ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನ ದಾಖಲೆ ಪತ್ರ ಕೇಳಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕನ ಪುತ್ರ

Last Updated 9 ಏಪ್ರಿಲ್ 2019, 5:09 IST
ಅಕ್ಷರ ಗಾತ್ರ

ಝಾನ್ಸಿ: ನೋಂದಣಿ ಫಲಕ ಇಲ್ಲದ ಕಾರಿನ ದಾಖಲಾತಿ ಪತ್ರಗಳನ್ನು ಕೇಳಿದ ಪೊಲೀಸ್‌ ಅಧಿಕಾರಿ ಮೇಲೆ ಬಿಜೆಪಿ ಶಾಸಕರ ಪುತ್ರ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಝಾನ್ಸಿ ಜಿಲ್ಲೆಯ ಗರೋಥ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜವಾಹರ್‌ ರಜಪೂತ್‌ ಅವರ ಪುತ್ರ ರಾಹುಲ್‌ ರಜಪೂತ್ ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಒಪಿ ಸಿಂಗ್ ತನಿಖೆ ಆದೇಶಿಸಿದ್ದಾರೆ.

ಘಟನೆಯ ವಿವರ: ಗರೋಥ ಪಟ್ಟಣದಲ್ಲಿನೋಂದಣಿ ಫಲಕ ಇಲ್ಲದ ಕಾರಿನಲ್ಲಿ ರಾಹುಲ್‌ ರಜಪೂತ್‌ ಪ್ರಯಾಣಿಸುತ್ತಿದ್ದರು. ಇಲ್ಲಿನ ಸ್ಥಳೀಯ ಪೊಲೀಸ್‌ ಠಾಣೆಯ ಸಮೀಪ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ರಾಹುಲ್‌ ಅವರ ಕಾರನ್ನು ಪೊಲೀಸರು ತಪಾಸಣೆ ಮಾಡಿ, ಕಾರಿನ ನೋಂದಣಿ ಪತ್ರಗಳನ್ನು ಕೇಳಿದ್ದಾರೆ, ಇದರಿಂದ ಆಕ್ರೋಶಗೊಂಡ ರಾಹುಲ್‌, ನಾನು ಶಾಸಕರ ಮಗ ಎಂದು ಹೇಳಿ ಪೊಲೀಸರಿಗೆ ಧಮಕಿ ಹಾಕಿದ್ದಾರೆ. ಪೊಲೀಸರು ದಾಖಲೆ ಪತ್ರಗಳನ್ನು ತೋರಿಸುವಂತೆ ಪಟ್ಟು ಹಿಡಿದಾಗ ರಾಹುಲ್‌ ಏಕಾಏಕಿ ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕೂಡಲೇ ಪೊಲೀಸರು ರಾಹುಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಸುದ್ದಿ ತಿಳಿದು ಠಾಣೆಗೆ ಆಗಮಿಸಿದ ಬಿಜೆಪಿ ಶಾಸಕ ಜವಾಹರ್ ರಜಪೂತ್‌, ಮಗನನ್ನು ಠಾಣೆಯಲ್ಲಿ ಕೂಡಿ ಹಾಕಿರುವುದನ್ನು ಪ್ರಶ್ನಿಸಿಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಇತ್ತ ಶಾಸಕರ ಬೆಂಬಲಿಗರು ಠಾಣೆ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ರಾಹುಲ್‌ ರಜಪೂತ್‌ನನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ತುಣಕು ತಮ್ಮ ಬಳಿ ಇರುವುದಾಗಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT