ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ: ‘ಮಣ್ಣಿನ ಮಕ್ಕಳಿಗೆ’ ಮಣೆ

ರೈತರ ಆಕ್ರೋಶ ತಣಿಸಲು ಬಿಜೆಪಿ ಕಾರ್ಯತಂತ್ರ: ಟಿಕೆಟ್‌ ಹಂಚಿಕೆಯಲ್ಲಿ ಆದ್ಯತೆ
Last Updated 23 ಅಕ್ಟೋಬರ್ 2018, 18:42 IST
ಅಕ್ಷರ ಗಾತ್ರ

ನವದೆಹಲಿ: ಕೆಲವೇ ವಾರಗಳಲ್ಲಿ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ರಾಜ್ಯಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಬಾರಿ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಚುನಾವಣೆಯಲ್ಲಿ ಇದು ಹಿನ್ನಡೆಗೆ ಕಾರಣವಾಗಬಹುದು ಎಂಬುದನ್ನು ಬಿಜೆಪಿ ಗುರುತಿಸಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಜಾಣ್ಮೆ ತೋರುವ ಮೂಲಕ ತಾನು ರೈತಪರ ಎಂಬುದನ್ನು ತೋರಿಸಲು ಮುಂದಾಗಿದೆ.

ಛತ್ತೀಸಗಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿ ಜಗತ್‌ ಪ್ರಸಾದ್‌ ನಡ್ಡಾ ಪ್ರಕಟಿಸಿದ್ದಾರೆ. ರೈತರಿಗೆ ಪಕ್ಷವು ಆದ್ಯತೆ ನೀಡಲಿದೆ ಎಂಬುದನ್ನು ಅವರು ದೃಢಪಡಿಸಿದ್ದಾರೆ.

ಛತ್ತೀಸಗಡಕ್ಕೆ 77 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಅವರಲ್ಲಿ 53 ಮಂದಿ ಕೃಷಿ ಹಿನ್ನೆಲೆ ಇರುವವರು. ತೆಲಂಗಾಣದ 119 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ಮೂವರು ರೈತಾಪಿ ಕುಟುಂಬಗಳಿಂದ ಬಂದವರು.

ರೈತರ ಪ್ರತಿಭಟನೆಯಿಂದಾಗಿ ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿತ್ತು. 2017ರ ಸೆಪ್ಟೆಂಬರ್‌ನಲ್ಲಿ ಛತ್ತೀಸಗಡದಲ್ಲಿಯೂ ರೈತ ಹೋರಾಟಗಳು ನಡೆದಿವೆ.

ಭಾರಿ ಹೋರಾಟ ನಡೆಸುವುದಾಗಿ ಛತ್ತೀಸಗಡ ಸರ್ಕಾರಕ್ಕೆ ಅಲ್ಲಿನ ರೈತರು ಕಳೆದ ವರ್ಷದ ಮಾರ್ಚ್‌ನಲ್ಲಿ ಎಚ್ಚರಿಕೆ ಕೊಟ್ಟಿದ್ದರು. ಛತ್ತೀಸಗಡ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೆಲ್‌ ಅವರು ಜೂನ್‌ನಲ್ಲಿ ಜನ ಸಂಕಲ್ಪ ಎಂಬ ಹೆಸರಿನಲ್ಲಿ ರೈತರ ಬೃಹತ್‌ ರ್‍ಯಾಲಿಯನ್ನು ರಾಜನಂದಗಾಂವ್‌ನಲ್ಲಿ ನಡೆಸಿದ್ದರು. ರಾಜನಂದಗಾಂವ್‌ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರ ಕ್ಷೇತ್ರ.

ಬುಡಕಟ್ಟು ಸಮುದಾಯದ ಜನರೇ ಹೆಚ್ಚಾಗಿರುವ ಛತ್ತೀಸಗಡದಲ್ಲಿ ರೈತರನ್ನು ಮತ್ತೆ ಪಕ್ಷಕ್ಕೆ ಸೆಳೆಯುವುದಕ್ಕಾಗಿ ರೈತಾಪಿ ವರ್ಗದ ಅಭ್ಯರ್ಥಿಗಳನ್ನೇ ಹುಡುಕಿ ಕಣಕ್ಕೆ ಇಳಿಸಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ. ಮಧ್ಯಪ್ರದೇಶವು ರೈತರ ಹೋರಾಟದ ಕೇಂದ್ರ ಬಿಂದುವಾಗಿ ಕಳೆದ ವರ್ಷ ಹೊರಹೊಮ್ಮಿತ್ತು. ಹಾಗಾಗಿ ಮಧ್ಯಪ್ರದೇಶದ ಅಭ್ಯರ್ಥಿ ಪಟ್ಟಿಯಲ್ಲಿಯೂ ‘ಮಣ್ಣಿನ ಮಕ್ಕಳಿಗೆ’ ಆದ್ಯತೆ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ರೈತರ ಸಂಕಷ್ಟವನ್ನೇ ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ‘ಜವಾಬ್‌ ದೊ, ಹಿಸಾಬ್‌ ದೊ’ ಎಂಬ ಹೆಸರಿನಲ್ಲಿ ಅಖಿಲ ಭಾರತ ಕಿಸಾನ್‌ ಮಜ್ದೂರ್ ಕಾಂಗ್ರೆಸ್‌ ಸಮಾವೇಶವನ್ನು ನಡೆಸಿದೆ.

ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್‌ಗಿಂತ ಶೇ 0.75ರಷ್ಟು ಮತಗಳನ್ನು ಮಾತ್ರ ಹೆಚ್ಚು ಪಡೆಯಲು ಬಿಜೆಪಿಗೆ ಸಾಧ್ಯವಾಗಿದೆ. ಹಾಗಾಗಿ ಎಲ್ಲ ಜಾತಿ, ವರ್ಗಗಳಿಗೂ ಪಾತಿನಿಧ್ಯ ನೀಡುವ ಕಾರ್ಯತಂತ್ರವನ್ನು ರೂಪಿಸಿದೆ.

ಈಗಾಗಲೇ ಘೋಷಿಸಲಾಗಿರುವ 77 ಅಭ್ಯರ್ಥಿಗಳ ಪಟ್ಟಿಯಲ್ಲಿ 29 ಮಂದಿ ಪರಿಶಿಷ್ಟ ಜಾತಿಯವರಾದರೆ, 10 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು.

ಛತ್ತೀಸಗಡ ಮತ್ತು ತೆಲಂಗಾಣದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಲಾ ಮೂವರು ವೈದ್ಯರಿದ್ದಾರೆ. ತೆಲಂಗಾಣದಲ್ಲಿ ಐವರು ವಕೀಲರಿಗೂ ಅವಕಾಶ ಕೊಡಲಾಗಿದೆ.


ಆರ್‌ಎಸ್‌ಎಸ್‌ ಮೊರೆ ಹೋಗಲು ನಿರ್ಧಾರ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಜುಲೈ 14ರಂದು ಆರಂಭಿಸಿದ ‘ಜನಾಶೀರ್ವಾದ ಯಾತ್ರೆ’ಯು ಕಾರ್ಯಕರ್ತರಲ್ಲಿ ಹುರುಪು ತುಂಬುವಲ್ಲಿ ನಿರೀಕ್ಷಿತ ಮಟ್ಟ ಮುಟ್ಟಿಲ್ಲ ಎಂಬ ಅನುಮಾನ ಬಿಜೆಪಿಗೆ ನಾಯಕರಿಗೆ ಇದೆ. ಹಾಗಾಗಿಯೇ ತಳಮಟ್ಟದಲ್ಲಿ ಉತ್ಸಾಹ ತುಂಬಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊರೆ ಹೋಗಲು ಬಿಜೆಪಿ ನಿರ್ಧರಿಸಿದೆ.

ಇದರ ಜತೆಗೆ, ರಾಜ್ಯದ ಎಲ್ಲ ಎಂಟು ವಿಭಾಗಗಳ ಉಸ್ತುವಾರಿಯನ್ನು ಪಕ್ಷದ ಹಿರಿಯ ಮುಖಂಡರಿಗೆ ವಹಿಸಲು ಉದ್ದೇಶಿಸಲಾಗಿದೆ. ಕಾರ್ಯಕರ್ತರ ಅತೃಪ್ತಿ ಹೋಗಲಾಡಿಸಿ ಸಮನ್ವಯ ಸೃಷ್ಟಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿರಲಿದೆ.

ಚೌಹಾಣ್‌ಗೆ ಹಿನ್ನಡೆ: ಮುಖ್ಯಮಂತ್ರಿ ಚೌಹಾಣ್‌ ಅವರಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್ಚಿನ ಅಧಿಕಾರ ದೊರೆಯುವ ಸಾಧ್ಯತೆ ಇಲ್ಲ ಎಂಬುದನ್ನು ಈವರೆಗಿನ ಬೆಳವಣಿಗೆಗಳು ಸೂಚಿಸುತ್ತಿವೆ. ಪಕ್ಷಾಧ್ಯಕ್ಷ ಅಮಿತ್‌ ಶಾ ಅವರು ನಿಯೋಜಿಸಿರುವ ತಂಡವು ಆರ್‌ಎಸ್‌ಎಸ್‌ ಜತೆಗೆ ಸಮಾಲೋಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದೆ ಎಂದು ಮೂಲಗಳು ಹೇಳಿವೆ. ಮುಂದಿನ ವಾರ ಮೊದಲ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

**

ಹೀಗಿದೆ ಚುನಾವಣೆ ತಯಾರಿ

* ಮಧ್ಯಪ್ರದೇಶದವರಲ್ಲದ ಬಿಜೆಪಿಯ ಒಂಬತ್ತು ವಕ್ತಾರರಿಗೆ ಮಾಧ್ಯಮ ನಿರ್ವಹಣೆಯ ಹೊಣೆ

* ವಕ್ತಾರರ ಕೆಲಸಗಳ ಮೇಲುಸ್ತವಾರಿಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ನೇಮಕ

* ಸರ್ಕಾರವು ಭಾರಿ ಪ್ರಮಾಣದಲ್ಲಿ ಜಾಹೀರಾತು ನೀಡಿದ್ದರೂ ಮಾಧ್ಯಮದಲ್ಲಿ ಸರ್ಕಾರದ ಸಾಧನೆ ಬಿಂಬಿಸಲು ಮಧ್ಯಪ್ರದೇಶದ ವಕ್ತಾರರು ವಿಫಲರಾಗಿದ್ದಾರೆ ಎಂಬುದು ವಕ್ತಾರರ ಬದಲಾವಣೆಗೆ ಕಾರಣ

* ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಕನಿಷ್ಠ 75 ಶಾಸಕರಿಗೆ ಟಿಕೆಟ್‌ ನಿರಾಕರಣೆ ಸಾಧ್ಯತೆ; ಐದಾರು ಸಚಿವರಿಗೂ ಟಿಕೆಟ್‌ ತಪ್ಪುವ ಆತಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT