಬಂದು ಸೇರುತ್ತಿರುವುದರಿಂದ ಕೃಷಿ ಭೂಮಿಯ ಫಲವತ್ತತೆ ಹಾಳಾಗಿದೆ.

‘ಮಾಚೋಹಳ್ಳಿ ಕೆರೆಯ ಆಸುಪಾಸಿನ ಸುಮಾರು 120 ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಮೆಕ್ಕೆಜೋಳ, ಅವರೆ, ಟೊಮೆಟೊ ಬೆಳೆಯಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ಬೆಳೆಗಳ ಇಳುವರಿ ಕಡಿಮೆಯಾಗಿದೆ’ ಎಂಬುದು ರೈತರ ಅಳಲು.
‘ಗಂಗೊಂಡನಹಳ್ಳಿ ಕೆರೆಯ ಮಧ್ಯಭಾಗದ ಗುಡ್ಡದಲ್ಲಿ ಹಕ್ಕಿಗಳು ಗೂಡು ಕಟ್ಟಿದ್ದವು. ಕೆರೆ ಮಲಿನವಾದ ಮೇಲೆ ಎಷ್ಟೋ ಪಕ್ಷಿಗಳು ವಿಷಕಾರಕ ವಾಸನೆ ತಡೆಯಲಾರದೇ ಗುಡ್ಡದಲ್ಲೇ ಸತ್ತು ಹೋದವು’ ಎಂದು ಪಕ್ಷಿ ತಜ್ಞ ಅರುಣ್ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಉದ್ದಂಡಯ್ಯ ಅವರು ಪ್ರತಿಕ್ರಿಯಿಸಿ ‘ನಾಲ್ಕು ಕೆರೆಗಳು ಹಾಳಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.

ಮೇಯರ್‌ ಆರ್‌.ಸಂಪತ್‌ರಾಜ್‌ ಪ್ರತಿಕ್ರಿಯಿಸಿ ‘ಈ ಕೆರೆಗಳನ್ನು ಅಭಿವೃದ್ದಿ ಪಡಿಸಲು ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಜಲಮಂಡಳಿಯ ಅಧಿಕಾರಿಗಳಿಗೆ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವಂತೆ ನಿರ್ದೇಶಿಸಿದ್ದೇನೆ. ಕೆರೆಯನ್ನು ಖುದ್ದು ವೀಕ್ಷಣೆ ಮಾಡಿ ವರದಿ ಕೊಡಲು ಹೇಳಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !