ಕೇರಳ: 324 ಮಂದಿಯ ಬಲಿ ತೆಗೆದುಕೊಂಡ ಮುಂಗಾರು ಮಳೆ

7

ಕೇರಳ: 324 ಮಂದಿಯ ಬಲಿ ತೆಗೆದುಕೊಂಡ ಮುಂಗಾರು ಮಳೆ

Published:
Updated:

ತಿರುವನಂತಪುರ: ಕೇರಳದಲ್ಲಿನ ಮುಂಗಾರು ಮಳೆ ಇದುವರೆಗೆ 324 ಮಂದಿಯನ್ನು ಬಲಿ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. 

ಒಂದು ವಾರದಿಂದ ಮಳೆಗೆ ಸಾವಿನ ಸಂಖ್ಯೆ 174ಕ್ಕೆ ಏರಿದ್ದು, ಸಾವಿರಾರು ಮಂದಿ ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಳೆಗಳು ನಾಶವಾಗಿದೆ. ಸಂಪರ್ಕ‌, ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. 

100 ವರ್ಷಗಳಲ್ಲಿ ಕೇರಳದ ಸ್ಥಿತಿ ಶೋಚನೀಯವಾಗಿದೆ. 80 ಜಲಾಶಯಗಳ ಬಾಗಿಲುಗಳನ್ನು ತೆರೆಯಲಾಗಿದೆ. 324 ಮಂದಿ ಮೃತಪಟ್ಟಿದ್ದಾರೆ. 2ಲಕ್ಷಕ್ಕೂ ಹೆಚ್ಚು ಮಂದಿಗಾಗಿ 1500ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ನಿಮ್ಮ ಸಹಾಯ ಪ್ರವಾಹ ಸಿಲುಕಿ ನಲುಗಿದವರ ಬದುಕನ್ನು ಹಸನುಗೊಳಿಸಲಿದೆ ಎಂದು ಪಿಣರಾಯಿ ಟ್ವೀಟ್ ಮಾಡಿದ್ದಾರೆ. 

ತ್ರಿಶೂರ್‌ನಲ್ಲಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಟ್ಟಂತಿಟ್ಟದಲ್ಲಿ ಮೂರು ಮೃತದೇಹಗಳು ದೊರಕಿದ್ದು, ಗುರುತು ಪತ್ತೆಯಾಗಿಲ್ಲ. ಉತ್ತರ ಪರವೂರಿನಲ್ಲಿ ಪಾರೀಶ್ ಮಾಲ್ ಕುಸಿತದ ವೇಳೆ 8 ಮಂದಿ ಕಣ್ಮರೆಯಾಗಿದ್ದಾರೆ. 

ಗರ್ಭಿಣಿಯ ರಕ್ಷಣೆ
ಅಲುವಾ ಜಿಲ್ಲೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿ ಸಜೀತ್ ಜಬೀಲ್‌ ಅವರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ವೈಮಾನಿಕ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇರಳಕ್ಕೆ ತೆರಳಲಿದ್ದು, ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದಾರೆ. 

ರಕ್ಷಣಾಪಡೆಗಳ ಕಸರತ್ತು
ಇದುವರೆಗೆ ಕೇರಳದಲ್ಲಿ 16 ಸೇನಾಪಡೆ, 28 ನೌಕಾಪಡೆ, 39 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಎನ್‌ಡಿಆರ್‌ಎಫ್ 4 ಸಾವಿರ ಜನರನ್ನು ರಕ್ಷಿಸಿದೆ. ಭಾರತೀಯ ಕರಾವಳಿ ಪಡೆಯು ರಾಜ್ಯದ 28 ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದೆ ಎಂದು ಹೇಳಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರಿಗೆ ಹೆಲಿಕಾಪ್ಟರ್, ದೋಣಿಗಳ ಮೂಲಕ ಶುಕ್ರವಾರ ಬೆಳಿಗ್ಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. 

ವಿಮಾನಯಾನ ಸ್ಥಗಿತ
ಮಳೆಯ ಕಾರಣ ಆಗಸ್ಟ್ 26ರವರೆಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 25 ರೈಲುಗಳ ಓಡಾಟವನ್ನು ನಿಲ್ಲಿಸಲಾಗಿದ್ದು, ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದವರಿಗೆ ಆಹಾರ ತಲುಪಿಸುವುದಕ್ಕಾಗಿ ವಿಶೇಷ ಪ್ರವಾಹ ಪರಿಹಾರ ರೈಲಿನ ವ್ಯವಸ್ಥೆ ಮಾಡಲಾಗುವುದು. 

8ಲಕ್ಷ ಲೀಟರ್ ಕುಡಿಯುವ ನೀರಿನ ವ್ಯವಸ್ಥೆ
ನೌಕಾಪಡೆಯು ನೆರೆಯಲ್ಲಿ ಸಿಲುಕಿದವರಿಗೆ ತಲುಪಿಸುವುದಾಗಿ 8 ಲಕ್ಷ ಲೀಟರ್ ಕುಡಿಯುವ ನೀರನ್ನು ಮುಂಬೈಯಿಂದ ಕೊಚ್ಚಿಯವರೆಗೆ ಹೊತ್ತು ತಂದಿದೆ

ರಕ್ಷಣಾ ಸಾಮಾಗ್ರಿ ನೀಡಿದ ರಕ್ಷಣಾ ಸಚಿವಾಲಯ
1300 ಜೀವರಕ್ಷಕ ಜಾಕೆಟ್‌ಗಳು, 571 ಲೈಫ್‌ಬಾಯ್ ಸೋಪುಗಳು, 1000 ಮಳೆ ಉಡುಪುಗಳು, 1300 ಗಮ್‌ ಬೂಟ್ಸ್, 1500 ಊಟದ ಪೊಟ್ಟಣಗಳು, 25 ಮೋಟರಿಕೃತ ದೋಣಿಗಳನ್ನು ರಕ್ಷಣಾ ಸಚಿವಾಲಯ ಒದಗಿಸಿದೆ. 

10 ಕೋಟಿ ಘೋಷಿಸಿದ ಪಂಜಾಬ್
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ₹10 ಕೋಟಿ ನೆರೆ ಪರಿಹಾರ ಘೋಷಿಸಿದ್ದಾರೆ. 

ವಾರಾಂತ್ಯದಲ್ಲಿ ಆರ್ಭಟ
ವಾರಾಂತ್ಯದಲ್ಲಿ ವರುಣನ ಅಬ್ಬರ ಜೋರಾಗಲಿದ್ದು, ತಮಿಳುನಾಡು, ಕರ್ನಾಟಕದಲ್ಲೂ ಮಳೆ ಸುರಿಯಲಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ತಿಳಿಸಿದೆ. 

 

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !