ಸೋಮವಾರ, ಜನವರಿ 20, 2020
24 °C

ರಾಜಮನೆತನದ ಕೆಲಸಗಳಿಂದ ಹಿಂದೆ ಸರಿಯುತ್ತೇವೆ: ಹ್ಯಾರಿ ದಂಪತಿ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್‌ ಮಾರ್ಕೆಲ್‌ ಅವರು ರಾಜಮನೆತನದ ಮುಂಚೂಣಿ ಕೆಲಸಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದಕ್ಕೆ ರಾಜಮನೆತನ ದಿಗ್ಭ್ರಮೆಗೊಂಡಿದೆ. ರಾಜಮನೆತನದೊಳಗಿನ ಭಿನ್ನಾಭಿಪ್ರಾಯ ತೀವ್ರಗೊಂಡಿದೆ ಎಂದು ಬ್ರಿಟನ್‌ ಮಾದ್ಯಮಗಳು ಟೀಕೆ ಮಾಡಿವೆ.

ತಮ್ಮ ಮುಂದಿನ ಕೆಲಸಗಳ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹ್ಯಾರಿ ದಂಪತಿ ಬುಧವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬ್ರಿಟನ್‌ ಮತ್ತು ಉತ್ತರ ಅಮೆರಿಕದಲ್ಲಿ ತಮ್ಮ ಪುತ್ರ ಆರ್ಚಿ ಜೊತೆಗೆ ಸಮಯ ಕಳೆಯುವುದಾಗಿಯೂ ತಿಳಿಸಿದ್ದಾರೆ.

ಇದು ಅತ್ಯಂತ ಜಟಿಲವಾಗಿದೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಹೇಳಿದೆ. ಆರ್ಥಿಕವಾಗಿ ಸ್ವತಂತ್ರವಾಗಲು ಮತ್ತು ತಮ್ಮದೇ ಆದ ಚಾರಿಟೇಬಲ್‌ ಸಂಸ್ಥೆ ಆರಂಭಿಸಲು ಯೋಜನೆ ರೂಪಿಸಿದ ತಿಂಗಳ ನಂತರ ಈ ನಿರ್ಧಾರ ಬಹಿರಂಗಗೊಂಡಿದೆ. ಹೊಸ ವರ್ಷದಲ್ಲಿ ತಮ್ಮ ಹೊಸ ಯೋಜನೆಯನ್ನು ಜಾರಿಗೆ ತರಲು ಹ್ಯಾರಿ ದಂಪತಿ ಉದ್ದೇಶಿಸಿದ್ದಾರೆ.

‘ನಾವು ರಾಜಮನೆತನದ ಹಿರಿಯ ಸದಸ್ಯರಾಗಿ ಮುಂದುವರಿಯಬಾರದು ಎಂದು ಉದ್ದೇಶಿಸಿದ್ದು, ಆರ್ಥಿಕವಾಗಿ ಸ್ವತಂತ್ರವಾಗಲು ಕೆಲಸ ಮಾಡುತ್ತೇವೆ. ಆದರೆ, ರಾಣಿ ಎಲಿಜಬೆತ್‌–2 ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ. 

‘ಬ್ರಿಟನ್‌ ಮತ್ತು ಉತ್ತರ ಅಮೆರಿಕದಲ್ಲಿ ನಮ್ಮ ಸಮಯವನ್ನು ಸಮತೋಲನಗೊಳಿಸಲು ಯೋಜನೆ ರೂಪಿಸುತ್ತಿದ್ದೇವೆ. ನಮ್ಮ ಪುತ್ರನನ್ನು ರಾಜಮನೆತನದ ಸಂಪ್ರದಾಯದಂತೆ ಬೆಳೆಸಲು ಸಹ ಈಗ ನಮಗೆ ಅನುಕೂಲವಾಗಲಿದೆ. ಚಾರಿಟೇಬಲ್‌ ಸಂಸ್ಥೆ ಆರಂಭಿಸುವುದಕ್ಕೆ ನಮ್ಮ ಮೊದಲ ಆದ್ಯತೆ ಆಗಿದೆ’ ಎಂದು ಹೇಳಿಕೆಯಲ್ಲಿ ಹ್ಯಾರಿ ತಿಳಿಸಿದ್ದಾರೆ.

ಹ್ಯಾರಿ ದಂಪತಿಯ ರಾಣಿ ಎಲಿಜಬೆತ್‌ ಅವರನ್ನೂ ಸಹ ಸಂಪರ್ಕಿಸದೇ, ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಜಮನೆತನಕ್ಕೆ ತೀವ್ರ ನೋವುಂಟು ಮಾಡಿದೆ. ಇದು ಎಲ್ಲರನ್ನೂ ನಿರಾಶೆಗೊಳ್ಳುವಂತೆ ಮಾಡಿದೆ ಎಂದು ಟೆಲಿಗ್ರಾಫ್‌ ವರದಿ ಮಾಡಿದೆ. 

‘ಮೆಗ್‌ಕ್ಸಿಟ್‌’ ಎಂಬ ಆನ್‌ಲೈನ್‌ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವುದು ಅವರ ವೈಯಕ್ತಿಕ. ಅರಮನೆಯಿಂದ ಯಾವುದೇ ಅನುಮೋದನೆ ಪಡೆದಿಲ್ಲ ಎಂದು ಹೇಳಲಾಗಿದೆ. 

‘ತಮ್ಮ ಹಿರಿಯ ಸಹೋದರ ವಿಲಿಯಂ ಜೊತೆಗೆ ಬಿರುಕು ಉಂಟಾಗಿರುವುದನ್ನು ಪ್ರಸ್ತಾಪಿಸಿರುವ ಹ್ಯಾರಿ, ನಾವಿಬ್ಬರೂ ವಿಭಿನ್ನ ಮಾರ್ಗಗಳಲ್ಲಿ ನಡೆಯುತ್ತಿದ್ದೇವೆ’ ಎಂದು ಹೇಳಿದ್ದಾರೆ ಎಂದು ಬಿಬಿಸಿ ಹೇಳಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು