ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕೋವಿಡ್‌ನಿಂದ ಬಿಎಸ್‌ವೈ ದೆಹಲಿ ಭೇಟಿ ವಿಳಂಬ

ರಾಜ್ಯ ಸಂಪುಟ ಪುನರ್‌ ರಚನೆ ಮುಂದಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ಸಚಿವರು–ಸಂಗ್ರಹ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೋವಿಡ್‌ ಪಾಸಿಟಿವ್ ಆಗಿರುವ ಕಾರಣ ಸಚಿವ ಸಂಪುಟ ಪುನರ್‌ರಚನೆ ಇದೇ ತಿಂಗಳು ನಡೆಯುವ ಸಂಭವ ಇಲ್ಲ; ಮುಂದಕ್ಕೆ ಹೋಗುವ ಸಾಧ್ಯತೆಯೇ ಹೆಚ್ಚಿದೆ.

ಎಲ್ಲವೂ ಸರಿ ಇದ್ದರೆ ಮುಂದಿನ ವಾರ ದೆಹಲಿಗೆ ಹೋಗಿ, ಪುನರ್‌ರಚನೆಗೆ ಒಪ್ಪಿಗೆ ಪಡೆದುಕೊಂಡು ಬರಲು ಯಡಿಯೂರಪ್ಪ ತಯಾರಿ ನಡೆಸಿದ್ದರು. ನಾಲ್ಕರಿಂದ–ಐದು ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಹೊಂದಿದ್ದರು ಎಂದು ಆಪ್ತ ಮೂಲಗಳು ಹೇಳಿವೆ.

ಸ್ವತಃ ತಾವೇ ಕೋವಿಡ್‌ ಈಡಾಗಿರುವುದಲ್ಲದೆ, ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೋವಿಡ್‌‌ನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ತಿಂಗಳ ಅಂತ್ಯದೊಳಗೆ ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ. 

ಕೋವಿಡ್‌ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಯಾವುದೇ ಸಚಿವಾಕಾಂಕ್ಷಿ ಶಾಸಕರೂ ಒತ್ತಡ ಹೇರುವ ಸ್ಥಿತಿಯಲ್ಲೂ ಇಲ್ಲ. ಹೀಗಾಗಿ ಯಡಿಯೂರಪ್ಪ ಗಡಿಬಿಡಿ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಚರ್ಚೆಗೆ ಕಾರಣವಾದ ಜಾರಕಿಹೊಳಿ ಭೇಟಿ: ಜಲಸಂಪನ್ಮೂಲ ಸಚಿವ ರಮೇಶ‌ ಜಾರಕಿಹೊಳಿ ಅವರ ಎರಡು ದಿನಗಳ ದೆಹಲಿಯ ಭೇಟಿಯೂ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

‘ಜಾರಕಿಹೊಳಿಯವರು ತಮ್ಮನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಬೇಡಿಕೆ ಸಲ್ಲಿಸಲು ಹೋಗಿದ್ದರು. ಆದರೆ, ಯಾರ ಭೇಟಿಯೂ ಅವರಿಗೆ ಸಾಧ್ಯವಾಗಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಪಕ್ಷದ ಕೆಲವು ನಾಯಕರು ಕ್ವಾರಂಟೈನ್‌ಗೆ ಒಳಗಾಗಿದ್ದರೆ, ಇನ್ನು ಕೆಲವು ನಾಯಕರು ಯಾರನ್ನೂ ಭೇಟಿ ಮಾಡಲು ಇಚ್ಛಿಸುತ್ತಿಲ್ಲ. ಹೀಗಾಗಿ ರಮೇಶ ಅವರಿಗೆ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

‘ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡುವುದೇ ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಪರಿಗಣಿಸಬೇಕು. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂಬುದನ್ನು ವರಿಷ್ಠರ ಕಿವಿಗೆ ಹಾಕಲು ಜಾರಕಿಹೊಳಿ ಬಯಸಿದ್ದಾರೆ’ ಎಂಬ ಚರ್ಚೆಯೂ ಪಕ್ಷದ ವಲಯದಲ್ಲಿ ನಡೆದಿದೆ.

ಇಲಾಖೆಯ ಕೆಲಸದ ನಿಮಿತ್ತ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದರು. ಸಚಿವರ ಭೇಟಿ ಆಗದ ಕಾರಣ, ಅಧಿಕಾರಿಗಳು ಮತ್ತು ತಜ್ಞರ ಜತೆ ಮಾತುಕತೆ ನಡೆಸಿ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂದು ಜಾರಕಿ
ಹೊಳಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು