ಮಂಗಳವಾರ, ಜೂಲೈ 7, 2020
27 °C
ಗೋವಾ 80 ಲೆಕ್ಕಪರಿಶೋಧಕರ ನೇಮಕಕ್ಕೆ ಪರೀಕ್ಷೆ: 8

ಪರೀಕ್ಷೆ ಬರೆದ ಎಲ್ಲರೂ ಫೇಲ್‌!

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಗೋವಾ ಸರ್ಕಾರ 80 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 8 ಸಾವಿರ ಅಭ್ಯರ್ಥಿಗಳೂ ಅನುತ್ತೀರ್ಣರಾಗಿದ್ದಾರೆ!

ಈ ಬೆಳವಣಿಗೆಯಿಂದಾಗಿ ಈಗ ರಾಜ್ಯದ ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜತೆಗೆ ಶಿಕ್ಷಣದ ವ್ಯವಸ್ಥೆಯೂ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ 80 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಇದೇ ಜನವರಿ 7ರಂದು ನಡೆಸಿದ್ದ ನೇಮಕಾತಿ ಪರೀಕ್ಷೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ನೇಮಕಾತಿ ಅರ್ಹತೆಗೆ ಬೇಕಾದ ಕನಿಷ್ಠ ಅಂಕ ಪಡೆದಿಲ್ಲ ಎಂದು ಲೆಕ್ಕಪರಿಶೋಧನಾ ನಿರ್ದೇಶನಾಲಯ ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಪರೀಕ್ಷೆಯಲ್ಲಿ 100 ಅಂಕಗಳ ಪ್ರಶ್ನೆ ಪತ್ರಿಕೆ ನೀಡಿ, ತೇರ್ಗಡೆಗೆ ಕನಿಷ್ಠ 50 ಅಂಕ ನಿಗದಿಪಡಿಸಲಾಗಿತ್ತು. ಐದು ಗಂಟೆ ಅವಧಿಯ ಪ್ರಶ್ನೆ ಪತ್ರಿಕೆ ಇಂಗ್ಲಿಷ್‌, ಸಾಮಾನ್ಯ ಜ್ಞಾನ ಹಾಗೂ ಲೆಕ್ಕಕ್ಕೆ ಸಂಬಂಧಪಟ್ಟ ವಿಷಯ ಒಳಗೊಂಡಿತ್ತು. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಅಂತಿಮ ಹಂತದ ಆಯ್ಕೆಗಾಗಿ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಪದವೀಧರರೇ ಅರ್ಜಿ ಸಲ್ಲಿಸಿದ್ದರು. ಆದರೆ, ಯಾರೂ ಸಹ ಕನಿಷ್ಠ 50 ಅಂಕ ಪಡೆದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಳಂವಾಗಿ ಫಲಿತಾಂಶ ಪ್ರಕಟಿಸಿರುವುದನ್ನು ಆಮ್‌ ಆದ್ಮಿ ಪಕ್ಷದ ಪ್ರಧಾನಕಾರ್ಯದರ್ಶಿ ಪ್ರದೀಪ್‌ ಪಡಗಾವಂಕರ್‌ ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದ ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ಕಾಲೇಜುಗಳು ಇಂತಹ ಪದವೀಧರರನ್ನು ರೂಪಿಸುತ್ತಿವೆ. ಇದೊಂದು ದೊಡ್ಡ ನಾಚಿಕೆಗೇಡಿನ ಸಂಗತಿ’ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು