ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: 10 ಸಾವಿರಕ್ಕೂ ಹೆಚ್ಚು ಸಾವು

ಕೋವಿಡ್‌: 1 ಲಕ್ಷದಿಂದ 2 ಲಕ್ಷದವರೆಗೂ ಸಾವು ಸಂಭವ– ಶ್ವೇತಭವನ
Last Updated 6 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ. ಆತಂಕ ಮಡುಗಟ್ಟಿದಂತೆ, ಜನ ಪರಸ್ಪರ ಅಂತರ ಕಾಯ್ದು ಕೊಳ್ಳಬೇಕು, ಆದಷ್ಟು ಮನೆಯಲ್ಲೇ ಇರಬೇಕು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಿಳಿಸಿದ್ದಾರೆ.

‘ಈವರೆಗೂ 16 ಲಕ್ಷ ಮಾದರಿಗಳ ಪರೀಕ್ಷೆ ನಡೆದಿದೆ. ದೇಶದಾದ್ಯಂತ ಇದನ್ನು ವಿಕೋಪ ಎಂದು ಘೋಷಿಸಲಾಗಿದೆ. 3.3 ಕೋಟಿ ಜನರು ಮನೆಯಲ್ಲಿಯೇ ಉಳಿದಿದ್ದಾರೆ’ ಎಂದು ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌ ಹೇಳಿದರು.

ಕೋವಿಡ್‌ನಿಂದಾಗಿ ಅಮೆರಿಕದಲ್ಲಿ ಭಾನುವಾರ ರಾತ್ರಿ ವೇಳೆಗೆ 9,500 ಮಂದಿ ಸತ್ತಿದ್ದರು. ಇದು, 9/11ರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗಿಂತಲೂ ಮೂರು ಪಟ್ಟು ಅಧಿಕ. ದೇಶದಲ್ಲಿ ಸುಮಾರು 3.47 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ.

ಸೋಂಕು ವಿರುದ್ಧ ಮಿಲಿಟರಿ ಶೈಲಿಯ ಕಾರ್ಯಾಚರಣೆ ನಡಸಲಾಗುತ್ತಿದೆ ಎಂದು ಬಣ್ಣಿಸಿದ ಟ್ರಂಪ್, ವಿವಿಧ ದೇಶಗಳಿಂದ ಸಾವಿರಾರು ಮುಖಗವಸು, ವೈದ್ಯಕೀಯ ಪರಿಕರಗಳನ್ನು ತರಿಸಲಾಗುತ್ತಿದೆ ಎಂದರು.

ಎಚ್ಚರಿಕೆ: ಅಮೆರಿಕನ್ನರು ಕಠಿಣ ಮತ್ತು ದುಃಖದಾಯಕವಾದ ವಾರ ಎದುರುಗೊಳ್ಳಲು ಸಜ್ಜಾಗಬೇಕಿದೆ. 9/11 ಅಥವಾ ಪರ್ಲ್‌ ಹಾರ್ಬರ್ ಬಾಂಬ್‌ ದಾಳಿ ಅಂಥದೇ ಇನ್ನೊಂದು ಅವಘಡಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಹಿರಿಯ ವೈದ್ಯರು ಎಚ್ಚರಿಸಿದ್ದಾರೆ.

* ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಕೋವಿಡ್–19 ಸೋಂಕಿಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ.

* ‘ಯುದ್ಧಕಾಲದಲ್ಲಿ ಸೈನಿಕರು ತೋರುವ ಶಿಸ್ತು, ಹೋರಾಡುವ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕೊರೊನಾ ವೈರಾಣು ವಿರುದ್ಧದ ಈ ಹೋರಾಟದಲ್ಲಿ ನಮಗೆ ಗೆಲುವು ಸಿಕ್ಕೇ ಸಿಗುತ್ತದೆ’ ಎಂದುಬ್ರಿಟನ್‌ ರಾಣಿ ಎಲಿಜಬೆತ್‌–2 ವಿಶ್ವಾಸ ವ್ಯಕ್ತಪಡಿಸಿದ್ದಾರೆ.

* ಕೊರೊನಾ ವೈರಾಣು ಪರಿಣಾಮದ ಹಿನ್ನೆಲೆಯಲ್ಲಿ ಜಪಾನ್‌ನಲ್ಲಿ ತುರ್ತು ಸ್ಥಿತಿ ಘೋಷಣೆಯಾಗುವ ಸಂಭವವಿದೆ ಎಂಬ ಸುಳಿವನ್ನುಪ್ರಧಾನಿ ಶಿಂಜೊ ಅಬೆ ನೀಡಿದ್ದಾರೆ.

* ಚೀನಾದಲ್ಲಿ ಸೋಮವಾರ ಹೊಸದಾಗಿ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾದ ವರದಿಯಾಗಿದೆ. ಅದರಲ್ಲಿ 38 ಪ್ರಕರಣಗಳು ವಿದೇಶಗಳಿಂದ ದೇಶಕ್ಕೆ ಮರಳಿದವರಲ್ಲಿ ಕಾಣಿಸಿಕೊಂಡಿವೆ.

* ಕೊರೊನಾ ವೈರಸ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಬೈಸಾಕಿ ಉತ್ಸವವನ್ನು ರದ್ದುಗೊಳಿಸಿರುವುದಾಗಿ ಪಾಕಿಸ್ತಾನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT