ಮಂಗಳವಾರ, ಡಿಸೆಂಬರ್ 10, 2019
26 °C
ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟ

ಡೆನಿಸ್‌ ಮುಕ್ವೆಜ್‌, ನಾಡಿಯಾ ಮುರದ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಒಸ್ಲೊ: ‘ಲೈಂಗಿಕ ಹಿಂಸಾಚಾರವನ್ನು ಯುದ್ಧದ ಅಸ್ತ್ರವಾಗಿ ಬಳಸುವುದನ್ನು ಕೊನೆಗಾಣಿಸಬೇಕು’ ಎಂದು ಹೋರಾಟ ನಡೆಸಿದ ಇಬ್ಬರನ್ನೂ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿಯ ಅದ್ಯಕ್ಷೆ ಬೆರಿಟ್‌ರ ರೆಯಿಸ್‌ ಆ್ಯಂಡರ್ಸನ್‌ ಅವರು ತಿಳಿಸಿದರು.

‘ಶಾಂತಿಯ ಜಗತ್ತು ನಿರ್ಮಾಣವಾಗಬೇಕಾದರೆ, ಮಹಿಳೆಯರಿಗೆ ಮೂಲಭೂತ ಹಕ್ಕು, ಯುದ್ಧದ ಸಂದರ್ಭದಲ್ಲಿ ಆಕೆಯ ರಕ್ಷಣೆ ಮತ್ತು ಭದ್ರತೆ ಖಾತ್ರಿಯಾದಾಗ ಮಾತ್ರ ಸಾಧ್ಯ’ ಎಂದರು.

ಪವಾಡ ವೈದ್ಯ: ಯುದ್ಧಪೀಡಿತ ಪೂರ್ವ ಕಾಂಗೋ ಪ್ರದೇಶದಲ್ಲಿ ಹಿಂಸಾಚಾರ ಹಾಗೂ ಲೈಂಗಿಕ ಕಿರುಕುಳ, ಅತ್ಯಾಚಾರದಿಂದ ನಲುಗಿದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಕಳೆದೆರಡು ದಶಕಗಳಿಂದ ಶ್ರಮಿಸಿದ 63 ವರ್ಷದ ಮುಕ್ವೆಜ್‌ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ದಕ್ಷಿಣ ಕಿವು ಪಟ್ಟಣದಲ್ಲಿ ಮುಕ್ವೆಜ್‌ ಸ್ಥಾಪಿಸಿರುವ ಪಾಂಜಿ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಹಸುಳೆಯಿಂದ ಹಿಡಿದು, ಮಹಿಳೆಯರ ತನಕ ಹತ್ತು ಸಾವಿರಕ್ಕೂ ಹೆಚ್ಚಿನ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದಾರೆ. ಇವರ ಈ ಸೇವೆಯಿಂದ ಪವಾಡ ವೈದ್ಯ (ಡಾಕ್ಟರ್‌ ಮಿರಾಕಲ್‌) ಎಂದು ಖ್ಯಾತಿ ಗಳಿಸಿದ್ದಾರೆ.

ಯುದ್ಧಪೀಡಿತ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಕಟುವಾಗಿ ಟೀಕಿಸುವ ಮುಕ್ವೆಜ್‌, ಅತ್ಯಾಚಾರ ಎಂಬುದು ಸಾಮೂಹಿಕ ನಾಶದ ಅಸ್ತ್ರ ಎಂದು ಕಟುವಾಗಿ ಟೀಕಿಸಿದ್ದಾರೆ.

ಹೋರಾಟಗಾರ್ತಿಗೆ ಸಂದ ಗೌರವ: ಇರಾಕ್‌ ದೇಶದ 25 ವರ್ಷದ ಯಾಜಿದಿ ಸಮುದಾಯದ ನಾಡಿಯಾ ಮುರಾದ್‌, ಸ್ವತಃ ಲೈಂಗಿಕ ಹಿಂಸಾಚಾರಕ್ಕೆ ತುತ್ತಾದವರು.

2014ರಲ್ಲಿ ಮುರಾದ್‌ ಅವರನ್ನು ಇಸ್ಲಾಮಿಕ್‌ ಸ್ಟೇಟ್‌ನ ಉಗ್ರರು ಅಪಹರಿಸಿ, ಮೂರು ತಿಂಗಳ ಕಾಲ ‘ಲೈಂಗಿಕ ಗುಲಾಮೆ’ಯಾಗಿ ಇರಿಸಿಕೊಂಡಿದ್ದರು. ನಂತರ ಅಲ್ಲಿಂದ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಸ್ವತಃ ನೋವು ನುಂಗಿ ಎಲ್ಲವನ್ನೂ ಧೈರ್ಯವಾಗಿ ಎದುರಿಸಿದ್ದಾರೆ. 

ಸದ್ಯ, ಇವರು ವಿಶ್ವಸಂಸ್ಥೆ ಸದ್ಭಾವನಾ ರಾಯಭಾರಿಯಾಗಿದ್ದಾರೆ.

‘ಯುದ್ಧ ಅಪರಾಧ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಡೆನಿಸ್‌ ಮುಕ್ವೆಜ್‌ ಹಾಗೂ ನಾಡಿಯಾ ಮುರಾದ್‌ ಅವರು ತಮ್ಮ ಜೀವವನ್ನೇ ಅಪಾಯಕ್ಕೊಡಿ ಹೋರಾಟ ನಡೆಸಿದ್ದರು’ ಎಂದು ನಾರ್ವೆಯ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ 331 ಮಂದಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಇದು ಈವರೆಗಿನ ದಾಖಲೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಡಿಸೆಂಬರ್‌ 10ರಂದು ನಾರ್ವೆಯ ಒಸ್ಲೊದಲ್ಲಿ ನಡೆಯಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು