ಅಮಿತ್‌ ಶಾ ಗೈರು: ಬಿಜೆಪಿ ಸಭೆ ಮುಂದಕ್ಕೆ

7

ಅಮಿತ್‌ ಶಾ ಗೈರು: ಬಿಜೆಪಿ ಸಭೆ ಮುಂದಕ್ಕೆ

Published:
Updated:

ನವದೆಹಲಿ: ಪಕ್ಷದ ಅಧ್ಯಕ್ಷ ಅಮಿತ್ ಶಾ ಬರವಿಗಾಗಿ ಭಾನುವಾರ ದಿನವಿಡೀ ಕಾದ ರಾಜ್ಯ ಬಿಜೆಪಿ ಸಂಸದ-ಶಾಸಕರ ಚಿಂತನ-ಮಂಥನ ಸಭೆ ಕುತೂಹಲ-ಅಸ್ಪಷ್ಟತೆಯ ನಡುವೆ ಸೋಮವಾರಕ್ಕೆ ಮುಂದೆ ಹೋಯಿತು.

ಆದರೆ ಶಾ ಅವರು ಸೋಮವಾರ ಬರುವರೆಂದು ಖಚಿತವಾಗಿ ಹೇಳುವ ವಿಶ್ವಾಸ ರಾಜ್ಯದ ನಾಯಕರಿಗೆ ಇರಲಿಲ್ಲ.

ಥರಥರ ನಡುಗಿಸುವ ದೆಹಲಿ ಥಂಡಿಯ ರೂಢಿಯಿಲ್ಲದ ಈ ಮುಂದಾಳುಗಳಿಗೆ ಮತ್ತೊಂದು ದಿನ ದೂಡಬೇಕಾದ ಅನಿವಾರ್ಯತೆ ಎದುರಾಗಿದೆ. ವರಿಷ್ಠರು-ರಾಜ್ಯ ಬಿಜೆಪಿ ಮುಂದಾಳುಗಳ ಈ ಮುಖಾಮುಖಿ ಲೋಕಸಭಾ ಚುನಾವಣೆಯ ಸಿದ್ಧತೆಗಾಗಿ ಎಂದು ಭಾವಿಸಲಾಗಿತ್ತು. ಆದರೆ ರಾಜ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವುವ ಪ್ರಯತ್ನವನ್ನು ಮುಂದುವರೆಸುವ ಕಾರ್ಯಸೂಚಿಯೂ ಸಭೆಯ ಮುಂದಿತ್ತು ಎಂಬ ಮಾತುಗಳು ಸಭೆ ಸೇರಿದ್ದವರಲ್ಲಿ ಕುತೂಹಲ- ಉತ್ಸಾಹ- ಉಮೇದು ಹುಟ್ಟಿಹಾಕಿದ್ದವು. ಆದರೆ ಈ ಕುರಿತು ಸ್ಪಷ್ಟತೆ ಕಾಣಲಿಲ್ಲ.

ಮಧ್ಯಾಹ್ನ ಒಂದು ಗಂಟೆಗೆ ಆರಂಭವಾದ ಸಭೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಉದ್ಘಾಟಿಸಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಹೆಚ್ಚು ಸಂಸದರನ್ನು ಗೆಲ್ಲಿಸಿ ತರುವ ನಿರೀಕ್ಷೆಯನ್ನು ಪಕ್ಷ ಹೊಂದಿದೆ.

ಈಗಿನಿಂದಲೇ ಒಗ್ಗಟ್ಟಿನ ತಯಾರಿ ನಡೆಯಬೇಕೆಂದು ತಾಕೀತು ಮಾಡಿದ ಅವರು ತಮ್ಮ ಮಾತು ಮುಗಿದ ನಂತರ ಸಭೆಯಿಂದ ನಿರ್ಗಮಿಸಿದರು.

ಪುನಃ ನಾಲ್ಕರ ಸುಮಾರಿಗೆ ಸೇರಿದ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾಸಿನೊಳಗೆ ಮುಂದೂಡಿದರು.

‘ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಈ ಸಮಾಲೋಚನೆ ಸಭೆ ಏರ್ಪಟ್ಟಿದೆ. ಶಾಸಕರು- ಸಂಸದರಿಗೆ ನೀಡಬೇಕಾದ ಸೂಚನೆಗಳನ್ನು ನೀಡುತ್ತೇವೆ’ ಎಂದು ಯಡಿಯೂರಪ್ಪ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ಇಲ್ಲಿನ 'ಜನಪಥ್' ನಲ್ಲಿರುವ ಸರ್ಕಾರಿ ವಸತಿಗೃಹ 'ವೆಸ್ಟರ್ನ್‌ ಕೋರ್ಟ್'ನಲ್ಲಿ ಸೇರಿದ್ದ ಸಭೆಗೆ ಪೈಕಿ ಎಸ್.ಎ.ರವೀಂದ್ರನಾಥ್, ಸಿ.ಎಂ.ಉದಾಸಿ, ಕರುಣಾಕರ ರೆಡ್ಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಾಲಚಂದ್ರ ಜಾರಕಿಹೊಳಿ, ಅಶ್ವತ್ಥನಾರಾಯಣ ಬಂದಿರಲಿಲ್ಲ.

ಯಡಿಯೂರಪ್ಪ, ಸಚಿವರಾದ ಸದಾನಂದಗೌಡ, ರಮೇಶ ಜಿಗಜಿಣಗಿ ಸೇರಿದಂತೆ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಷಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಶ್ರೀನಿವಾಸ ಪೂಜಾರಿ ವೇದಿಕೆ
ಯಲ್ಲಿದ್ದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಭಿಕರ ಸಾಲಿನಲ್ಲಿ ಕುಳಿತಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !