ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ ವಿಶೇಷಾಧಿಕಾರ 35ಎ ಕಲಂ ಅರ್ಜಿ ವಿಚಾರಣೆ 2019 ಜ.9ಕ್ಕೆ ಮುಂದೂಡಿಕೆ

Last Updated 31 ಆಗಸ್ಟ್ 2018, 7:24 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷ ಅಧಿಕಾರ ನೀಡಿರುವ ಸಂವಿಧಾನದ 35 ಎ ಕಲಂ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿಅರ್ಜಿವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವರ್ಷ ಜನವರಿ 19ಕ್ಕೆ ಮುಂದೂಡಿದೆ.

ಜಮ್ಮು ಕಾಶ್ಮೀರದಲ್ಲಿ ಡಿಸೆಂಬರ್ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಡೆಯುವ ಕಾರಣ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಸುಪ್ರೀಂ ಹೇಳಿದೆ.

ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಸರ್ಕಾರ ಅರ್ಜಿ ವಿಚಾರಣೆಯನ್ನು ಮುಂದಿನ ವರ್ಷ ನಡೆಸಬೇಕೆಂದು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಜಂಟಿಯಾಗಿ ಮನವಿ ಮಾಡಿದ್ದವು.

ಪಂಚಾಯತ್ ಚುನಾವಣೆ ನಿಮಿತ್ತ ಅರೆ ಸೈನಿಕ ಪಡೆಗಳು ಜಮ್ಮು ಕಾಶ್ಮೀರಕ್ಕೆ ತೆರಳಲಿವೆ. ಕಲಂ ಕುರಿತಾದ ನಿರ್ಧಾರ ಜನರು ಭಾವೋದ್ವೇಗಕ್ಕೆ ಒಳಗಾಗುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುತ್ತದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಏನಿದು ಕಲಂ 35–ಎ?

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ. ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35–ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಅರ್ಜಿದಾರರ ವಾದವೇನು?

ದೇಶದ ಯಾವುದೇ ಭಾಗದಲ್ಲಿ ಆಸ್ತಿ ಹೊಂದಲು ಮತ್ತು ವಾಸ ಮಾಡಲು ಭಾರತದ ನಾಗರಿಕರಿಗೆ ಮೂಲಭೂತ ಹಕ್ಕಿದೆ. ಇದನ್ನು 35–ಎ ಉಲ್ಲಂಘಿಸುತ್ತದೆ. ಅಲ್ಲದೆ, ದೇಶದ ಸಂವಿಧಾನಕ್ಕೆ ಸಂಸತ್‌ನಲ್ಲಿ ಮಾತ್ರ ತಿದ್ದುಪಡಿ ತರಲು ಸಾಧ್ಯ. ಆದರೆ 35–ಎಯನ್ನು ಸಂಸತ್‌ನ ಹೊರಗೆ, ರಾಷ್ಟ್ರಪತಿಗಳು ವಿಶೇಷಾಧಿಕಾರ ಬಳಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ.

ರಾಜ್ಯದವರ ವಾದವೇನು?

35–ಎ ರದ್ದಾದರೆ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾದೀತು ಎಂಬುದು ಅಲ್ಲಿನವರ ಆತಂಕ. 35–ಎ ರದ್ದುಪಡಿಸುವುದಕ್ಕೆ ಪ್ರತ್ಯೇಕತಾವಾದಿ ಸಂಘಟನೆಗಳೂ ತೀವ್ರ ವಿರೋಧ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT