ಗುರುವಾರ , ನವೆಂಬರ್ 21, 2019
22 °C
ಸಮೀಕ್ಷೆಯಲ್ಲಿ ಪಾಕಿಸ್ತಾನದ ಸಾಮಾನ್ಯ ಜನರ ಅಭಿಮತ

ಪಾಕ್‌ಗೆ ಹಣದುಬ್ಬರವೇ ಸಮಸ್ಯೆ

Published:
Updated:

ಇಸ್ಲಾಮಾಬಾದ್‌ : ಹಣದುಬ್ಬರ ಸಮಸ್ಯೆ ಪಾಕಿಸ್ತಾನವನ್ನು ಆವರಿಸಿದೆ. ಇದು, ಆ ದೇಶದ ಜನರಿಗೆ ಕಾಶ್ಮೀರಕ್ಕಿಂತಲೂ ಅತಿಹೆಚ್ಚಾಗಿ ಬಾಧಿಸುತ್ತಿರುವ ದೊಡ್ಡ ಸಮಸ್ಯೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹಣದ ತೀವ್ರ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಗಲ್ಲುಪ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಗಲ್ಲುಪ್‌ ಮತ್ತು ಗಿಲಾನಿ ಪಾಕಿಸ್ತಾನ್‌ನಲ್ಲಿ ಸಮೀಕ್ಷೆ ವಿವರಗಳು ಪ್ರಕಟವಾಗಿವೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಶೇ 53ರಷ್ಟು ಮಂದಿ ಆರ್ಥಿಕಬಿಕ್ಕಟ್ಟು ಮುಖ್ಯವಾಗಿ ಹಣದುಬ್ಬರ ದೇಶದ ಮುಂದಿರುವ ಅತಿದೊಡ್ಡ ಸಮಸ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಣದುಬ್ಬರದ ನಂತರದ ಸ್ಥಾನದಲ್ಲಿ ನಿರುದ್ಯೋಗ (ಶೇ 23), ಕಾಶ್ಮೀರ ವಿವಾದ (ಶೇ 8) ಮತ್ತು ಭ್ರಷ್ಟಾಚಾರ (ಶೇ 4), ನೀರಿನ ಬಿಕ್ಕಟ್ಟು (ಶೇ 4) ಇದ್ದು, ಇವು ದೇಶವನ್ನು ಕಾಡುತ್ತಿರುವ ಇತರ ಸಮಸ್ಯೆಗಳು ಎಂದು ಗುರುತಿಸಿದ್ದಾರೆ.

ಸಮೀಕ್ಷೆಗಾಗಿ ಬಲೂಚಿಸ್ತಾನ, ಖೈಬರ್‌ ಪಖ್ತುಂಕ್ವಾ, ಪಂಜಾಬ್‌, ಸಿಂಧ್‌ ಪ್ರಾಂತ್ಯದಲ್ಲಿ ಪುರುಷರು ಮತ್ತು ಮಹಿಳೆಯರ ಅಭಿಪ್ರಾಯಗಳನ್ನು ಆಲಿಸಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ. ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವನ್ನು ಕಾಡುತ್ತಿದೆ.

 

ಜಮ್ಮು– ಕಾಶ್ಮೀರ: ಮೋದಿ ನಿರ್ಧಾರಕ್ಕೆ ಮೆಚ್ಚುಗೆ

ವಾಷಿಂಗ್ಟನ್‌(ಪಿಟಿಐ): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದೃಢವಾದ ನಿಲುವಿಗೆ ಅಮೆರಿಕದ ರಿಪಬ್ಲಿಕನ್‌ ಸಂಸದ ಜಾರ್ಜ್‌ ಹೋಲ್ಡಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘370ನೇ ವಿಧಿ ರದ್ದುಪಡಿಸಿರುವುದು ಶ್ಲಾಘನೀಯ. ಸಂವಿಧಾನದಲ್ಲಿ ಕಲ್ಪಿಸಲಾಗಿದ್ದ ತಾತ್ಕಾಲಿಕ ಅವಕಾಶವನ್ನು ರದ್ದುಪಡಿಸುವುದು ಅಗತ್ಯವಾಗಿತ್ತು. ಈ ಕಾನೂನು ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಅಭಿವೃದ್ಧಿಗೆ ತೊಡಕಾಗಿತ್ತು ಹಾಗೂ ಪ್ರತ್ಯೇಕತೆಗೆ ಪ್ರಚೋದನೆ ನೀಡಿತ್ತು‘ ಎಂದು ಹೇಳಿದ್ದಾರೆ.

ಕರ್ತಾರಪುರ: ಪಾಸ್‌ಪೋರ್ಟ್‌ ಬೇಕಿಲ್ಲ

ಐತಿಹಾಸಿಕ ಪುಣ್ಯಕ್ಷೇತ್ರ ಕರ್ತಾರಪುರಕ್ಕೆ ತೆರಳುವ ಭಾರತದ ಸಿಖ್‌ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್‌ ಅಗತ್ಯವಿಲ್ಲ. ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶುಕ್ರವಾರ ಘೋಷಿಸಿದ್ದಾರೆ.

ಪ್ರಯಾಣದ ದಿನಕ್ಕಿಂತ 10 ದಿನ ಮುಂಚಿತವಾಗಿ ಭಾರತ ಯಾತ್ರಿಗಳ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡುವ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಉದ್ಘಾಟನೆ ದಿನ ಯಾತ್ರಾರ್ಥಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)