ಭಾನುವಾರ, ಜನವರಿ 26, 2020
29 °C
ಕಾಯ್ದೆಯ ವಿರುದ್ಧ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ l ನೂರಾರು ಜನರನ್ನು ವಶಕ್ಕೆ ಪಡೆದ ಪೊಲೀಸರು

ಕೇಂದ್ರದ ವಿರುದ್ಧ ಮುಗಿಲು ಮುಟ್ಟಿದ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಗುರುವಾರ ಭಾರಿ ಪ್ರತಿಭಟನೆ ನಡೆದಿದೆ. ಬಹುಪಾಲು ರಾಜ್ಯಗಳಲ್ಲಿ ಅಪರಾಧ ದಂಡ ಸಂಹಿತೆಯ 144ನೇ ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಆದರೆ, ನಿಷೇಧಾಜ್ಞೆಯನ್ನು ಧಿಕ್ಕರಿಸಿ ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ದೆಹಲಿ, ಲಖನೌ, ಬೆಂಗಳೂರು, ಪಟ್ನಾ, ಅಹಮದಾಬಾದ್‌, ಮುಂಬೈ ಮುಂತಾದನಗರಗಳಲ್ಲಿ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶ ಮತ್ತು ಗುಜರಾತ್‌ನ ಕೆಲವು ಕಡೆ ಪ್ರತಿಭಟನೆಯು ಹಿಂಸಾರೂಪ ತಳೆದಿದೆ. ಲಖನೌದಲ್ಲಿ ಮೊಹಮ್ಮದ್ ವಕೀಲ್‌ ಎಂಬ ವ್ಯಕ್ತಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ.

ಲಖನೌ ನಗರದ ವಿವಿಧ ಭಾಗಗಳಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಪ್ರತಿಭಟನಕಾರರು ಬಸ್‌, ದ್ವಿಚಕ್ರ ವಾಹನ ಮತ್ತು ಪೊಲೀಸ್‌ ಹೊರಠಾಣೆಗಳಿಗೆ ಬೆಂಕಿ ಹಚ್ಚಿದ್ದಾರೆ. ಜನರನ್ನು ಚದುರಿಸುವುದಕ್ಕಾಗಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಕೆಲವು ಸುದ್ದಿವಾಹಿನಿಗಳ ವ್ಯಾನ್‌ಗಳು ಮತ್ತು ಸಿಬ್ಬಂದಿ ಮೇಲೆಯೂ ದಾಳಿ ನಡೆದಿದೆ. 

ಗುಜರಾತ್‌ನಲ್ಲಿ ಘರ್ಷಣೆ: ಅಹಮದಾಬಾದ್‌ನ ಶಾ–ಎ–ಆಲಂ ಪ್ರದೇಶ ಮತ್ತು ಮಿರ್ಜಾಪುರದಲ್ಲಿಯೂ ಹಿಂಸಾಚಾರ ನಡೆದಿದೆ. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆಯಾಗಿದೆ. ಪ್ರತಿಭಟನಕಾರರು ಪೊಲೀಸರನ್ನು ಥಳಿಸಿದ್ದಾರೆ ಮತ್ತು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ದೆಹಲಿಯಲ್ಲಿ ಆಕ್ರೋಶ: ದೆಹಲಿಯಲ್ಲಿ ಪ್ರತಿಭಟನೆಗಿಳಿದ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರ ರಾಜಧಾನಿಯ ಬಹುಪಾಲು ಪ್ರದೇಶಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿತ್ತು. ಗುರುಗ್ರಾಮ್–ದೆಹಲಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪ್ರತಿಭಟನಕಾರರನ್ನು ತಡೆಯುವ ಉದ್ದೇಶದಿಂದ ನಗರದ ಹಲವು ರಸ್ತೆಗಳಲ್ಲಿಯೂ ಸಂಚಾರ ನಿರ್ಬಂಧ ಹೇರಲಾಗಿತ್ತು. ಹಾಗಾಗಿ, ದೆಹಲಿಯಲ್ಲಿ ತೀವ್ರ ವಾಹನ ದಟ್ಟಣೆಯಾಗಿ ಜನರು ಸಂಕಷ್ಟಕ್ಕೆ ಒಳಗಾದರು. 

ವಿರೋಧ ಪಕ್ಷಗಳ ನಾಯಕರಾದ ಡಿ.ರಾಜಾ, ಸೀತಾರಾಂ ಯೆಚೂರಿ, ನೀಲೋತ್ಪಲ್‌ ಬಸು, ವೃಂದಾ ಕಾರಟ್‌, ಅಜಯ ಮಾಕನ್‌, ಸಂದೀಪ್‌ ದೀಕ್ಷಿತ್‌, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್‌, ಉಮರ್‌ ಖಾಲಿದ್‌ ಮುಂತಾದವರನ್ನು ಕೆಂಪುಕೋಟೆ ಮತ್ತು ಮಂಡಿ ಹೌಸ್‌ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದರು. ಈ ಎರಡೂ ಸ್ಥಳಗಳಲ್ಲಿ ಪ್ರತಿಭಟನೆ ಯೋಜಿಸಲಾಗಿತ್ತು. 

ತ್ರಿವರ್ಣ ಧ್ವಜ ಹಿಡಿದ ನೂರಾರು ವಿದ್ಯಾರ್ಥಿಗಳು ಮತ್ತು ಇತರರು ಗುರುವಾರ ಸಂಜೆಯ ಹೊತ್ತಿಗೆ ಜಂತರ್‌ ಮಂತರ್‌ನಲ್ಲಿ ಸೇರಿ, ಕೆಂಪುಕೋಟೆ ಮತ್ತು ಮಂಡಿ ಹೌಸ್‌ನಿಂದ ಪ್ರತಿಭಟನಕಾರರನ್ನು ಬಲಪ್ರಯೋಗಿಸಿ ತೆರವು ಮಾಡಿದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಎರಡೂ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿರಲಿಲ್ಲ. 

ರಾಜ್‌ಘಾಟ್‌, ಶಾಂತಿವನ, ದರಿಯಾಗಂಜ್‌, ಜಾಮಿಯಾ ನಗರಮತ್ತು ಕಾಶ್ಮೀರಿ ಗೇಟ್‌ಗಳಲ್ಲಿಯೂ ಸಣ್ಣ ಪ್ರತಿಭಟನೆಗಳು ನಡೆದಿವೆ. 

ಮುಂಬೈನ ಆಗಸ್ಟ್‌ ಕ್ರಾಂತಿ ಮೈದಾನದಲ್ಲಿ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ. 1942ರಲ್ಲಿ ಮಹಾತ್ಮ ಗಾಂಧಿ ಅವರು ಬ್ರಿಟಿಷರಿಗೆ ‘ಭಾರತ ಬಿಟ್ಟು ತೊಲಗಿ’ ಎಂದು ಕರೆ ಕೊಟ್ಟ ಮೈದಾನ ಇದು. 

ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಬಾಲಿವುಡ್‌ ತಾರೆಯರು ಭಾಗಿಯಾಗಿದ್ದರು. ‘ಮೋದಿ, ಶಾ ಅವರಿಂದ ಸ್ವಾತಂತ್ರ್ಯ ದೊರೆಯಲಿ’ ಎಂಬುದು ಪ್ರತಿಭಟನಕಾರರ ಘೋಷಣೆಯಾಗಿತ್ತು. ಪ್ರತಿಭಟನಕಾರರು ಮೈದಾನದಿಂದ ಗ್ರ್ಯಾಂಟ್‌ ರೋಡ್‌ ಕಡೆಗೆ ಜಾಥಾ ನಡೆಸಿದರು. 

ಮಹಾರಾಷ್ಟ್ರದ ಇತರ ನಗರಗಳಲ್ಲಿಯೂ ಪ್ರತಿಭಟನೆ ನಡೆದಿದೆ. ಪುಣೆ, ನಾಗಪುರ, ಮಾಲೇಗಾಂವ್‌ ಮತ್ತು ಅಮರಾವತಿ ಜಿಲ್ಲೆಯ ಪರಟ್‌ವಾಡಾದಲ್ಲಿಯೂ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔರಂಗಾಬಾದ್‌, ಕೊಲ್ಲಾಪುರ, ಉಸ್ಮಾನಾಬಾದ್‌ ನಗರಗಳಲ್ಲಿ ಎಡ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ ಕಾರ್ಯಕರ್ತರು ಕಾಯ್ದೆಯ ‍ಪರವಾಗಿ ಪ್ರದರ್ಶನ ನಡೆಸಿದ್ದಾರೆ. ಪುಣೆ, ಔರಂಗಾಬಾದ್‌, ಮುಂಬೈನ ಚರ್ಚ್‌ಗೇಟ್‌ನಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಜಾಥಾಗಳನ್ನು ನಡೆಸಿದರು.

*****

ಬಿಹಾರ ಬಂದ್‌

ಬಿಹಾರದಲ್ಲಿ ಗುರುವಾರ ಬಂದ್‌ ನಡೆಸುವಂತೆ ಎಡಪಕ್ಷಗಳು ನೀಡಿದ್ದ ಕರೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಶಾಲಾ ಕಾಲೇಜುಗಳು, ವ್ಯಾಪಾರ ವಹಿವಾಟುಗಳು ಮುಚ್ಚಿದ್ದವು. ಬಲವಂತವಾಗಿ ಬಂದ್‌ ನಡೆಸಲು ಮುಂದಾದ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಪಟ್ನಾ ನಗರ ಬಹುತೇಕ ಸ್ಥಗಿತವಾಗಿತ್ತು. ಸಿಪಿಐ, ಸಿಪಿಎಂ ಮತ್ತು ಸಿಪಿಎಂ–ಎಂಎಲ್‌, ಮಾಜಿ ಸಂಸದ ಪಪ್ಪು ಯಾದವ್‌ ಅವರ ಜನ ಅಧಿಕಾರ್‌ ಪಕ್ಷದ ಕಾರ್ಯಕರ್ತರು ಮೆರವಣಿಗೆಗಳನ್ನು ನಡೆಸಿದ್ದಾರೆ. ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. 

ಕೆಲವೆಡೆ ಹಿಂಸಾಚಾರವೂ ನಡೆದಿದೆ. ರೈಲು ತಡೆಗೆ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತೆರವು ಮಾಡಿದ್ದಾರೆ. ಕೆಲವೆಡೆ ಲಾಠಿ ಪ್ರಹಾರ ನಡೆಸಲಾಗಿದೆ. ಕೆಲವು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್‌ ಅವರು ಪಟ್ನಾದಲ್ಲಿ ಪ್ರತಿಭಟನೆ ನಡೆಸಿದರು. ‘ಇದು ಹಿಂದೂ–ಮುಸ್ಲಿಮರ ನಡುವಣ ಸಂಘರ್ಷ ಅಲ್ಲ. ಬದಲಿಗೆ ಹಿಂದುಸ್ಥಾನಕ್ಕಾಗಿ ಹೋರಾಟ’ ಎಂದು ಹೇಳಿದರು. 

ಕೇರಳದಲ್ಲಿ ಪ್ರತಿಭಟನೆ

ಕೇರಳದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆದಿದೆ. ಆದರೆ, ಎಲ್ಲಿಯೂ ಹಿಂಸಾಚಾರ ವರದಿಯಾಗಿಲ್ಲ. 

ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ರಾಜಭವನಕ್ಕೆ ಜಾಥಾ ನಡೆಸಿದರು. ಉತ್ತರ ಕೇರಳದ ಕೋಯಿಕ್ಕೋಡ್‌ ಮತ್ತು ಮಲಪ್ಪುರಗಳಲ್ಲಿಯೂ ಪ್ರತಿಭಟನೆ ನಡೆದಿದೆ. 

****

ದಬ್ಬಾಳಿಕೆಯ ಆಳ್ವಿಕೆ ನಡೆಸುವುದಕ್ಕಾಗಿ ಪ್ರತಿ ಬಾರಿ ನೀವು ಜನರನ್ನು ಥಳಿಸಿ ದಮನಿಸಿದಾಗ, ಅವರನ್ನು ಮೂಲೆಗೆ ತಳ್ಳಿದಾಗ ಅವರು ಇನ್ನಷ್ಟು ಗಟ್ಟಿಯಾಗುತ್ತಾರೆ
-ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕಿ

ಬೇರೆ ದೇಶಗಳ ಹಿಂದೂಗಳನ್ನು ಭಾರತದಲ್ಲಿ ಹೇಗೆ ಮತ್ತು ಎಲ್ಲಿ ನೀವು ನೆಲೆಗೊಳಿಸುವಿರಿ. ಅದಕ್ಕಾಗಿ ನಿಮ್ಮಲ್ಲಿ ಯಾವುದೇ ಯೋಜನೆ ಇದೆ ಎಂದು ನನಗೆ ಅನಿಸುವುದಿಲ್ಲ
-ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)