ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿ

ದಮನಿತ ಮಹಿಳೆಯರ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸೂಚನೆ
Last Updated 24 ಜುಲೈ 2019, 14:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ‘ಜಿಲ್ಲೆಯಲ್ಲಿನ ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳನ್ನು ತಲುಪಿಸಿ ಅವರ ಜೀವನಮಟ್ಟ ಸುಧಾರಿಸಿ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಮನಿತ ಮಹಿಳೆಯರ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಮತ್ತು ಸಮನ್ವಯ ಕೋಶ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ನೀತಿ, ಪ್ರಧಾನಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ನೀತಿಯನ್ನು ಜಾರಿಗೊಳಿಸಿದೆ. ಹೀಗಾಗಿ, ಅವರ ಜೀವನದ ಮಟ್ಟ ಸುಧಾರಣೆ ತರುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಲಹಾ ಕೋಶವನ್ನು ರಚಿಸಲಾಗಿದೆ. ಇದರ ಮುಖಾಂತರ ಜಿಲ್ಲೆಯಲ್ಲಿರುವ ತೃತೀಯ ಲಿಂಗಿಗಳನ್ನು ಗುರುತಿಸಿ, ಗುರುತಿನ ಚೀಟಿಗಳನ್ನು ನೀಡುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡಿ, ಉದ್ಯಮಶೀಲರನ್ನಾಗಿಸಲು ಯೋಜನೆ ರೂಪಿಸಬೇಕಾಗಿದೆ. ಎಲ್ಲರಂತೆ ತೃತೀಯ ಲಿಂಗಿಗಳಿಗೂ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡಬೇಕು. ಅವರನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗ ಎಂದು ಪರಿಗಣಿಸಲು ಶಿಕ್ಷಣ ಹಾಗೂ ಸರ್ಕಾರಿ ನೇಮಕಾತಿಗಳ ಪ್ರವೇಶದಲ್ಲಿ ಸಹ ಮೀಸಲಾತಿಗಳನ್ನು ನೀಡಲು ನಿರ್ಧರಿಸಿದೆ’ ಎಂದರು.

‘ಪ್ರಧಾನಮಂತ್ರಿ ಮಹಿಳಾ ಸಶಕ್ತಿಕರಣ ಯೋಜನೆಯಡಿಯಲ್ಲಿ ಕೌಶಲ ಅಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಅಪೌಷ್ಟಿಕತೆ ಮುಂತಾದ ವಿಚಾರಗಳಲ್ಲಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಯಾವುದೇ ಹಸ್ತಕ್ಷೇಪ ಇಲ್ಲದೇ ಸರ್ಕಾರದ ಸೇವೆಯನ್ನು ಹಾಗೂ ಯೋಜನೆಗಳನ್ನು ಪಡೆಯಲು ಜಾಗೃತಿ ಮೂಡಿಸಿ, ತರಬೇತಿ ಒದಗಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಮಹಿಳೆಯರ ಸಾಮರ್ಥ್ಯ ಹೆಚ್ಚಿಸಿ ಸಬಲೀಕರಣ ಮಾಡುವ ಉದ್ದೇಶದಿಂದ ಒಂದೇ ಕಡೆ ಎಲ್ಲಾ ಸೇವೆಗಳನ್ನು ಒದಗಿಸಲು ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಇದು ಗ್ರಾಮೀಣ ಮಹಿಳೆಯರಿಗೆ ಸಹಾಯವಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಖ್ಯಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ನಲ್ಮ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಒದಗಿಸಬೇಕು. ನಿವೇಶನ ಹೊಂದಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಯಾ ತಾಲ್ಲೂಕುಗಳಲ್ಲಿ ಮನೆ ನಿರ್ಮಿಸಲು ಕ್ರಮ ವಹಿಸಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್‌.ದೇವರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀದೇವಮ್ಮ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಎ.ಸಿ.ಶೋಭಾ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT