ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣಾಧಿಕಾರಿ ಅಮಾನತು

ಕಾನ್ಪುರ ಜಿಲ್ಲೆಯ ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣ
Last Updated 4 ಜುಲೈ 2020, 13:34 IST
ಅಕ್ಷರ ಗಾತ್ರ

ಲಖನೌ:ಕಾನ್ಪುರ ಜಿಲ್ಲೆಯ ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣ ಸಂಬಂಧ, ಚೌಬೆಪುರ ಪೊಲೀಸ್ ಠಾಣಾಧಿಕಾರಿಯನ್ನು‌ ಸೇವೆಯಿಂದ ಅಮಾನತುಗೊಳಿಸಲಾಗಿದೆ.

‘ಠಾಣಾಧಿಕಾರಿ ವಿಜಯ್‌ ತಿವಾರಿ ವಿರುದ್ಧದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಅಮಾನತು ಮಾಡಲಾಗಿದೆ ಮತ್ತು ಎಲ್ಲಾ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಮೋಹಿತ್ ಅಗರ್‌ವಾಲ್ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಠಾಣಾಧಿಕಾರಿಯ ಜೊತೆಗೆ ಇತರೆ ಯಾವುದೇ ಸಿಬ್ಬಂದಿಯ ಕೈವಾಡ ಇರುವುದು ಸಾಬೀತಾದರೆ ಅವರನ್ನು ಕೂಡಲೇ ಕೆಲಸದಿಂದ ವಜಾ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.ದುಷ್ಕರ್ಮಿಗಳು ಪರಾರಿಯಾದ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭೀಕರ ಪ್ರಕರಣಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ. ಹತ್ಯೆಗೀಡಾದ ಪೊಲೀಸರ ತ್ಯಾಗವನ್ನು ವ್ಯರ್ಥವಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಠಾಣಾಧಿಕಾರಿಯ ಪಾತ್ರವೇನು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಐಜಿ ನಿರಾಕರಿಸಿದ್ದಾರೆ.

ಕುಖ್ಯಾತ ರೌಡಿ ವಿಕಾಸ್‌ ದುಬೆ ಎಂಬಾತನನ್ನು ಬಂಧಿಸಲು ಹೋದ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಎಂಟು ಮಂದಿ ಪೊಲೀಸರು ಗುಂಡಿನ ದಾಳಿಯಲ್ಲಿ ಶುಕ್ರವಾರ ಹತ್ಯೆಯಾಗಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಡಿವೈಎಸ್‌ಪಿ, ಮೂವರು ಸಬ್‌ಇನ್ಸ್‌ಪೆಕ್ಟರ್‌ಗಳೂ ಸೇರಿದ್ದಾರೆ.

ವಿಕಾಸ್‌ ದುಬೆ ಮನೆ ಧ್ವಂಸ

ಕಾನ್ಪುರ ಜಿಲ್ಲಾಡಳಿತ ರೌಡಿ ವಿಕಾಸ್‌ ದುಬೆಗೆ ಸೇರಿದ ಮನೆಯನ್ನು ಬುಲ್ಡೋಜರ್‌ನಿಂದ ಶನಿವಾರ ಧ್ವಂಸಗೊಳಿಸಿದೆ.

ಈ ವೇಳೆ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಇದ್ದರು. ಮನೆಯನ್ನು ಕೆಡವುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದುಬೆಯ ವಿರುದ್ಧ ಈವರೆಗೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಮೂವತ್ತಾರು ಗಂಟೆಗಳಿಂದ ಆತ ನಾಪತ್ತೆಯಾಗಿದ್ದಾನೆ.

‘ನಮ್ಮ ಕುಟುಂಬಕ್ಕೆ ಮಗನಿಂದ ಕಿರಿಕಿರಿ ಉಂಟಾಗಿದೆ. ಆತ ಶರಣಾಗದಿದ್ದರೆ ಅವನನ್ನು ಪೊಲೀಸರು ಕೊಲ್ಲಬೇಕು. ನಾನು 4 ತಿಂಗಳಿನಿಂದ ಮಗನನ್ನು ಭೇಟಿ ಮಾಡಿಲ್ಲ. ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದೇನೆ. ಅವನಿಂದ ನಮಗೆ ತೊಂದರೆಯಾಗಿದ್ದು, ಮುಜುಗರ ಎದುರಿಸುತ್ತಿದ್ದೇವೆ’ ಎಂದುತಾಯಿ ಸರ್ಲಾ ದೇವಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT