ಶನಿವಾರ, ಅಕ್ಟೋಬರ್ 19, 2019
27 °C
ಅಶ್ರಫ್ ಘನಿ ಪಾರು * ಸಾವಿನ ಸಂಖ್ಯೆ ಹೆಚ್ಚುವ ಭೀತಿ

ಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ರ್‍ಯಾಲಿ ವೇಳೆ ಬಾಂಬ್ ಸ್ಫೋಟ: ಕನಿಷ್ಠ 24 ಸಾವು

Published:
Updated:

ಕಾಬೂಲ್: ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರ ಚುನಾವಣಾ ರ್‍ಯಾಲಿ ನಡೆಯುತ್ತಿದ್ದ ಪ್ರದೇಶಕ್ಕೆ ಸಮೀಪದಲ್ಲಿ ಮಂಗಳವಾರ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 24 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪರ್‌ವಾನ್ ಪ್ರಾಂತ್ಯದ ಚರಿಕರ್ ಎಂಬಲ್ಲಿ ರ್‍ಯಾಲಿ ನಡೆಯುತ್ತಿದ್ದ ಪ್ರದೇಶದ ಸನಿಹದಲ್ಲಿ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್, ಅಧ್ಯಕ್ಷ ಘನಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಲ್‌ ಜಝೀರಾ ಸುದ್ದಿ ತಾಣ ವರದಿ ಮಾಡಿದೆ.

ಸದ್ಯ ಯಾವುದೇ ಸಂಘಟನೆಯು ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಗಾಯಾಳುಗಳಲ್ಲಿ ಮಕ್ಕಳು, ಮಹಿಳೆಯರೂ ಸೇರಿದ್ದಾರೆ ಎಂದು ಪರ್‌ವಾನ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆ ಮುಖ್ಯಸ್ಥ ಅಬ್ದುಲ್ ಕಾಸಿಂ ಸಾಂಗಿನ್ ತಿಳಿಸಿದ್ದಾರೆ.

‘ಗಾಯಾಳುಗಳಲ್ಲಿ ಬಹುತೇಕರು ನಾಗರಿಕರು. ಇನ್ನಷ್ಟು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ. ಸಾವಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ಈ ತಿಂಗಳ ಕೊನೆಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

Post Comments (+)