ಶುಕ್ರವಾರ, ಜುಲೈ 30, 2021
20 °C

ಆರಂಭಿಕ ಹಂತದಲ್ಲಿ ಕೋವಿಡ್ ಪರೀಕ್ಷೆ ನಡೆಸಿದರೆ ಸೋಂಕು ಪತ್ತೆಯಾಗಲ್ಲ: ಅಧ್ಯಯನ ವರದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

covid-19

ವಾಷಿಂಗ್ಟನ್: ಆರಂಭಿಕ ಹಂತದಲ್ಲಿ ಹಂತದಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ಕೆಲವೊಮ್ಮೆ ಅದು ನೆಗೆಟಿವ್ ಆಗುವ ಸಾಧ್ಯತೆ ಇದೆ. ಅಂದರೆ ಪರೀಕ್ಷೆ ವರದಿಯಲ್ಲಿ ಸೋಂಕು ದೃಢಪಟ್ಟಿರುವುದಿಲ್ಲ. ಆದರೆ ಕ್ರಮೇಣ ಸೋಂಕು ಜಾಸ್ತಿಯಾಗಿ, ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ನಿಯತಕಾಲಿಕದಲ್ಲಿ ಈ ಹಿಂದೆ ನಡೆದ 7 ಅಧ್ಯಯನಗಳಲ್ಲಿ ಆರ್‌ಟಿ - ಪಿಸಿಆರ್ (ವೈರಲ್ ಜೆನೆಟಿಕ್ ವಸ್ತುಗಳನ್ನು ಪತ್ತೆ ಹಚ್ಚುವ ಪರೀಕ್ಷೆ) ಮಾಹಿತಿಗಳನ್ನು ಆಧರಿಸಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿಯ ಅಧ್ಯಯನಕಾರರು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಂದ 1,330 ರೆಸ್ಪಿರೇಟರಿ ಸ್ವಾಬ್ (ಗಂಟಲ ದ್ರವದ ಸ್ಯಾಂಪಲ್)ಬಳಸಿ ಅಧ್ಯಯನ ನಡೆಸಿದ್ದಾರೆ.

ರೋಗ ಲಕ್ಷಣಗಳು ಇಲ್ಲದೆ, ಸೋಂಕು ಇಲ್ಲ ಎಂದು ವರದಿ ಬಂದಿರುವ ವ್ಯಕ್ತಿಗೆ ವೈರಸ್ ಸೋಂಕು ಇಲ್ಲ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಅಂತಾರೆ ಜಾನ್ಸ್ ಹಾಪ್ಕಿನ್ಸ್  ಯುನಿವರ್ಸಿಟಿಯ ಸಹ ಲೇಖಕಿ ಲೌರೆನ್ ಕುಸಿರ್ಕಾ.

ನೆಗೆಟಿವ್ ವರದಿ ಬಂದಿದ್ದರೂ ನಾವು ನಡೆಸಿದ ಪರೀಕ್ಷೆ ಸರಿಯಾಗಿದೆ ಎಂದು ಅಂದುಕೊಳ್ಳುವುದು ಇತರರ ಜೀವಕ್ಕೂ ಅಪಾಯವನ್ನು ತಂದುಕೊಡುತ್ತದೆ. ಅದೇ ವೇಳೆ ವೈರಸ್ ಸೋಂಕು ತಗುಲಿದವರೇ ಸೋಂಕು ವಾಹಕಗಳಾಗಿರುತ್ತಾರೆ ಎಂದು ಕುಸಿರ್ಕಾ ಅಭಿಪ್ರಾಯಪಟ್ಟಿದ್ದಾರೆ.

ವಿಜ್ಞಾನಿಗಳ ಪ್ರಕಾರ ಸೋಂಕು ತಗುಲುವುದಕ್ಕೆ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳನ್ನು ಸೋಂಕು ತಗುಲಿರುವ ವ್ಯಕ್ತಿಗಳಂತೆಯೇ ನೋಡಿಕೊಳ್ಳಬೇಕು. ಕೋವಿಡ್-19 ರೋಗ ಲಕ್ಷಣಗಳಿದ್ದರೆ ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕು.

ಆರ್‌ಟಿ- ಪಿಸಿಆರ್ ಪರೀಕ್ಷೆಗಳು ಕೆಲವೊಮ್ಮೆ ಸೋಂಕು ಇಲ್ಲ ಎಂದು ತೋರಿಸಬಹುದು ಎಂಬುದರ ಬಗ್ಗೆ ವಿವರಿಸಿದ ವಿಜ್ಞಾನಿಗಳು ಸ್ವಾಬ್‌ ಮೂಲಕ ಮಾದರಿ ಸಂಗ್ರಹಿಸುವ ಹೊತ್ತಲ್ಲಿ ವೈರಸ್ ಇರುವ ಕೋಶವು ಸ್ವಾಬ್‌ಗೆ ಸಿಗದೇ ಇದ್ದರೆ, ಸೋಂಕು ಇಲ್ಲ ಎಂದೇ ಪರೀಕ್ಷೆಗಳು ತೋರಿಸುತ್ತವೆ. ಮೊದಲ ಹಂತದಲ್ಲಿ ಸೋಂಕು ಕಡಿಮೆ ಇದ್ದರೂ ಸೋಂಕು ಪರೀಕ್ಷೆ ನೆಗೆಟಿವ್ ಆಗಿ ತೋರಿಸುತ್ತದೆ.

ಆದಾಗ್ಯೂ,ಈ ಪರೀಕ್ಷೆಗಳು ತುಲನಾತ್ಮಕವಾಗಿ ತ್ವರಿತ ಫಲಿತಾಂಶಗಳನ್ನು ನೀಡುತ್ತವೆ. ಹಾಗಾಗಿ ನರ್ಸಿಂಗ್ ಹೋಮ್‌ನಲ್ಲಿರುವವರು, ಆಸ್ಪತ್ರೆಗೆ ದಾಖಲಾದ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಈ ರೀತಿಯ ಪರೀಕ್ಷೆಗೊಳಪಡಿಸಲಾಗುತ್ತದೆ.

ಈ ರೀತಿಯ ಜನರಲ್ಲಿ ಈ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದ್ದರೂ ಅದು ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಸ್ತುತ ಸಂಶೋಧನೆಯಲ್ಲಿ, ಆರ್‌ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು ಬಳಸುವುದರ ಜೊತೆಗೆ, ವೈರಸ್‌ಗೆ ತೆರೆದುಕೊಳ್ಳುವ ಸಮಯ ಅಥವಾ ಜ್ವರ ಮತ್ತು ಉಸಿರಾಟದ ತೊಂದರೆಗಳು ರೋಗಲಕ್ಷಣಗಳ ಪ್ರಾರಂಭದ ಸಮಯದೊಂದಿಗೆ, ಸಂಶೋಧಕರು SARS-CoV-2 ಸೋಂಕಿಗೆ ಒಳಗಾಗುವ ಸಂಭವನೀಯತೆಯನ್ನು ಲೆಕ್ಕಹಾಕಿದ್ದು ಇದು ಸೋಂಕಿನ ಸಮಯದಲ್ಲಿ ನಕಾರಾತ್ಮಕ ಪರೀಕ್ಷಾ ಫಲಿತಾಂಶವನ್ನು ಹೊಂದಿರುತ್ತದೆ.

ಆರೋಗ್ಯ ಕಾರ್ಯಕರ್ತರು ರೋಗಿಗಳಿಂದ ಮೂಗಿನ ಮತ್ತು ಗಂಟಲಿನ ಮಾದರಿಗಳನ್ನು ಸಂಗ್ರಹಿಸಿ, ವೈರಸ್ ಇರುವಿಕೆ ಅಥವಾ ರೋಗಲಕ್ಷಣ ಮತ್ತು ಮಾದರಿ ಸಂಗ್ರಹಣೆಯ ಸಮಯದಲ್ಲಿದ್ದ ಲಕ್ಷಣಗಳನ್ನು ಅಧ್ಯಯನಕಾರರು ಗಮನಿಸಿದ್ದಾರೆ.

ಈ ಮಾಹಿತಿ ಪ್ರಕಾರ ಸೋಂಕಿನ ನಂತರದ ನಾಲ್ಕು ದಿನಗಳಲ್ಲಿ SARS-CoV-2 ನೊಂದಿಗೆ ಪರೀಕ್ಷಿಸಿದವರು ವೈರಸ್ ಹೊಂದಿದ್ದರೂ ನೆಗೆಟಿವ್ ಎಂದು ವರದಿ ಬರುವ ಸಾಧ್ಯತೆ ಶೇ. 67  ಹೆಚ್ಚು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಸಾಮಾನ್ಯ ರೋಗಿಯು ವೈರಸ್‌ನ ಲಕ್ಷಣಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದಾಗ, ಸುಳ್ಳು- ನೆಗೆಟಿವ್ ಪ್ರಮಾಣವು ಶೇಕಡಾ 38 ರಷ್ಟಿತ್ತು ಎಂದು ಅಧ್ಯಯನವು ತಿಳಿಸಿದೆ.

ಅಧ್ಯಯನಕಾರರ ಪ್ರಕಾರ, ಪರೀಕ್ಷೆಯು ಸೋಂಕಿನ ಎಂಟು ದಿನಗಳ ನಂತರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ರೋಗಲಕ್ಷಣ ಕಾಣಿಸಿಕೊಂಡು ಸರಾಸರಿ ಮೂರು ದಿನಗಳ ನಂತರ. ಆದರೆ ಆಗಲೂ, ಪರೀಕ್ಷೆಯು ಶೇ.20 ರಷ್ಟು ತಪ್ಪು ನೆಗೆಟಿವ್ ದರವನ್ನು ಹೊಂದಿದೆ ಎಂದು ಅವರು ಹೇಳಿದರು.ಅಂದರೆ ವೈರಸ್ ಹೊಂದಿರುವ ಐದು ಜನರಲ್ಲಿ ಒಬ್ಬರು ನಕಾರಾತ್ಮಕ ಪರೀಕ್ಷಾ ಫಲಿತಾಂಶವನ್ನು ಹೊಂದಿದ್ದಾರೆ.

ನಾವು COVID-19 ಅನ್ನು ಪತ್ತೆ ಹಚ್ಚಲು ಈ ಪರೀಕ್ಷೆಗಳನ್ನು ಬಳಸುತ್ತಿದ್ದೇವೆ. ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡುವ ಮೂಲಕ ಪ್ರಸರಣವನ್ನು ತಡೆಗಟ್ಟಲು ನಾವು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಕುಸಿರ್ಕಾ ಹೇಳುತ್ತಾರೆ.

ಪರೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಯನ್ನು ಅವಲಂಬಿಸಿರುವ ಸೇವೆಗಳು, ವ್ಯವಹಾರಗಳು ಮತ್ತು ಇತರ ಸ್ಥಳಗಳನ್ನು ಪುನಃ ತೆರೆಯುತ್ತಿರುವುದರಿಂದ ಈ ಪರೀಕ್ಷೆಗಳ ಮಿತಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಶೀಘ್ರದಲ್ಲೇ ಜನರನ್ನು ನಿಖರವಾಗಿ ಪರೀಕ್ಷಿಸಿ ಇತರರಿಂದ ಪ್ರತ್ಯೇಕಿಸಬಹುದು. ವೈರಸ್ ಹರಡುವುದನ್ನು ನಾವು ಉತ್ತಮವಾಗಿ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು