ಸೋಮವಾರ, ಆಗಸ್ಟ್ 19, 2019
23 °C

ಭಾರತಕ್ಕೆ ಪಾಠ ಕಲಿಸುವ ಕಾಲ ಬಂದಿದೆ: ಇಮ್ರಾನ್‌ ಖಾನ್‌

Published:
Updated:
Prajavani

ಇಸ್ಲಾಮಾಬಾದ್‌: ‘ಭಾರತದ ಆಕ್ರಮಣಶೀಲತೆಗೆ ಪ್ರತ್ಯುತ್ತರ ನೀಡುವ ಕಾಲ ಬಂದಿದೆ. ಕಾಶ್ಮೀರದಲ್ಲಿ ಯಾವುದೇ ಸೇನಾ ಕಾರ್ಯಾಚರಣೆ ನಡೆಸಿದರೆ ಕೊನೆಯುಸಿರು ಇರುವವರೆಗೂ ಹೋರಾಟಕ್ಕೆ ಸಿದ್ಧವಾಗಿದ್ದೇವೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯೋವ ಮತ್ತು ಏಕತಾ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಶ್ಮೀರದ ಜನರಿಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ‘ಪಾಕಿಸ್ತಾನವು ಜಾಗತಿಕ ಮಟ್ಟದಲ್ಲಿ ಕಾಶ್ಮೀರದ ಧ್ವನಿಯಾಗಲಿದೆ. ವಿಶ್ವಸಂಸ್ಥೆ ಸೇರಿದಂತೆ ಪ್ರತಿಯೊಂದು ಅಂತರರಾಷ್ಟ್ರೀಯ ವೇದಿಕೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಿದೆ’ ಎಂದರು.

‘ಪುಲ್ವಾಮಾ ಘಟನೆಯ ನಂತರ ನಡೆಸಿದಂಥ ಕಾರ್ಯಾಚರಣೆಗೂ ತೀವ್ರವಾದ ಕಾರ್ಯಾಚರಣೆಯನ್ನು ಕಾಶ್ಮೀರದಲ್ಲಿ ನಡೆಸಲು ಭಾರತವು ಸಿದ್ಧತೆ ನಡೆಸಿದೆ ಎಂಬ ನಿಖರ ಮಾಹಿತಿ ಪಾಕಿಸ್ತಾನಕ್ಕೆ ಲಭ್ಯವಾಗಿದೆ. ಹಾಗೇನಾದರೂ ಮಾಡಿದರೆ ಪಾಕಿಸ್ತಾನ ಸೇನೆಯು ಭಾರತಕ್ಕೆ ತಕ್ಕ ಉತ್ತರ ನೀಡುವುದು. ‘ನಿಮಗೆ ಪಾಠ ಕಲಿಸುವ ಕಾಲ ಕೂಡಿಬಂದಿದೆ. ನೀವು ಕಾರ್ಯಾಚರಣೆ ನಡೆಸಿ, ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂಬ ಸಂದೇಶವನ್ನು ಮೋದಿಗೆ ನೀಡಲು ಬಯಸುತ್ತೇನೆ’ ಎಂದು ಇಮ್ರಾನ್‌ ಹೇಳಿದರು.

ಕಾಶ್ಮೀರ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯ ಮೌನ ವಹಿಸಿರುವುದನ್ನು ಪ್ರಶ್ನಿಸಿದ ಇಮ್ರಾನ್‌, ‘ಈ ವಿಷಯವಾಗಿ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆದರೆ ಅದಕ್ಕೆ ಅಂತರರಾಷ್ಟ್ರೀಯ ಸಮುದಾಯವೇ ಹೊಣೆಯಾಗಲಿದೆ. 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಭಾರತವು ಪ್ರಮಾದ ಎಸಗಿದೆ. ಮೋದಿ ಹಾಗೂ ಬಿಜೆಪಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲಬಾರಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಭೇಟಿನೀಡಿದ್ದ ಅವರು ಅಲ್ಲಿನ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿಯೂ ಪಾಲ್ಗೊಂಡು ಭಾಷಣ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ ಎಂದು ಕಳೆದ ವಾರ ವರದಿಯಾಗಿತ್ತು. ಜೊತೆಗೇ ‘ಭಾರತದ ಜೊತೆ ಯಾವುದೇ ಸೇನಾ ಕಾರ್ಯಾಚರಣೆ ನಡೆಸಲು ಇಚ್ಛಿಸುವುದಿಲ್ಲ’ ಎಂದು ಪಾಕಿಸ್ತಾನ ಹೇಳಿತ್ತು.

ಕಾಶ್ಮೀರಿಗಳ ಜೊತೆ ನಾವಿದ್ದೇವೆ: ‘ಕಾಶ್ಮೀರಿಗಳು ಮತ್ತು ಪಾಕಿಸ್ತಾನಿಗಳು ಒಂದೇ, ಕಾಶ್ಮೀರದ ಜನರಿಗೆ ಪಾಕಿಸ್ತಾನದ ಬೆಂಬಲ ಮುಂದುವರಿಯಲಿದೆ’ ಎಂದು ಪಾಕ್‌ ಅಧ್ಯಕ್ಷ ಅರೀಫ್‌ ಅಲ್ವಿ ಹೇಳಿದ್ದಾರೆ.

ಪಾಕಿಸ್ತಾನದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಅವರನ್ನು ಏಕಾಂಗಿಯಾಗಲು ಬಿಡುವುದಿಲ್ಲ. ನಾವು ಸಮಾನ ದುಃಖಿಗಳು. ಅವರ ಕಣ್ಣೀರು ನಮ್ಮ ಹೃದಯದಲ್ಲಿ ನೋವು ಉಂಟುಮಾಡುತ್ತದೆ. ಹಿಂದೆಯೂ ನಾವು ಅವರ ಜೊತೆಗಿದ್ದೆವು, ಮುಂದೆಯೂ ಇರುತ್ತೇವೆ’ ಎಂದರು.

ತುರ್ತು ಸಭೆಗೆ ಒತ್ತಾಯ: ಭಾರತ ಸರ್ಕಾರವು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ವಿಚಾರವಾಗಿ ಚರ್ಚಿಸಲು ವಿಶೇಷ ಸಭೆ ಆಯೋಜಿಸುವಂತೆ ಪಾಕಿಸ್ತಾನ ಸರ್ಕಾರವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರು ವಿಶ್ವಸಂಸ್ಥೆಗೆ ಈ ಬಗ್ಗೆ ಅಧಿಕೃತ ಪತ್ರ ರವಾನಿಸಿದ್ದಾರೆ.

Post Comments (+)