ಮಂಗಳವಾರ, ಜೂನ್ 28, 2022
28 °C

ಅಂತಿಮ ಸೆಮಿಸ್ಟರ್‌ ಪರೀಕ್ಷೆ ರದ್ದತಿಗೆ ಅರ್ಜಿ: ಮಧ್ಯಂತರ ಆದೇಶಕ್ಕೆ ಸುಪ್ರೀಂ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಂತಿಮ ವರ್ಷ/ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಪಡಿಸಲು ಕೇಂದ್ರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಈ ವಿಷಯ ಕುರಿತು ಮಧ್ಯಂತರ ಆದೇಶ ನೀಡಲು ಶುಕ್ರವಾರ ನಿರಾಕರಿಸಿದೆ.

ಪರೀಕ್ಷೆಗಳನ್ನು ನಡೆಸುವ ಸಂಬಂಧ ಗೃಹ ಸಚಿವಾಲಯ ಕೈಗೊಂಡಿರುವ ನಿಲುವಿನ ಕುರಿತು ಸ್ಪಷ್ಟ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಸಹ ನೀಡಿದೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಯುಜಿಸಿ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆಯನ್ನು  ನ್ಯಾಯಮೂರ್ತಿಗಳಾದ ಆರ್‌.ಸುಭಾಷ್‌ರೆಡ್ಡಿ, ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ನಡೆಸಿತು.

ವಿವಿಧ ರಾಜ್ಯಗಳು ತಮ್ಮ ನಿಲುವನ್ನು ತಿಳಿಸುವ ಅಫಡವಿಟ್‌ಗಳನ್ನು ಆಗಸ್ಟ್‌ 7ರ ಒಳಗಾಗಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌ 10ಕ್ಕೆ ಮುಂದೂಡಿತು.

‘ಸುಪ್ರೀಂಕೋರ್ಟ್‌ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಪರೀಕ್ಷೆಗಳನ್ನು ನಡೆಸದಂತೆ ತಡೆ ನೀಡಲಿದೆ ಎಂದು ಯಾರೂ ಭಾವಿಸಬೇಕಿಲ್ಲ. ವಿದ್ಯಾರ್ಥಿಗಳು ಪ‍ರೀಕ್ಷೆಗಾಗಿ ಅಧ್ಯಯನ ಮುಂದುವರಿಸಬೇಕು’ ಎಂದು ಕೇಂದ್ರ ಸರ್ಕಾರ ಹಾಗೂ ಯುಜಿಸಿ ಪರ ವಾದ ಮಂಡಿಸಿದ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಪರೀಕ್ಷೆಗಳನ್ನು ರದ್ದುಪಡಿಸುವಂತೆ ಸೂಚಿಸಿ ನಾವು ಯಾವುದೇ ಆದೇಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆಲವು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಲೋಕ್‌ ಶ್ರೀವಾಸ್ತವ, ‘ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು. 

‘ಇದು ಸಹ ಮಧ್ಯಂತರ ಆದೇಶ ನೀಡಲು ಯೋಗ್ಯ ಪ್ರಕರಣವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು