ಮಾತಿನ ಮೋಡಿಗಾರ ಮೌನದಲ್ಲಿ ಲೀನ

7
ಮಾಜಿ ಪ್ರಧಾನಿ ವಾಜಪೇಯಿಗೆ ರಾಷ್ಟ್ರದ ವಿದಾಯ l ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ

ಮಾತಿನ ಮೋಡಿಗಾರ ಮೌನದಲ್ಲಿ ಲೀನ

Published:
Updated:
Deccan Herald

ನವದೆಹಲಿ: ಸೇನೆಯ ಕಹಳೆ ಮೊಳಗಿತು, ಸಮವಸ್ತ್ರದಲ್ಲಿದ್ದ ಸೈನಿಕರು ಆಗಸದತ್ತ ಗುಂಡು ಹಾರಿಸಿ ನಮನ ಸಲ್ಲಿಸಿದರು. ಸೇರಿದ್ದ ಸಾವಿರಾರು ಜನರ ಮಧ್ಯೆ ನೀರವ ಮೌನ ಆವರಿಸಿತು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತೆಗೆ ಸಾಕು ಮಗಳು ನಮಿತಾ ಕೌಲ್‌ ಭಟ್ಟಾಚಾರ್ಯ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಅಗ್ನಿಸ್ಪರ್ಶ ಮಾಡಿದರು.

ಮಾನವೀಯತೆ, ಭವಿಷ್ಯದ ದೃಷ್ಟಿಕೋನದಿಂದ ದೇಶ ಕಟ್ಟಿದ್ದ ದೊಡ್ಡ ನಾಯಕನ ಚೇತನ ಅಗ್ನಿಗೆ ಆಹುತಿಯಾಯಿತು. ಮಾತಿನ ಮೋಡಿಗಾರ ಮೌನದಲ್ಲಿ ಲೀನವಾದರು. ‘ಅಟಲ್‌ ಬಿಹಾರಿ ಅಮರ್‌ ರಹೇ’ ಎಂಬ ಘೋಷಣೆ ಎಲ್ಲ ದಿಕ್ಕುಗಳಿಂದಲೂ ಮೊಳಗಿತು. ದೆಹಲಿಯ ಸಹಿಸಲಾಗದ ಸೆಖೆಯನ್ನು ತಣಿಸುವಂತೆ ಮಳೆಯ ಸಿಂಚನವಾಯಿತು. 

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಭೂತಾನ್‌ ದೊರೆ ಜಿಂಗ್ಮೆ ಖೇಸರ್‌ ವಾಂಗ್ಚುಕ್‌, ಬಾಂಗ್ಲಾ ದೇಶದ ವಿದೇಶಾಂಗ ಸಚಿವ ಅಬುಲ್‌ ಹಸನ್‌ ಮಹಮೂದ್‌ ಅಲಿ, ಪಾಕಿಸ್ತಾನದ ಕಾನೂನು ಸಚಿವ ಅಲಿ ಝಫರ್‌ ಮತ್ತು ಸಾವಿರಾರು ಜನರು ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳಿದರು.

ವಾಸ್ತವಿಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತದ ತಮ್ಮ ಕನಸನ್ನು ಸಮ್ಮಿಳನಗೊಳಿಸಿ ದೇಶ ಆಳಿದ್ದ ನಾಯಕನಿಗೆ ಗೌರವ ಅರ್ಪಿಸಲು ಬಂದಿದ್ದ ಬಹುತೇಕ ಮಂದಿ ಬಿಳಿ ಬಟ್ಟೆಯಲ್ಲಿಯೇ ಇದ್ದರು. ಹಾಗಾಗಿ, ಅಂತಿಮ ಮೆರವಣಿಗೆ ಸಾಗಿದ ಪ್ರದೇಶಗಳು, ಅಂತ್ಯಸಂಸ್ಕಾರದ ಸ್ಮೃತಿಸ್ಥಳ ಎಲ್ಲವೂ ಶ್ವೇತಸಾಗರದಂತೆ ಕಂಡಿತು.

**

ವಿದಾಯ

ಮೃತದೇಹವನ್ನು ಅಟಲ್‌ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಇರಿಸಲಾಗಿತ್ತು

ದೀನ ದಯಾಳ್‌ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಶುಕ್ರವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಮೃತದೇಹವನ್ನು ಸ್ಥಳಾಂತರಿಸಲಾಯಿತು

ಬಿಜೆಪಿ ಕಚೇರಿಯಿಂದ ಅಂತ್ಯಸಂಸ್ಕಾರದ ‘ಸ್ಮೃತಿಸ್ಥಳ’ಕ್ಕೆ ಅಂತಿಮ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಆರಂಭವಾಯಿತು

ಮಧ್ಯಾಹ್ನ ನಂತರ 3.45ಕ್ಕೆ ಸ್ಮೃತಿ ಸ್ಥಳಕ್ಕೆ ಮೆರವಣಿಗೆ ತಲುಪಿತು

ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಾವಿರಾರು ಜನರು ವಾಜಪೇಯಿ ಅವರಿಗೆ ವಿದಾಯ ಹೇಳಿದರು

**

ಅಗ್ನಿವೇಶ್‌ ಮೇಲೆ ಹಲ್ಲೆ

ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಿಜೆಪಿ ಕೇಂದ್ರ ಕಚೇರಿಗೆ ಬಂದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ (79) ಅವರನ್ನು ಎಳೆದಾಡಿ, ಹಲ್ಲೆ ನಡೆಸಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿದವರು ಬಿಜೆಪಿ ಕಾರ್ಯಕರ್ತರು ಎಂದು ಅಗ್ನಿವೇಶ್‌ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !