ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್ ದಾಳಿ ಆರೋಪ: ಅಲ್ಲಗಳೆದ ಇರಾನ್‌

ಸೌದಿಯ ತೈಲ ಘಟಕದ ಮೇಲೆ ದಾಳಿಗೆ ಇರಾನ್ ಹೊಣೆ: ಅಮೆರಿಕ
Last Updated 15 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ಟೆಹರಾನ್‌: ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಶನಿವಾರ ನಡೆದ ಡ್ರೋನ್‌ ದಾಳಿಯ ಹಿಂದೆ ಇರಾನ್‌ ಇದೆ ಎಂಬ ಅಮೆರಿಕ ಆರೋಪವನ್ನು ಇರಾನ್‌ ಅಲ್ಲಗಳೆದಿದೆ.

‘ಇಸ್ಲಾಮಿಕ್‌ ಗಣರಾಜ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ನೆಪಗಳನ್ನು ಅಮೆರಿಕ ಒಡ್ಡುತ್ತಿದೆ’ ಎಂದು ಇರಾನ್‌ ದೂರಿದೆ. ‘ಇದೊಂದು ಆಧಾರ ರಹಿತ ಹಾಗೂ ಅರ್ಥಹೀನ ಆರೋಪ. ಇದು ಫಲಪ್ರದವಾಗುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್‌ ಮೌಸವಿ ಹೇಳಿದ್ದಾರೆ.

ಶನಿವಾರ ನಡೆದ ದಾಳಿಯ ಸಂಬಂಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ, ಇರಾನ್‌ ಅನ್ನು ಖಂಡಿಸಿದ್ದಾರೆ. ದಾಳಿ ಹೊಣೆಯನ್ನು ಯೆಮನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಆದರೆ, ‘ದಾಳಿ ಯೆಮನ್‌ನಿಂದಲೇ ನಡೆದಿದೆ ಎಂದು ಹೇಳಲು ಯಾವ ಆಧಾರವೂ ಇಲ್ಲ’ ಎಂದು ಪೊಂಪಿಯೊ ಹೇಳಿದ್ದಾರೆ.

‘ತೈಲ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಆಗದಂತೆ ಪಾಲುದಾರ ಮತ್ತು ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತೇವೆ. ಈ ದಾಳಿಗೆ ಇರಾನ್‌ ಹೊಣೆಗಾರ ಎಂಬುದನ್ನು ಜಗತ್ತಿಗೆ ತಿಳಿಸುತ್ತೇವೆ’ ಎಂದು ಅಮೆರಿಕದ ಹಿರಿಯ ರಾಯಭಾರಿ ಟ್ವೀಟ್‌ ಮಾಡಿದ್ದಾರೆ.

ಫ್ರಾನ್ಸ್‌ ಖಂಡನೆ: ಡ್ರೋನ್‌ ದಾಳಿಯನ್ನು ಫ್ರಾನ್ಸ್‌ ಖಂಡಿಸಿದೆ. ‘ಈ ದಾಳಿಯಿಂದ ಜಾಗತಿಕ ತೈಲ ಉತ್ಪಾದನೆಗೆ ಅಡ್ಡಿಯಾ
ಗಿದೆ’ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿದೆ.

‘ಈ ದಾಳಿ ಪ್ರಾದೇಶಿಕ ಉದ್ವಿಗ್ನತೆ ಹಾಗೂ ಸಂಘರ್ಷವನ್ನು ಹೆಚ್ಚಿಸಬಹುದು. ನಾವು ಸೌದಿ ಅರೇಬಿಯಾದೊಂದಿದೆ ಇದ್ದೇವೆ’ ಎಂದು ಫ್ರಾನ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT