ಶನಿವಾರ, ಡಿಸೆಂಬರ್ 14, 2019
24 °C
ಮೆಲ್ಬರ್ನ್ ವಿಶ್ವವಿದ್ಯಾಲಯ

ಭಾರತದ ದಾಖಲೆ ಮಳೆಗೂ ಆಸ್ಟ್ರೇಲಿಯಾ ಕಾಳ್ಗಿಚ್ಚಿಗೂ ನಂಟು: ತಜ್ಞರ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಭಾರತದಲ್ಲಿ ಈ ಬಾರಿ ಸುರಿದ ದಾಖಲೆ ಪ್ರಮಾಣದ ಮಳೆಗೂ, ಆಸ್ಟ್ರೇಲಿಯಾದಲ್ಲಿ ಈಗ ಹಬ್ಬಿರುವ ಕಾಳ್ಗಿಚ್ಚಿಗೂ ಸಂಬಂಧವಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ಈ ಕುರಿತು ವರದಿ ಮಾಡಿದೆ.

ಕಾಳ್ಗಿಚ್ಚು ಹಬ್ಬುವ ರೀತಿ ಕುರಿತು ಅಧ್ಯಯನ ನಡೆಸುತ್ತಿರುವ ಮೆಲ್ಬರ್ನ್ ವಿಶ್ವವಿದ್ಯಾಲಯದ ತಜ್ಞ ಟ್ರೆಂಟ್ ಪೆನ್‌ಮನ್ ಅವರು, ‘ಈ ವೇಳೆಗೆ ಡಾರ್ವಿನ್‌ನಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತಿತ್ತು. ಆದರೆ ಭಾರತದಲ್ಲಿ ಈ ಬಾರಿ ಮಳೆಗಾಲದ ಅವಧಿ ಅಕ್ಟೋಬರ್ ಮಧ್ಯಭಾಗದವರೆಗೂ ಮುಗಿಯಲೇ ಇಲ್ಲ. ಏಷ್ಯಾದಲ್ಲಿ ಪ್ರತಿ ವರ್ಷ ನೈಋತ್ಯ ಮುಂಗಾರು ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯೊಳಗೆ ಕೊನೆಯಾಗುತ್ತದೆ. ನಂತರ ಇದು ದಕ್ಷಿಣ ಭಾಗಕ್ಕೆ ಸಂಚರಿಸುತ್ತದೆ. ಇದರಿಂದಲೇ ಇಲ್ಲಿ ಮಳೆ ವಿಳಂಬವಾಗಿದೆ. ಜಾಗತಿಕ ಹವಾಮಾನದಿಂದಾಗಿ ಇಲ್ಲಿ ಉಷ್ಣತೆ ಹಾಗೂ ಗಾಳಿ ತೀವ್ರವಾಗಿದೆ. ಬಹುಶಃ ಕಾಳ್ಗಿಚ್ಚು ಹರಡಲು ಇವೇ ಕಾರಣ’ ಎಂದು ವಿವರಿಸಿದ್ದಾರೆ.

‘ಜಾಗತಿಕವಾಗಿ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಅವುಗಳಿಂದ ಬೇರ್ಪಡಲು ಸಾಧ್ಯವಿಲ್ಲ. ಆದರೂ, ನಮ್ಮಿಂದ 10,000 ಕಿ.ಮೀ ದೂರದಲ್ಲಿನ ಹವಾಮಾನ, ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟ’ ಎಂದು ಅವರು ಹೇಳಿದ್ದಾರೆ.

ಮುಂಜಾಗ್ರತೆಗೆ ಸೂಚನೆ: ಕಾಳ್ಗಿಚ್ಚಿಗೆ ತುತ್ತಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜನರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆ
ಭೀಕರ ಕಾಳ್ಗಿಚ್ಚಿನಿಂದಾಗಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾನ್‌ಬೆರ್‍ರಾದಲ್ಲಿ ಸೋಮವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನ್ಯೂ ಸೌತ್‌ ವೇಲ್ಸ್‌ನಲ್ಲಿ ಮಂಗಳವಾರ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಪಾಯದ ಮುನ್ಸೂಚನೆ ನೀಡಿದ್ದಾರೆ.

‘ಇದು ಈತನಕದ ಭೀಕರ ಕಾಳ್ಗಿಚ್ಚಾಗುವ ಅಪಾಯ ಇದೆ’ ಎಂದು ನ್ಯೂ ಸೌತ್‌ ವೇಲ್ಸ್‌ನ ತುರ್ತುಸೇವೆಗಳ ಸಚಿವ ಡೇವಿಡ್ ಎಲಿಯಟ್ ತಿಳಿಸಿದ್ದಾರೆ.

ಶುಕ್ರವಾರದಿಂದ ಈತನಕ 1 ಲಕ್ಷ ಹೆಕ್ಟೇರ್ ಅರಣ್ಯ ಹಾಗೂ ಕೃಷಿಭೂಮಿ, 150ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ.

ವೈದ್ಯರ ಎಚ್ಚರಿಕೆ: ಬ್ರಿಸ್ಬೇನ್‌ನಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು, ಜನರು ಮನೆಯಿಂದ ಹೊರಹೋಗಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು