ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ವ್ಯವಸ್ಥೆಗೆ ‘ಚುನಾವಣಾ ಆ್ಯಪ್’!

ಅಂಗವಿಕಲರು, ಹಿರಿಯ ನಾಗರಿಕರಿಗೆ ಅನುಕೂಲ; ಹೆಸರು, ವಿಳಾಸ ನೋಂದಣಿ ಕಡ್ಡಾಯ
Last Updated 26 ಮಾರ್ಚ್ 2019, 9:47 IST
ಅಕ್ಷರ ಗಾತ್ರ

ಕಲಬುರ್ಗಿ: ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಮತದಾನ ದಿನದಂದು ಮತಗಟ್ಟೆ ಕೇಂದ್ರಗಳಿಗೆ ತೆರಳಲು ಇನ್ನು ಮುಂದೆ ತೊಂದರೆ ಅನುಭವಿಸಬೇಕಿಲ್ಲ. ಮೊಬೈಲ್‌ ಮೂಲಕ ಹೆಸರು ನೋಂದಣಿ ಮಾಡಿಕೊಂಡರೆ ಸಾಕು ಮನೆ ಬಾಗಿಲಿಗೇ ವಾಹನ ಬರುತ್ತದೆ!

ಇಂತಹದ್ದೊಂದು ವ್ಯವಸ್ಥೆಯನ್ನು ಈ ಬಾರಿ ‘ಆ್ಯಪ್’ ಮೂಲಕ ಒದಗಿಸಿರುವುದು ವಿಶೇಷ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ‘ಚುನಾವಣಾ’ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಅನ್ನು ‘ಪ್ಲೇ ಸ್ಟೋರ್‌’ ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ‘ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ’ ಎಂಬ ಮುಖ ಪುಟ ದೊರೆಯುತ್ತದೆ. ಅಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಎಸ್‌ಎಂಎಸ್‌ ಮೂಲಕ ಒನ್‌ ಟೈಮ್ ಪಾಸ್‌ವರ್ಡ್‌ (ಒಟಿಪಿ) ಬರುತ್ತದೆ. ಪಾಸ್‌ವರ್ಡ್‌ ಮತ್ತು ಹೆಸರು ನೋಂದಾಯಿಸಿದರೆ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ.

ನೋಂದಣಿ ಹೇಗೆ?

ಆ್ಯಪ್‌ ನಲ್ಲಿ ‘ಲೋಕಸಭಾ ಚುನಾವಣೆ 2019’ ಐಕಾನ್‌ ಕ್ಲಿಕ್ ಮಾಡಿದರೆ ‘ವಾಹನ ಸೇವೆಗಳು’ ಎಂಬ ಐಕಾನ್‌ಗಳು ಸಿಗುತ್ತವೆ. ಈ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಮತದಾರರ ಗುರುತಿನ ಚೀಟಿ ಸಂಖ್ಯೆ, ಮೊಬೈಲ್ ಸಂಖ್ಯೆ, ಒಟಿಪಿ, ಇ–ಮೇಲ್ ಐಡಿಗಳನ್ನು ನಮೂದಿಸಬೇಕು. ಆ ಬಳಿಕ ಹಿರಿಯ ನಾಗರಿಕರು/ ಅಂಗವಿಕಲರು ಎಂಬ ಐಕಾನ್‌ ಒತ್ತಿದರೆ ನೋಂದಣಿ ಆಗುತ್ತದೆ.

ಗಾಲಿಕುರ್ಚಿ ಬೇಕಾದರೂ ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಸರು ನೋಂದಣಿ ಮಾಡಿಕೊಳ್ಳದಿದ್ದರೂ ಗಾಲಿಕುರ್ಚಿಗಳನ್ನುಅಂಗವಿಕಲರು ಇರುವ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಒದಗಿಸಲಾಗುತ್ತಿದೆ.

ಅಂಗವಿಕಲರಿಗೆ ಮೊದಲ ಆದ್ಯತೆ

‘ಚುನಾವಣಾ ಆ್ಯಪ್‌’ ನಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಗಾಲಿ ಕುರ್ಚಿ (ವ್ಹೀಲ್‌ ಚೇರ್) ಮತ್ತು ವಾಹನಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಾಹನದ ವಿಷಯದಲ್ಲಿ ಅಂಗವಿಕಲರಿಗೆ ಮೊದಲು ಆದ್ಯತೆ ನೀಡಲಾಗುವುದು. ತೀರ ಅಸಹಾಯಕರು, ನಡೆಯಲು ಬಾರದಿದ್ದರೆ ಅಂತಹವರಿಗೆ ವಾಹನ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮತದಾನ ಕೇಂದ್ರಕ್ಕೂ ಗಾಲಿ ಕುರ್ಚಿ ಒದಗಿಸಲಾಗುವುದು. ಅಂಗವಿಕಲರು ಹೆಸರು ನೋಂದಣಿ ಮಾಡಿಕೊಳ್ಳದಿದ್ದರೂ ಅವರಿಗೆ ವಾಹನ ವ್ಯವಸ್ಥೆ ಮಾಡುತ್ತೇವೆ.

–ಡಾ. ರಾಜಾ ಪಿ.ಅಧ್ಯಕ್ಷ, ಜಿಲ್ಲಾ ಸ್ವೀಪ್ ಸಮಿತಿ

ಚುನಾವಣೆ ಮಾಹಿತಿಯೂ ಲಭ್ಯ

ಹೆಸರು/ಚುನಾವಣಾ ಗುರುತಿನ ಸಂಖ್ಯೆ ಮೂಲಕ ಗುರುತಿನ ಚೀಟಿಯನ್ನು ಹುಡುಕುವುದು, ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಅವರ ಸಂಪರ್ಕ ಸಂಖ್ಯೆ, ಮತದಾನ ಕೇಂದ್ರಗಳ ಮಾಹಿತಿ, 2018ರ ವಿಧಾನಸಭೆ ಚುನಾವಣೆ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಪಡೆದ ಮತಗಳು ಸೇರಿದಂತೆ ಎಲ್ಲ ವಿವರಗಳೂ ಈ ಆ್ಯಪ್‌ನಲ್ಲಿ ಲಭ್ಯ ಇವೆ.

ಗೂಗಲ್ ನಕ್ಷೆ ಮೂಲಕ ಸಮೀಪದ ಪೊಲೀಸ್ ಠಾಣೆ, ಆರೋಗ್ಯ ಸೌಲಭ್ಯಗಳ ಬಗ್ಗೆ ಹಾಗೂ ಜಿಐಎಸ್‌ ಮೂಲಕ ಮೊದಲ ಮತ್ತು ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳು, ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು, ಅಧಿಸೂಚನೆಗಳ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ.

* ಜಿಲ್ಲೆಯಲ್ಲಿ 14,117 ಅಂಗವಿಕಲರಿದ್ದು, ಇವರಿಗೆ 1,216 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳು ಅಂಗವಿಕಲರ ಮನೆಗಳಿಗೆ ತೆರಳಿ ಅವರನ್ನು ಮತದಾನ ಕೇಂದ್ರಗಳಿಗೆ ಕರೆತರಲಿವೆ.
–ಆರ್.ವೆಂಕಟೇಶಕುಮಾರ್,ಜಿಲ್ಲಾ ಚುನಾವಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT