ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಕದಿಯುತ್ತಿದ್ದ ಶೋರೂಂ ಪ್ರತಿನಿಧಿ!

Last Updated 9 ನವೆಂಬರ್ 2018, 20:42 IST
ಅಕ್ಷರ ಗಾತ್ರ

ಬೆಂಗಳೂರು: ಕಾರು ಬದಲಾವಣೆಗೆಂದು ಶೋರೂಂಗೆ ಬರುತ್ತಿದ್ದ ಗ್ರಾಹಕರಿಗೆ, ‘ನಿಮ್ಮ ಕಾರನ್ನು ಹೊರಗಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತೇನೆ’ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಶೋರೂಂನ ಮಾರಾಟ ಪ್ರತಿನಿಧಿ ಶ್ರೀನಾಥ್ (29) ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಡಿಪ್ಲೊಮಾ ಪದವೀಧರನಾದ ಶ್ರೀನಾಥ್, ಎಂ.ಎಸ್.ಪಾಳ್ಯದ ಬಸವಲಿಂಗಪ್ಪ ಲೇಔಟ್‌ನ ನಿವಾಸಿ. ಆತನಿಂದ ₹ 15 ಲಕ್ಷ ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಶ್ರೀನಾಥ್ ವಿರುದ್ಧ ಯಲಹಂಕ, ಯಲಹಂಕ ಉಪನಗರ ಹಾಗೂ ವಿದ್ಯಾರಣ್ಯಪುರ ಠಾಣೆಗಳಲ್ಲಿ ಮೂರು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಬದಲಾಯಿಸಲು ಬರುತ್ತಿದ್ದವರಿಗೆ, ‘ನಿಮ್ಮ ಕಾರಿಗೆ ಶೋರೂಂನಲ್ಲಿ ಹೆಚ್ಚಿನ ಬೆಲೆ ಸಿಗುವುದಿಲ್ಲ. ಹೊರಗಡೆ ನನಗೆ ಡೀಲರ್‌ಗಳ ಪರಿಚಯವಿದೆ. ಅವರಿಗೆ ಮಾರಿದರೆ, ಹೆಚ್ಚಿನ ಹಣ ಸಿಗುತ್ತದೆ’ ಎಂದು ನಂಬಿಸುತ್ತಿದ್ದ. ಅದಕ್ಕೆ ಒಪ್ಪಿದರೆ, ‘ಒಂದು ದಿನದ ಮಟ್ಟಿಗೆ ಕಾರು ಕೊಡಿ. ಡೀಲರ್‌ಗಳಿಗೆ ತೋರಿಸಿಕೊಂಡು ಬರುತ್ತೇನೆ’ ಎಂದು ಹೇಳಿ ಕಾರು ಪಡೆಯತ್ತಿದ್ದ.

ನಂತರ ಅದನ್ನು ಯಾರಿಗಾದರೂ ಮಾರಾಟ ಮಾಡಿ, ಬಂದ ಹಣದಲ್ಲಿ ಗೋವಾದ ಕ್ಯಾಸಿನೋಗೆ ಹೋಗಿ ಜೂಜು ಆಡುತ್ತಿದ್ದ. ಇತ್ತ ಗ್ರಾಹಕರು ತಮ್ಮ ಕಾರಿನ ಬಗ್ಗೆ ವಿಚಾರಿಸಿದರೆ, ‘ಮಾರಾಟವಾಗಿದೆ. ಹಣ ಕೊಡಲು 15 ದಿನ ಕಾಲಾವಕಾಶ ಕೇಳಿದ್ದಾರೆ’ ಎಂದು ಇಲ್ಲದ ಕಾರಣಗಳನ್ನು ಹೇಳಿ ದಿನ ದೂಡುತ್ತಿದ್ದ. ಇದರಿಂದ ಬೇಸರಗೊಂಡ ಗ್ರಾಹಕರು, ತಮ್ಮ ಮನೆ ಸಮೀಪದ ಠಾಣೆಗಳ ಮೆಟ್ಟಿಲೇರಿದ್ದರು.

ಶ್ರೀನಾಥ್‌ನ ಕೃತ್ಯ ಗೊತ್ತಾಗುತ್ತಿದ್ದಂತೆಯೇ ಶೋರೂಂ ಮಾಲೀಕರು ಕೆಲಸದಿಂದ ಕಿತ್ತು ಹಾಕಿದ್ದರು. ಮೊಬೈಲ್ ಕರೆ ವಿವರ ಆಧರಿಸಿ ಮಂಗಳವಾರ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

**

ಬೇಸತ್ತ ಪತ್ನಿ

‘ಜೂಜಾಟದ ಚಟಕ್ಕೆ ಬಿದ್ದಿದ್ದ ಶ್ರೀನಾಥ್, ತವರು ಮನೆಯಿಂದ ಹಣ ತರುವಂತೆ ಪತ್ನಿಗೂ ಪೀಡಿಸುತ್ತಿದ್ದ. ಈ ಸಂಬಂಧ ವರದಕ್ಷಿಣೆ ಕಿರುಕುಳ ಪ್ರಕರಣವೂ ದಾಖಲಾಗಿತ್ತು. ಇತ್ತೀಚೆಗೆ ಶ್ರೀನಾಥ್‌ನನ್ನು ತೊರೆದು ಪತ್ನಿ ತವರು ಮನೆ ಸೇರಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT