ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗೆ ಶರಣಾದ ಸಜ್ಜನ್‌ ಕುಮಾರ್

1984ರ ಸಿಖ್‌ ವಿರೋಧಿ ಗಲಭೆ ಪ್ರಕರಣದಲ್ಲಿ ಮಾಂಡೋಲಿ ಜೈಲಿಗೆ
Last Updated 31 ಡಿಸೆಂಬರ್ 2018, 20:13 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿಯಲ್ಲಿ 1984ರಲ್ಲಿ ನಡೆದ ಸಿಖ್‌ ನರಮೇಧ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಮಾಜಿ ನಾಯಕ ಸಜ್ಜನ್‌ ಕುಮಾರ್‌ ಸೋಮವಾರ ದೆಹಲಿ ನ್ಯಾಯಾಲಯದ ಎದುರು ಶರಣಾದರು.

ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆದಿತಿ ಗರ್ಗ್‌ ಅವರು, ಶರಣಾದ ಸಜ್ಜನ್‌ ಅವರನ್ನು ದೆಹಲಿಯ ಈಶಾನ್ಯ ಭಾಗದಲ್ಲಿರುವ ಮಾಂಡೋಲಿ ಜೈಲಿಗೆ ಕಳುಹಿಸಿದರು.

1984ರ ಇನ್ನೊಂದು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸಜ್ಜನ್ ಅವರು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಜೀವ ಬೆದರಿಕೆ ಇರುವುದರಿಂದ ಹೆಚ್ಚಿನ ಭದ್ರತೆ ಇರುವ ತಿಹಾರ್‌ ಜೈಲಿಗೆ ಕಳುಹಿಸುವಂತೆ ಸಜ್ಜನ್‌ ಕುಮಾರ್‌ ಮಾಡಿಕೊಂಡ ಮನವಿಯನ್ನು ನ್ಯಾಯಾಲಯತಳ್ಳಿ ಹಾಕಿತು.

ಸಜ್ಜನ್‌ ಕುಮಾರ್‌ ಅವರನ್ನು ಮಾಂಡೋಲಿ ಜೈಲಿಗೆ ಪ್ರತ್ಯೇಕ ವಾಹನದಲ್ಲಿ ಕರೆದುಕೊಂಡು ಹೋಗುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತು.

ಇದೇ ಪ್ರಕರಣದಲ್ಲಿ 10 ವರ್ಷ ಶಿಕ್ಷೆಗೆ ಒಳಗಾದ ಕಾಂಗ್ರೆಸ್‌ ಮಾಜಿ ಶಾಸಕರಾದ ಮಹೇಂದರ್‌ ಯಾದವ್‌ ಮತ್ತು ಕಿಶನ್‌ ಖೋಕರ್‌ ಅವರು ಸೋಮವಾರ ಬೆಳಿಗ್ಗೆಯೇ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಇತರೆ ಅಪರಾಧಿಗಳಾದ ಕಾಂಗ್ರೆಸ್‌ನ ಮಾಜಿ ವಾರ್ಡ್‌ ಸದಸ್ಯ ಬಲವಾನ್‌ ಖೋಕರ್‌, ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಭಾಗ್‌ಮಲ್‌, ಗಿರ್ಧಾರಿ ಲಾಲ್‌ ಈಗಾಗಲೇ ಶಿಕ್ಷೆಗೆ ಒಳಗಾಗಿದ್ದಾರೆ.

ಸಜ್ಜನ್‌ ಕುಮಾರ್ ಅವರು ಶರಣಾಗಲು ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಡಿಸೆಂಬರ್‌ 21 ರಂದು ಮನವಿ ನಿರಾಕರಿಸಿದ್ದ ಹೈಕೋರ್ಟ್‌ ಡಿ. 31ರೊಳಗೆ ಶರಣಾಗುವಂತೆ ಅವರಿಗೆ ಸೂಚಿಸಿತ್ತು.

73 ವರ್ಷದ ಸಜ್ಜನ್‌ ಕುಮಾರ್ ದೆಹಲಿ ಹೈಕೋರ್ಟ್‌ ವಿಧಿಸಿರುವ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಡಿಸೆಂಬರ್‌ 17 ರಂದು ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ (ಜೀವಿತಾವಧಿವರೆಗೂ) ವಿಧಿಸಿದ ನಂತರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಸಜ್ಜನ್‌ ಕುಮಾರ್‌ ರಾಜೀನಾಮೆ ನೀಡಿದ್ದರು.

ನರಮೇಧದ ಕಹಿ ನೆನಪು

*1984ರ ಅಕ್ಟೋಬರ್‌ 31 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್‌ ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು

* ಇದಾದ ನಂತರ ದೆಹಲಿಯಲ್ಲಿ ಸಿಖ್‌ ವಿರೋಧಿ ದಂಗೆ ಎದ್ದಿತ್ತು.ನೈರುತ್ಯ ದೆಹಲಿಯ ಪಾಲಂ ಕಾಲನಿಯ ರಾಜ್‌ನಗರ ಭಾಗ–1ರಲ್ಲಿ ಐವರು ಸಿಖ್ಖರನ್ನು 1984ರ ನವೆಂಬರ್‌ 1ರ ರಾತ್ರಿ ಹತ್ಯೆ ಮಾಡಲಾಗಿತ್ತು

* ರಾಜ್‌ ನಗರ ಭಾಗ–2ರಲ್ಲಿದ್ದ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಎರಡೂ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ

* 1984ರ ನವೆಂಬರ್‌ 1ರಿಂದ 4ರವರೆಗೆ 2,733 ಸಿಖ್ಖರ ಅಮಾನವೀಯ ಹತ್ಯೆ ನಡೆಸಲಾಗಿದೆ.ಸಿಖ್‌ ವಿರೋಧಿ ಗಲಭೆಯು ‘ರಾಜಕೀಯ ಪೋಷಣೆ’ ಹೊಂದಿದ್ದ ಜನರು ‘ಮಾನವೀಯತೆಯ ಮೇಲೆ ಎಸಗಿದ ಕ್ರೌರ್ಯ’ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ

* ಸಜ್ಜನ್‌ ಮತ್ತು ಇತರ ಆರೋಪಿಗಳ ವಿರುದ್ಧದ ವಿಚಾರಣೆ 2010ರಲ್ಲಿ ಆರಂಭವಾಗಿತ್ತು. ಆಗ ಸಜ್ಜನ್‌ ಸಂಸದರಾಗಿದ್ದರು. ಮೂರು ವರ್ಷಗಳ ಬಳಿಕ ವಿಚಾರಣಾ ನ್ಯಾಯಾಲಯವು ಐವರು ತಪ್ಪಿತಸ್ಥರು ಎಂದು ತೀರ್ಪು ನೀಡಿ, ಸಜ್ಜನ್‌ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆ ಮಾಡಿತ್ತು

* ಸಜ್ಜನ್‌ ಅವರನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಮತ್ತು ವಿನೋದ್‌ ಗೋಯಲ್‌ ವಿಚಾರಣೆ ನಡೆಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT