ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಸಚಿವರನ್ನು ಕೊಟ್ಟ ಊರಲ್ಲಿ ತ್ರಿಕೋನ ಸ್ಪರ್ಧೆ

ಹಿರಿಯೂರು: ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಯತ್ನ
Last Updated 9 ಮೇ 2018, 9:35 IST
ಅಕ್ಷರ ಗಾತ್ರ

ಹಿರಿಯೂರು: ಹ್ಯಾಟ್ರಿಕ್ ಸಾಧನೆಗೆ ಮುನ್ನುಗ್ಗುತ್ತಿರುವ ಶಾಸಕ ಡಿ.ಸುಧಾಕರ್ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತೀವ್ರ ಪ್ರತಿರೋಧ ಒಡ್ಡಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಪರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ್
ಪರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಶಾಸಕ ಸುಧಾಕರ್‌ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ ಅಹಮ್ಮದ್‌ ಬಿರುಸಿನ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಅಭ್ಯರ್ಥಿಗಳ ಶಕ್ತಿ, ಪಕ್ಷದ ವರ್ಚಸ್ಸು, ಜಾತಿ ಬಲ ಗೆಲುವಿನಲ್ಲಿ ನಿರ್ಣಾಯಕವಾಗಲಿವೆ ಎಂಬುದು ಪ್ರಜ್ಞಾವಂತರ ಲೆಕ್ಕಾಚಾರ.

1952ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. 1962 ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಹಿರಿಯೂರು, 1967 ರಿಂದ 2008ರ ವರೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಚ್.ರಂಗನಾಥ್ ಐದು ಬಾರಿ ಮತ್ತು ಜೆಡಿಎಸ್‌ ಮುಖಂಡರೂ ಆಗಿದ್ದ ಡಿ.ಮಂಜುನಾಥ್‌ ಮೂರು ಬಾರಿ ಗೆಲುವು ಸಾಧಿಸಿದ್ದರು. 2008ರಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಡಿ.ಸುಧಾಕರ್‌ ಗೆಲುವು ಸಾಧಿಸಿ ಸಚಿವರಾಗಿದ್ದರು. ಮೂವರು ಸಚಿವರನ್ನು ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಹಿರಿಯೂರಿಗೆ ಇದೆ.

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಸುಧಾಕರ್‌ 71,661 ಮತಗಳನ್ನುಪಡೆದು ಶಾಸಕರಾಗಿ ಪುನರಾಯ್ಕೆ ಆಗಿದ್ದರು. ಜೆಡಿಎಸ್‌ ಅಭ್ಯರ್ಥಿ ಎ.ಕೃಷ್ಣಪ್ಪ 70,064 ಮತಗಳನ್ನು ಪಡೆದು, ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದರು. ಬಿಎಸ್‌ಆರ್‌ ಕಾಂಗ್ರೆಸ್‌ನ ಎಂ.ಜಯಣ್ಣ 6,965, ಬಿಜೆಪಿಯ ಎಸ್‌.ಸಿದ್ದೇಶ್‌ ಯಾದವ್‌ 2,880 ಹಾಗೂ ಕೆಜೆಪಿಯ ಎಂ.ತಿಪ್ಪೇಸ್ವಾಮಿ 2,570 ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಪೂರ್ಣಿಮಾ ಅವರು ಎ.ಕೃಷ್ಣಪ್ಪ ಅವರ ಪುತ್ರಿ. ತಂದೆಯ ವರ್ಚಸ್ಸನ್ನು ಪೂರ್ಣಿಮಾ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಜೈನ ಸಮುದಾಯಕ್ಕೆ ಸೇರಿರುವ ಸುಧಾಕರ್ ಅವರಿಗೆ ಜಾತಿ ಬಲವಿಲ್ಲ. ಚುನಾವಣಾ ಪ್ರಚಾರಕ್ಕೆ ಶಾಸಕರ ಪತ್ನಿ,
ಪುತ್ರ, ಪುತ್ರಿ, ಅಳಿಯ, ಸಹೋದರರು ಇಳಿದಿದ್ದು, ತಂಡ ತಂಡವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹತ್ತು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವ ಸುಧಾಕರ್‌, ಈವರೆಗೆ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಗೊಲ್ಲ ಜನಾಂಗಕ್ಕೆ ಸೇರಿರುವ ಪೂರ್ಣಿಮಾ, ನಾಲ್ಕೂವರೆ ವರ್ಷದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಎರಡು ಬಾರಿ ಬಿಬಿಎಂಪಿ ಸದಸ್ಯ ಕೂಡ ಆಗಿದ್ದರು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಯಶೋಧರ್ ಜಾತಿ ಮತಗಳೊಂದಿಗೆ ಇತರೆ ಸಮುದಾಯದ ಮತಗಳನ್ನು
ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಇವರಿಗೆ ಪಕ್ಷದ ನಾಯಕರು ಸಾಥ್ ನೀಡಿದ್ದಾರೆ. ಜೆಡಿಎಸ್‌ ಮೂಲ ಮತಗಳು ಚದುರುವುದಿಲ್ಲವೆಂಬ ನಂಬಿಕೆ ಇವರದು. ಹೀಗಾಗಿ, ಗೆಲುವಿನ ದಡ ಸೇರುವವರು ಯಾರು ಎಂಬ ಪ್ರಶ್ನೆ ಮತದಾರರನ್ನು ಕಾಡುತ್ತಿದೆ.

ಮತದಾರರ ಅಂಕಿ–ಅಂಶ

ಪುರುಷರು 1,17,653

ಮಹಿಳೆಯರು 1,17,755

ಇತರ ಮತದಾರರು  36

ಒಟ್ಟು ಮತದಾರರು 2,35,444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT