ಶುಕ್ರವಾರ, ಆಗಸ್ಟ್ 7, 2020
24 °C

ದೆಹಲಿ ಎಸಿಪಿ ಅಪಘಾತ ಪ್ರಕರಣ: ಟ್ರಕ್‌ ಚಾಲಕನ ಬಂಧನ 

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನೈರುತ್ಯ ದೆಹಲಿಯ ರಾಜೋಕ್ರಿ ಪ್ರದೇಶದಲ್ಲಿ ನಡೆದಿದ್ದ ಕರ್ತವ್ಯನಿರತ ಸಹಾಯಕ ಪೊಲೀಸ್ ಕಮಿಷನರ್‌ (ಎಸಿಪಿ) ಅವರ ಅಪಘಾತ ಪ್ರಕರಣ ಸಂಬಂಧ 28 ವರ್ಷದ ಟ್ರಕ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮಹಿಪಾಲ್ಪುರ‌ ನಿವಾಸಿ ಅಮಿತ್‌ ಪುಲಾಮಿ ಎಂದು ಗುರುತಿಸಲಾಗಿದೆ. 

‘ಜುಲೈ 25ರ ಸಂಜೆ ರಾಜೋಕ್ರಿ ಫ್ಲೈಓವರ್‌ ಬಳಿ ಎನ್‌ಎಚ್‌–8ರಲ್ಲಿ ಅಪಘಾತ ಸಂಭವಿಸಿದ್ದು, ಎಸಿಪಿ (ಸಂಚಾರ) ಸಂಕೇತ್‌ ಕುಮಾರ್‌ ಕೌಶಿಕ್‌(58) ಅವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ದೆಹಲಿ-ಹರಿಯಾಣ ಗಡಿಪ್ರದೇಶ, ಎನ್ಎಚ್‌-8 ರಲ್ಲಿರುವ ಎಂಸಿಡಿ ಟೋಲ್‌ ಮೂಲಕ ಹಾದುಹೋದ ಎಲ್ಲಾ ಮಿನಿ ಟ್ರಕ್‌ಗಳ ವಿವರಗಳನ್ನು ಸಂಗ್ರಹಿಸಿದ್ದರು. 

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಶಂಕಿತ ವಾಹನವೊಂದು ದೆಹಲಿಯ ರಂಗ್‌ಪುರಿಯಿಂದ ಗುರ್ಗಾಂವ್‌ ಕಡೆಗೆ ಸರ್ವಿಸ್‌ ರಸ್ತೆ ಮೂಲಕ ಬಂದು ರಾಜೋಕ್ರಿ ಫ್ಲೈಓವರ್‌ ಅಡಿಯಲ್ಲಿ ಯುಟರ್ನ್‌ ತೆಗೆದುಕೊಂಡು ಅಪಘಾತ ಸ್ಥಳದತ್ತ ಸಾಗಿರುವುದು ಗಮನಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಸದ್ಯ ಮಹಿಪಾಲ್ಪುರದ ರಂಗ್ಪುರಿಯಲ್ಲಿ ವಾಹನವನ್ನು ಪತ್ತೆಹಚ್ಚಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ’ ಎಂದು ಉಪ ಪೊಲೀಸ್‌ ಆಯುಕ್ತ (ನೈರುತ್ಯ) ದೇವೇಂದರ್‌ ಆರ್ಯ ಹೇಳಿದ್ದಾರೆ.

ಜುಲೈ 25 ರಂದು ಸಂಜೆ 7.45 ರ ಸುಮಾರಿಗೆ ಮಹಿಪಾಲ್‌ಪುರದ ರಂಗ್‌ಪುರಿಯಲ್ಲಿರುವ ತನ್ನ ಗೋದಾಮಿನಿಂದ ಐಜಿಐ ಕಾರ್ಗೋ ಟರ್ಮಿನಲ್‌ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಎಸಿಪಿಗೆ ಡಿಕ್ಕಿ ಹೊಡೆದಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು