ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹65.28 ಲಕ್ಷ ಮೌಲ್ಯದ ವಸ್ತುಗಳ ಖರೀದಿ: ಸಮಾಜ ಕಲ್ಯಾಣ ಇಲಾಖೆ ಲೆಕ್ಕ ನೀಡಿದ ಕಾರಜೋಳ

Last Updated 24 ಜುಲೈ 2020, 11:51 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್‌ ನಿರ್ವಹಣೆಗಾಗಿ ₹65.28 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಮಾತ್ರ ಖರೀದಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.

ಸ್ಕ್ಯಾನರ್‌ಗಳಿಗೆ ₹42.55 ಲಕ್ಷ, ಸ್ಯಾನಿಟೈಸರ್‌ಗೆ ₹0.55 ಲಕ್ಷ ಮತ್ತು ಮಾಸ್ಕ್‌ಗಳಿಗಾಗಿ ₹22.11 ಲಕ್ಷ ಖರ್ಚು ಮಾಡಲಾಗಿದೆ. ನಾವು ಸ್ಕ್ಯಾನರ್‌ಗಳನ್ನು ₹9,000 ರಂತೆ ಖರೀದಿ ಮಾಡಿರುವುದಾಗಿ ಸಿದ್ದರಾಮಯ್ಯ ಹೇಳಿರುವುದು ತಪ್ಪು. ಗರಿಷ್ಠ ₹4720(ಜಿಎಸ್‌ಟಿ ಸೇರಿ) ರಂತೆ ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್‌ನಿಂದ ಖರೀದಿಸಲಾಗಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಚರ್ಚಿಸಿ ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು.

ಸ್ಯಾನಿಟೈಸರ್‌ 500 ಎಂಎಲ್‌ಗೆ ₹600 ರಂತೆ ಖರೀದಿ ಮಾಡಿದ್ದಾಗಿ ಆರೋಪಿಸಿದ್ದಾರೆ. ಅದು ನಿಜವಲ್ಲ. 500 ಎಂಎಲ್‌ಗೆ ₹250 ರಂತೆ ಖರೀದಿಸಿದ್ದೇವೆ. ಕರ್ನಾಟಕ ಹ್ಯಾಂಡ್‌ಲೂಮ್‌ ಸಂಸ್ಥೆಯಿಂದ ಮಾಸ್ಕ್‌ ಅನ್ನು ₹17.54 ರಂತೆ ಖರೀದಿಸಲಾಗಿದೆ ಎಂದು ಕಾರಜೋಳ ತಿಳಿಸಿದರು.

ವಲಸೆ ಕಾರ್ಮಿಕರನ್ನು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಿದಾಗ ಅವರಿಗೆ ಶುಚಿ ಕಿಟ್‌ ನೀಡಲಾಗಿತ್ತು. 30 ಜಿಲ್ಲೆಗಳಲ್ಲಿ ಇವರಿಗೆ ವ್ಯವಸ್ಥೆ ಮಾಡಲಾಗಿತ್ತು. ಟವೆಲ್‌,ಬೆಡ್‌ಶೀಟ್‌, ಬೆಡ್‌ ಸ್ಪ್ರೆಡ್‌, ಜಮಖಾನ ಖರೀದಿ ಮಾಡಲಾಗಿತ್ತು. ಇದಕ್ಕೆ ₹1.24 ಕೋಟಿ ವೆಚ್ಚವಾಗಿತ್ತು, 55 ಸಾವಿರ ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲಾಗಿತ್ತು ಎಂದು ಕಾರಜೋಳ ಲೆಕ್ಕ ನೀಡಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಕುಶಲ ಕರ್ಮಿಗಳಿಗೆ ತಲಾ ₹5000 ಪರಿಹಾರ ಧನ ನೀಡುವ ಯೋಜನೆ ಅಡಿ, 11,421 ಕುಶಲಕರ್ಮಿಗಳ ಬ್ಯಾಂಕಿನ ಖಾತೆಗಳಿಗೆ ₹5.70 ಕೋಟಿ ಹಣ ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT