ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಮನೆಗೆ ಕುಮಾರಣ್ಣಾ’ ಶೇ 70ರಷ್ಟು ಯಶಸ್ವಿ

ಶೃಂಗೇರಿ: ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ವಸಂತಕುಮಾರ್ ಹೇಳಿಕೆ
Last Updated 29 ಮಾರ್ಚ್ 2018, 9:01 IST
ಅಕ್ಷರ ಗಾತ್ರ

ಶೃಂಗೇರಿ: ಜೆಡಿಎಸ್‌ನ ಮನೆ ಮನೆಗೆ ಕುಮಾರಣ್ಣಾ ಕಾರ್ಯಕ್ರಮವು ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 70 ಭಾಗ ಯಶಸ್ವಿಯಾಗಿ ನಡೆದಿದ್ದು, ಪಕ್ಷದ ಅಭ್ಯರ್ಥಿ ಎಚ್.ಜಿ.ವೆಂಕಟೇಶ್ ಈಗ ತಾಲ್ಲೂಕುವಾರು ಪ್ರವಾಸದಲ್ಲಿದ್ದಾರೆ ಎಂದು ಪಕ್ಷದ ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.

ಶೃಂಗೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುವುದು ಖಚಿತವಾಗಿದ್ದು, ಅಂದು ರೈತರ, ಕೃಷಿ ಕಾರ್ಮಿಕರ, ಮೀನುಗಾರರ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಆಗಲಿದೆ ಎಂದರು.

ಶೃಂಗೇರಿ ಕ್ಷೇತ್ರಾಧ್ಯಕ್ಷ ದಿವಾಕರ ಭಟ್ ಮಾತನಾಡಿ, ‘ರಾಜ್ಯದ ರೈತರಿಗೆ ಮತ್ತೊಮ್ಮೆ ತಮ್ಮ ಬದುಕು ಕಟ್ಟಿಕೊಳ್ಳುವಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳ ಗೆಲುವು ಅನಿವಾರ್ಯವಾಗಿದೆ. ನಮ್ಮ ಕ್ಷೇತ್ರದ ಮತದಾರರು ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಅವರ ಅಭಿವೃದ್ಧಿ ಕಾರ್ಯ ಹಾಗೂ ಅವರ ಪುತ್ರ ವೆಂಕಟೇಶ್ ಅವರ ಸರಳ ವ್ಯಕ್ತಿತ್ವವನ್ನು ಪರಿಗಣಿಸಿ ಈ ಬಾರಿ ಅವರನ್ನೇ ಆಯ್ಕೆ ಮಾಡಲಿದ್ದಾರೆ. ಕ್ಷೇತ್ರದಲ್ಲಿ ದಲಿತ ಸಂಘ ಸಮಿತಿ ಹಾಗೂ ಬಿ.ಎಸ್.ಪಿ ಕಾರ್ಯಕರ್ತರು ನಮ್ಮೊಂದಿಗೆ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿಯನ್ನು ತೊರೆದು ಮತ್ತೆ ಜನತಾದಳಕ್ಕೆ ಹಿಂದಿರುಗಿದ ಪುಷ್ಪಾ ಲಕ್ಷ್ಮೀನಾರಾಯಣ್ ಮಾತನಾಡಿ, ‘ಪಕ್ಷವು ಜನರ ಮನಸ್ಸನ್ನು ಗೆಲ್ಲುವ ಕಾರ್ಯಕ್ರಮಗಳ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಇದನ್ನು ಅನುಷ್ಠಾನಕ್ಕೆ ತರಬಲ್ಲ ಕುಮಾರಸ್ವಾಮಿ ಅವರು ಜನಮಾನಸದ ನಡುವಿನಲ್ಲಿ ಎದ್ದು ಬಂದವರಾಗಿದ್ದಾರೆ’ ಎಂದರು.

ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಖ್ವಾಜಾ ಮೊಯಿಯುದ್ದೀನ್ ಮಾತನಾಡಿ, ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳಾಗಿ ಹಿಂದೂ– ಮುಸ್ಲಿಂ ಸಮುದಾಯದ ನಡುವೆ ದೀರ್ಘಕಾಲದಿಂದ ನೆಲೆಯೂರಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸುಲಭವಾಗಿ ಪರಿಹರಿಸಿದ್ದರು ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಿ.ಜಿ.ಮಂಜುನಾಥ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ಕೂಡಲೇ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ಘೋಷಣೆಯನ್ನು ಮಾಡಿಸಿ ಮತ ಕೇಳಲಿ. ಜನರು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಸಂಘರ್ಷಗಳಿಂದ ಬೇಸತ್ತು ದುಷ್ಟರ ದೂರ ಮಾಡಲು ಜೆಡಿಎಸ್ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈಗಾಗಲೇ ಕಿಗ್ಗಾ ಪಂಚಾಯಿತಿ ಮಟ್ಟದ ಸಮಾವೇಶ ನಡೆದಿದ್ದು ಏ 2ರಂದು ಮೆಣಸೆಯಲ್ಲಿ ಕಸಬಾ ಹೋಬಳಿ ಮಟ್ಟದ ಸಮಾವೇಶ ನಡೆಯಲಿದೆ ಎಂದು ಅಧ್ಯಕ್ಷರು ಪ್ರಕಟಿಸಿದರು.

ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಎನ್.ಕೆ.ಸಗೀರ್ ಅಹಮದ್, ಉಪಾಧ್ಯಕ್ಷ ಅಯೂಬ್‌ ಖಾನ್, ಬಿ.ಮಹಮದ್, ಬ್ರದಿಯಾ ಮಹಮ್ಮದ್, ವಿವೇಕಾನಂದ, ಕೆ.ಎಸ್ ರಮೇಶ್ ,ಭರತ್ ಗಿಣಿಕಲ್, ಟಿ.ಟಿ.ಕಳಸಪ್ಪ, ಎಚ್.ಜಿ.ದೇವೇಂದ್ರ, ರಾಜಲಕ್ಷ್ಮೀ ದತ್ತಾತ್ರಿ ಹಾಗೂ ವಕ್ತಾರ ಶಿವಾನಂದರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT