ಗುರುವಾರ , ಆಗಸ್ಟ್ 5, 2021
21 °C

ಸುಧೀಂದ್ರರಾವ್ ರಾಜೀನಾಮೆ ಊರ್ಜಿತ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಎಂ. ಸುಧೀಂದ್ರರಾವ್ ನೀಡಿದ್ದ ರಾಜೀನಾಮೆ ಜಲ ಕಾಯ್ದೆ ಪ್ರಕಾರ ಊರ್ಜಿತ ಅಲ್ಲ ಎಂಬ ವಾದವನ್ನು ಹೈಕೋರ್ಟ್‌ ತಳ್ಳಿ ಹಾಕಿದೆ.

‘ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಿ ಮೇ 2ರಂದು ರಾಜೀನಾಮೆ ಪತ್ರ ಬರೆಯಲಾಗಿದೆ’ ಎಂದು ಸುಧೀಂದ್ರರಾವ್ ಅವರು ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದರು. ಇದರ ನಡುವೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು, ‘ರಾಜೀನಾಮೆ ಪತ್ರ ನೈಜವಾಗಿದ್ದರೂ,  ಜಲ ಕಾಯ್ದೆ ಪ್ರಕಾರ ಸಲ್ಲಿಕೆಯಾಗಿಲ್ಲ’ ಎಂದು ತಿಳಿಸಿದ್ದರು.

‘ಜಲ ಕಾಯ್ದೆ ಪ್ರಕಾರ ರಾಜೀನಾಮೆ ಪತ್ರ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಬೇಕೇ ಹೊರತು ಮುಖ್ಯಮಂತ್ರಿಗೆ ಅಲ್ಲ. ಹೀಗಾಗಿ ಅವರ ರಾಜೀನಾಮೆ ಅಂಗೀಕರಿಸಲು ಆಗುವುದಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಪಿ.ಎಸ್. ರಾಜಗೋಪಾಲ ವಾದಿಸಿದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ವಾದವನ್ನು ಒಪ್ಪಲಿಲ್ಲ. ‘ಮುಖ್ಯಮಂತ್ರಿಯೇ ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಇಂಗ್ಲೆಂಡ್‌ ರಾಜನಂತೆ ಇಲ್ಲಿ ಮುಖ್ಯಮಂತ್ರಿಯೇ ಎಲ್ಲಾ ಅಲ್ಲದಿದ್ದರೂ, ಅವರು ಸರ್ಕಾರದ ಅಂಗವಾಗಿಯೇ ಕಾರ್ಯನಿರ್ವಹಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು. 

‘ನಕಲಿ ಸಹಿ ಎಂಬ ಸುಧೀಂದ್ರರಾವ್ ಅವರ ದೂರಿನ ಕುರಿತು ಪೊಲೀಸರು ಬಿ ವರದಿ ಸಲ್ಲಿಸಿದ್ದಾರೆ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಿಚಾರಣೆ ವೇಳೆ ವಿವರಿಸಿದರು.

‘ಮಾಲಿನ್ಯ ನಿಯಂತ್ರಣಾ ಮಂಡಳಿಗೆ ನೇಮಕ ಮಾಡುವ ಸಂಬಂಧ ಸರ್ಕಾರ ಮಾರ್ಗಸೂಚಿ ರೂಪಿಸಿಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶ ಇದ್ದರೂ, ಅದಕ್ಕೂ ಮುನ್ನವೇ ಸುಧೀಂದ್ರ ರಾವ್ ಅವರನ್ನು ನೇಮಕ ಮಾಡಲಾಗಿದೆ’ ಎಂದು ಫೆಬ್ರುವರಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ನೇಮಕ ಪ್ರಕ್ರಿಯೆ ತಪ್ಪಾಗಿ ನಡೆದಿದೆ ಎಂಬುದನ್ನು ಮಾರ್ಚ್ 6ರಂದು ರಾಜ್ಯ ಸರ್ಕಾರವೇ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತ್ತು. ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳ ಬಳಿಕ ಸುಧೀಂದ್ರ ರಾವ್ ರಾಜೀನಾಮೆ ಪತ್ರವನ್ನು ಅಂಚೆ ಮೂಲಕ ಕಳುಹಿಸಿದ್ದರು. ಎರಡು ವಾರಗಳ ನಂತರ ಪೊಲೀಸರಿಗೆ ದೂರು ನೀಡಿ, ಮಂಡಳಿಯ ಕಾನೂನು ಸಲಹೆಗಾರ ಗುರುರಾಜ ಜೋಷಿ ನನ್ನ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು