ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ.24ಕ್ಕೇ ಕೆಎಎಸ್‌ ಪೂರ್ವಭಾವಿ ಪರೀಕ್ಷೆ’

Last Updated 30 ಜುಲೈ 2020, 17:09 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಎಸ್‌ ಪೂರ್ವಭಾವಿ ಪರೀಕ್ಷೆಯು ನಿಗದಿಯಂತೆ ಆ.24ರಂದೇ ನಡೆಯಲಿದೆ. ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೇಳಿದೆ.

‘ಕೋವಿಡ್‌–19 ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ಬಾರಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನಿಗದಿಯಂತೆ ಪರೀಕ್ಷೆ ನಡೆಯಲಿದೆ’ ಎಂದು ಆಯೋಗದ ಕಾರ್ಯದರ್ಶಿ ಜಿ. ಸತ್ಯವತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್‌ಎಸ್‌ಎಲ್‌ಸಿ, ಸಿಇಟಿ ಸೇರಿದಂತೆ ಹಲವು ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಅದೇ ಮಾದರಿಯನ್ನು ಮುಂದಿಟ್ಟುಕೊಂಡು ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನೂ ನಡೆಸಲಾಗುವುದು’ ಎಂದು ಅವರು ಹೇಳಿದರು.

ಮುಂದೂಡಿಕೆಗೆ ಒತ್ತಾಯ:‘ಪೂರ್ವಭಾವಿ ಪರೀಕ್ಷೆ ಬರೆಯಲು ನಾಲ್ಕೈದು ತಿಂಗಳ ಸಿದ್ಧತೆ ಬೇಕಾಗುತ್ತದೆ. ಮಾರ್ಚ್‌–ಏಪ್ರಿಲ್‌ನಲ್ಲಿ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಲಾಕ್‌ಡೌನ್‌ ಘೋಷಿಸಲಾಯಿತು. ಈವರೆಗೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಪುನರಾರಂಭವಾಗಿಲ್ಲ. ಪರೀಕ್ಷೆ ತೆಗೆದುಕೊಂಡಿರುವ ಹಲವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಕುಟುಂಬ ಸದಸ್ಯರಿಗೂ ಹರಡಿದೆ. ಮಾನಸಿಕ ಒತ್ತಡದಲ್ಲಿ ಅವರಿಗೂ ಓದಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪರೀಕ್ಷೆ ಮುಂದೂಡಬೇಕು’ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

‘ಪರೀಕ್ಷೆಗೆ ಸಿದ್ಧತೆ ನಡೆಸಲು ರಾಜ್ಯದ ಇತರೆ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಬೆಂಗಳೂರು ಅಥವಾ ಧಾರವಾಡದಲ್ಲಿ ನೆಲೆಸಿದ್ದರು. ಅರ್ಜಿ ಸಲ್ಲಿಸುವ ವೇಳೆ, ಅಲ್ಲಿಯ ವಿಳಾಸವನ್ನೇ ನೀಡಿದ್ದರು. ಈಗ ಬಹುತೇಕರು ಸ್ವಂತ ಊರಿಗೆ ಮರಳಿದ್ದಾರೆ. ಈಗ ಪರೀಕ್ಷೆ ಬರೆಯಲು ಊರಿಂದ ಊರಿಗೆ ಓಡಾಡುವಾಗ ಸೋಂಕು ಹರಡುವ ಸಾಧ್ಯತೆಯಿದೆ’ ಎಂದಿದ್ದಾರೆ.

‘ಆಯೋಗವು ವರ್ಷಕ್ಕೊಮ್ಮೆ ನಡೆಸಬೇಕಾಗಿದ್ದ ಪೂರ್ವಭಾವಿ ಪರೀಕ್ಷೆಯನ್ನು, ಈ ಹಿಂದೆ ಮೂರು ವರ್ಷಗಳಿಗೊಮ್ಮೆ ನಡೆಸಿದ ಉದಾಹರಣೆಗಳಿವೆ. ಆದರೆ, ಕೋವಿಡ್‌–19 ಬಿಕ್ಕಟ್ಟಿನ ನಡುವೆಯೂ ಆಗಸ್ಟ್‌ 24ಕ್ಕೇ ಪರೀಕ್ಷೆ ನಡೆಸಲು ಹಟ ಮಾಡುತ್ತಿರುವುದು ಆಶ್ಚರ್ಯ ತಂದಿದೆ’ ಎಂದೂ ಅಭ್ಯರ್ಥಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT