ಅಗಸ್ಟಾ ವೆಸ್ಟ್‌ಲ್ಯಾಂಡ್‌: ರಾಜೀವ್‌ ಸಕ್ಸೇನಾ ಫೆ.18ರ ವರೆಗೆ ನ್ಯಾಯಾಂಗ ಕಸ್ಟಡಿಗೆ

7

ಅಗಸ್ಟಾ ವೆಸ್ಟ್‌ಲ್ಯಾಂಡ್‌: ರಾಜೀವ್‌ ಸಕ್ಸೇನಾ ಫೆ.18ರ ವರೆಗೆ ನ್ಯಾಯಾಂಗ ಕಸ್ಟಡಿಗೆ

Published:
Updated:

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದ ಆರೋಪಿ ರಾಜೀವ್‌ ಸಕ್ಸೇನಾರನ್ನು ಫೆ.18ರವರೆಗೆ ನ್ಯಾಯಾಂಗ ಕಸ್ಟಡಿಗೆ ನೀಡಿ ದೆಹಲಿ ಪಾಟಿಯಾಲ ಹೌಸ್‌ ಕೋರ್ಟ್‌ ಮಂಗಳವಾರ ಆದೇಶಿಸಿದೆ. 

ಏಮ್ಸ್‌ ನೀಡಿರುವ ರಾಜೀವ ಸಕ್ಸೇನಾರ ವೈದ್ಯಕೀಯ ವರದಿಯನ್ನು ನಾಳೆ ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜೀವ್‌ ಸಕ್ಸೇನಾ ಮತ್ತು ದೀಪಕ್‌ ತಲ್ವಾರ್‌ರನ್ನು ದುಬೈನಿಂದ ಜ.31ರಂದು ದೆಹಲಿಗೆ ಕರೆತರಲಾಗಿತ್ತು.

ಜಾರಿ ನಿರ್ದೇಶನಾಯಲದ ಅಧಿಕಾರಿಗಳ ತಂಡ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌(ರಾ) ಅಧಿಕಾರಿಗಳ ತಂಡ ವಿಶೇಷ ವಿಮಾನದಲ್ಲಿ ಯುಎಇಯಿಂದ ಆರೋಪಿಗಳನ್ನು ಕರೆತಂದಿದ್ದರು. ₹3,600 ಕೋಟಿ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್‌ ಮಿಷೆಲ್‌ನನ್ನು ಡಿಸೆಂಬರ್‌ನಲ್ಲಿ ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಫೆ. 27ರ ವರೆಗೆ ಮಿಷೆಲ್‌ಗೆ ದೆಹಲಿ ನ್ಯಾಯಾಲಯ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. 

ದುಬೈನ ಐಷಾರಾಮಿ ದ್ವೀಪ ಪಾಮ್‌ ಜುಮಿರಾದಲ್ಲಿ ವಾಸವಾಗಿರುವ ಅಕೌಂಟೆಟ್‌ ರಾಜೀವ್‌ ಸಕ್ಸೇನಾಗೆ ಹೆಲಿಕಾಪ್ಟರ್‌ ಖರೀದಿ ಪ್ರಕರಣದ ತನಿಖೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ಹಲವು  ಬಾರಿ ಸಮನ್ಸ್‌ ಜಾರಿ ಮಾಡಿತ್ತು. ಯಾವುದಕ್ಕೂ ಉತ್ತರಿಸದ ರಾಜೀವ್‌ ವಿಚಾರಣೆಯಿಂದ ದೂರ ಉಳಿದಿದ್ದರು. ತನಿಖಾ ಸಂಸ್ಥೆ ಆರೋಪ ಪಟ್ಟಿಯಲ್ಲಿ ರಾಜೀವ್‌ ಹೆಸರಿದ್ದು, ಜಾಮೀನು ರಹಿತ ವಾರಂಟ್‌ ಜಾರಿಯಾಗಿತ್ತು. 

ರಾಜೀವ್‌ ಸಕ್ಸೇನಾ, ಆತನ ಪತ್ನಿ ಶಿವಾನಿ ಸಕ್ಸೇನಾ ಹಾಗೂ ಅವರಿಗೆ ಸೇರಿದ ದುಬೈ ಮೂಲದ ಸಂಸ್ಥೆಗಳ ಮೂಲಕ ಹಲವು ಅಪರಾಧಗಳನ್ನು ನಡೆಸಲಾಗಿದೆ ಎಂದು ಇಡಿ ಆರೋಪಿಸಿದೆ. 2017ರಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶಿವಾನಿ ಸಕ್ಸೇನಾ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. 

₹1000 ಕೋಟಿ ಆದಾಯವನ್ನು ಬಚ್ಚಿಟ್ಟಿರುವ ಬಗ್ಗೆ ಹಾಗೂ ಯುಪಿಎ ಅವಧಿಯಲ್ಲಿ ವಿಮಾನಗಳ ಒಪ್ಪಂದ ಪ್ರಕ್ರಿಯೆಯಲ್ಲಿ ಲಾಬಿ ನಡೆಸಿರುವ ವಿಚಾರ ಭಾರತದ ತನಿಖಾ ಸಂಸ್ಥೆಗಳು ತನಿಖೆ ಕೈಗೊಳ್ಳುತ್ತಿದ್ದಂತೆ ದೀಪಕ್‌ ತಲ್ವಾರ್‌ ದುಬೈಗೆ ಪರಾರಿಯಾಗಿದ್ದ. 

ಪ್ರಧಾನಿ, ಮಾಜಿ ಪ್ರಧಾನಿಗಳು, ರಾಷ್ಟ್ರಪತಿ ಹಾಗೂ ಇತರೆ ಗಣ್ಯರ ಪ್ರಯಾಣಕ್ಕಾಗಿ 12 ಐಷಾರಾಮಿ ಹೆಲಿಕಾಪ್ಟರ್‌ಗಳ ಖರೀದಿಗೆ ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇಟಲಿಯಲ್ಲಿ ಅಗಸ್ಟಾವೆಸ್ಟ್‌ಲ್ಯಾಂಡ್‌ ಮಾತೃ ಸಂಸ್ಥೆ ಫಿನ್‌ಮೆಕಾನಿಕಾ ಮೇಲೆ ಲಂಚದ ಆರೋಪ ಕೇಳಿಬರುತ್ತಿದ್ದಂತೆ 2014ರಲ್ಲಿ ಭಾರತ ಸರ್ಕಾರ ಹೆಲಿಕಾಪ್ಟರ್‌ ಖರೀದಿ ಒಪ್ಪಂದವನ್ನು ರದ್ದುಗೊಳಿಸಿತ್ತು. 

ಇದೇ ಪ್ರಕರಣದಲ್ಲಿ ಇತ್ತೀಚೆಗೆ ವಕೀಲ ಗೌತಮ್‌ ಖೈತಾನ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದರು. ಕಾಳಧನ ಹೊಂದಿದ್ದ ಆರೋಪ ಹಾಗೂ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಆರೋಪ ಗೌತಮ್‌ ಮೇಲಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !