ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಖರೀದಿಸಿ ಬಡವರಿಗೆ ವಿತರಿಸಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

ಧಾನ್ಯ ಮಾರಾಟ
Last Updated 2 ಮೇ 2020, 19:48 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ‘ಪಡಿತರ ವ್ಯವಸ್ಥೆಯಲ್ಲಿ ಇರದ ಬಡವರ ಸಂಖ್ಯೆ ಸಾಕಷ್ಟಿದೆ. ಲಾಕ್‌ಡೌನ್ ಅವಧಿಯಲ್ಲಿ ಅವರಿಗೂ ಆಹಾರಧಾನ್ಯ ವಿತರಿಸಬೇಕಿದೆ. ಇದಕ್ಕಾಗಿ ಅಗತ್ಯವಿರುವ ಆಹಾರಧಾನ್ಯವನ್ನುಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕಮುಕ್ತಮಾರುಕಟ್ಟೆ ಮಾರಾಟ ಯೋಜನೆ ಅಡಿ ಖರೀದಿಸಿ’ ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ಎಫ್‌ಸಿಐ ಗೋದಾಮುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯದ ದಾಸ್ತಾನು ಇದ್ದರೂ, ಬಡವರಿಗೆ ವಿತರಿಸಲು ಅವನ್ನು ಖರೀದಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೆಚ್ಚುವರಿ ದಾಸ್ತಾನನ್ನು ಬಡವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಹಂಚಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ದೇಶದ 81 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಪಡಿತರ ವ್ಯವಸ್ಥೆ ಅಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆದರೆ, ಈ ವ್ಯಾಪ್ತಿಯಲ್ಲಿ ಇಲ್ಲದ ಬಡವರಿಗೆ ರಾಜ್ಯ ಸರ್ಕಾರಗಳು ಆಹಾರ ಧಾನ್ಯ ಒದಗಿಸಬೇಕಿದೆ. ಇದಕ್ಕಾಗಿ ಎಫ್‌ಸಿಐ ಗೋದಾಮಿನಲ್ಲಿ ಇರುವ ಹೆಚ್ಚುವರಿ ಅಕ್ಕಿ ಮತ್ತು ಗೋದಿಯನ್ನು ಮುಕ್ತಮಾರುಕಟ್ಟೆ ಮಾರಾಟ ಯೋಜನೆ ಅಡಿ ಒದಗಿಸುತ್ತೇವೆ. ರಾಜ್ಯ ಸರ್ಕಾರಗಳು ಇವನ್ನು ಖರೀದಿಸಲಿ ಎಂದು ಕೇಂದ್ರ ಆಹಾರ ಸಚಿವ ರಾಮವಿಲಾಸ್ ಪಾಸ್ವಾನ್ ಸೂಚಿಸಿದ್ದಾರೆ.

ಬಡವರಿಗೆ ಉಚಿತವಾಗಿ ಆಹಾರ ವಿತರಿಸುತ್ತಿರುವ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ತಮಗೆ ಅಗತ್ಯವಿರುವ ಅಕ್ಕಿ ಮತ್ತು ಗೋಧಿಯನ್ನುಮುಕ್ತಮಾರುಕಟ್ಟೆ ಮಾರಾಟ ಯೋಜನೆ ಅಡಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಈಗ ರಾಜ್ಯ ಸರ್ಕಾರಗಳಿಗೂ ಈ ಅವಕಾಶವಿದೆ.ಪ್ರತಿ ಕೆ.ಜಿ ಅಕ್ಕಿಗೆ ₹ 22 ಮತ್ತು ಪ್ರತಿ ಕೆ.ಜಿ.ಗೋಧಿಗೆ ₹ 21ರ ದರದಲ್ಲಿ ಮಾರಾಟ ಮಾಡುತ್ತೇವೆ.ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಡಿತರ ವ್ಯವಸ್ಥೆ ಮತ್ತು ಇತರೆ ಕಲ್ಯಾಣ ಯೋಜನೆ ಅಡಿ ವಿತರಿಸಲು ಪ್ರತಿ ತಿಂಗಳು ಸುಮಾರು 60 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯದ ಅವಶ್ಯಕತೆ ಇದೆ. ಮಾರ್ಚ್‌ 24ರಂದು ಲಾಕ್‌ಡೌನ್ ಘೋಷಿಸಿದ ನಂತರ ರಾಜ್ಯ ಸರ್ಕಾರಗಳಿಗೆ 1.92 ಕೋಟಿ ಟನ್‌ಗಳಷ್ಟು ಆಹಾರಧಾನ್ಯವನ್ನು ಈಗಾಗಲೇ ರವಾನಿಸಲಾಗಿದೆ ಎಂದಿದ್ದಾರೆ.

**

ಬಡವರಿಗೆ ಅಗತ್ಯವಿರುವ ಆಹಾರ ಧಾನ್ಯವನ್ನು ಪೂರೈಸಲು ಅಗತ್ಯವಿರುವಷ್ಟು ದಾಸ್ತಾನು ಕೇಂದ್ರ ಸರ್ಕಾರದ ಎಫ್‌ಸಿಐ ಗೋದಾಮುಗಳಲ್ಲಿ ಇದೆ.
-ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಆಹಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT