ಶುಕ್ರವಾರ, ನವೆಂಬರ್ 22, 2019
19 °C

ವಿಭಜನೆ ಬದಲು ಒಗ್ಗಟ್ಟಿನ ಭಜನೆ

Published:
Updated:
Prajavani

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಮುಖಂಡರು ಡೊಭಾಲ್‌ಗೆ ಭರವಸೆ ನೀಡಿದರು. 

‘ದೇಶದೊಳಗಿನ ಹಾಗೂ ಹೊರಗಿನ ಕೆಲವು ದುಷ್ಟಶಕ್ತಿಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ಯತ್ನಿಸಬಹುದು ಎಂಬ ಅಂಶವನ್ನು ಸಭೆಯಲ್ಲಿದ್ದ ಎಲ್ಲ ಮುಖಂಡರೂ ಮನಗಂಡರು’ ಎಂದು ನಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಹಿಂದೂ ಧರ್ಮಾಚಾರ್ಯ ಸಭಾ, ವಿಶ್ವಹಿಂದೂ ಪರಿಷತ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಡೊಭಾಲ್ ಅವರ ನಿವಾಸದಲ್ಲಿ ನಾಲ್ಕು ಗಂಟೆ ಸಭೆ ನಡೆಯಿತು. ತೀರ್ಪು ಪ್ರಕಟವಾದ ಬಳಿಕ ಸರ್ಕಾರ ಹಾಗೂ ಎಲ್ಲ ಜನರು ಸಾಮರಸ್ಯ ಕಾಪಾಡಲು ಮಾಡಿದ ಯತ್ನವನ್ನು ಮುಖಂಡರು ಶ್ಲಾಘಿಸಿದರು. 

‘ಎಲ್ಲ ಸಮುದಾಯಗಳ ನಡುವೆ ಸೋದರತೆಯನ್ನು ಕಾಯ್ದುಕೊಳ್ಳಲು ಪ್ರಮುಖ ಧಾರ್ಮಿಕ ಮುಖಂಡರ ನಡುವೆ ಏರ್ಪಟ್ಟ ಸಂವಹನ ನೆರವಾಯಿತು. ಸಂವಿಧಾನ ಮತ್ತು ಕಾನೂನಿನ ಮೇಲೆ ಎಲ್ಲರೂ ಅತೀವ ವಿಶ್ವಾಸ ವ್ಯಕ್ತಪಡಿಸಿದರು’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

ಅಯೋಧ್ಯೆಯಲ್ಲಿ ಗರಿಗೆದರಿದ ಚಟುವಟಿಕೆ
ಅಯೋಧ್ಯೆ: ರಾಮ ಜನ್ಮಭೂಮಿ –ಬಾಬರಿ ಮಸೀದಿ ಭೂವಿವಾದದ ಅಂತಿಮ ತೀರ್ಪು ಹೊರಬಂದ ಮರುದಿನ (ಭಾನುವಾರ), ಅಯೋಧ್ಯೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಅಯೋಧ್ಯಾ ನಿವಾಸಿಗಳಲ್ಲಿ ಹಲವರು ಭಾನುವಾರ ಬೆಳಿಗ್ಗೆ ದಿನಪತ್ರಿಕೆಗಳನ್ನು ಹಿಡಿದು ತೀರ್ಪಿನ ಸುದ್ದಿಗಳನ್ನು ಪರಿಶೀಲಿಸುತ್ತಿರುವುದು ಕಂಡುಬಂತು. ರಾಮ ಜನ್ಮಭೂಮಿಯತ್ತ ಹೋಗುವ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯೇ ತೆರೆದಿದ್ದವು. ಹೂವು–ಹಣ್ಣು, ಸಿಹಿ ತಿನಿಸು ಮತ್ತು ಪೂಜಾ ಸಾಮಗ್ರಿಗಳ ಅಂಗಡಿಗಳ ವ್ಯಾಪಾರ ಎಂದಿಗಿಂತ ಹೆಚ್ಚಾಗಿತ್ತು. ಹಲವು ಅಂಗಡಿಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು.

ರಾಮ ಜನ್ಮಭೂಮಿಗೆ ಸಮೀಪದಲ್ಲಿ ಇರುವ ನಯಾ ಘಾಟ್‌ ಮತ್ತು ಹನುಮಾನ ಗಡಿ ದೇವಾಲಯದಲ್ಲಿ ಬೆಳಿಗ್ಗೆಯೇ ಜನದಟ್ಟಣೆ ಉಂಟಾಗಿತ್ತು.

‘ತೀರ್ಪು ಬಂದ ಮರುದಿನವಾದ್ದರಿಂದ ಇದು ವಿಶೇಷವಾದ ದಿನ. ಜನರಲ್ಲಿ ಸಂಭ್ರಮ ಕಾಣುತ್ತಿದೆ. ಹೆಚ್ಚು ಭಕ್ತರು ಬಂದಿದ್ದಾರೆ. ಆದರೆ, ನಿರೀಕ್ಷೆಯಷ್ಟು ಜನರು ಬಂದಿಲ್ಲ. ನಗರದ ಹಲವೆಡೆ ಪೊಲೀಸ್ ಭದ್ರತೆ ಹೆಚ್ಚಾಗಿರುವುದರಿಂದ ಹೀಗಾಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ಹನುಮಾನ್‌ ಗಡಿ ದೇವಾಲಯದ ಹಿರಿಯ ಪುರೋಹಿತ ಮಹಾಂತ ರಾಜು ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಸೋದ್ಯಮ ವೃದ್ಧಿಸುವ ನಿರೀಕ್ಷೆ
ವಿವಾದ ಬಗೆಹರಿದಿರುವ ಕಾರಣ ಅಯೋಧ್ಯೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಸಾಧ್ಯತೆಗಳು ಇವೆ ಎಂದು ಇಲ್ಲಿನ ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ರಾಮ ಜನ್ಮಭೂಮಿ ಮತ್ತು ರಾಮನಿಗೆ ಸಂಬಂಧಿಸಿದ ಹಲವು ಪವಿತ್ರ ಕ್ಷೇತ್ರಗಳು ಇಲ್ಲಿವೆ. ವಿವಾದದ ಕಾರಣ, ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ ಇತ್ತು. ಈಗ ಇಲ್ಲಿನ ದೇವಾಲಯ ಮತ್ತು ತೀರ್ಥಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ತೀರ್ಪು ಬಂದ ಮರುದಿನವೇ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಹೀಗಾಗಿ ವ್ಯಾಪಾರ ಸ್ವಲ್ಪ ಜೋರಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಲಿದೆ’ ಎನ್ನುತ್ತಾರೆ ಹನುಮಾನ್‌ ಗಡಿ ದೇವಾಲಯದ ಬಳಿ ಹೂವಿನ ಅಂಗಡಿ ನಡೆಸುವ ಅನೂಪ್‌ ಸೈನಿ.

‘ನಮ್ಮಲ್ಲಿದ್ದ ಹೂವಿನ ಹಾರಗಳು ಸಾಲುತ್ತಿರಲಿಲ್ಲ. ಹೀಗಾಗಿ ವಾರಾಣಸಿ ಮತ್ತು ಬೇರೆ ಪಟ್ಟಣಗಳಿಂದ ಹಾರಗಳನ್ನು ತರಿಸಿದ್ದೇನೆ. ವ್ಯಾಪಾರ ಜೋರಾಗಿದೆ’ ಎಂದು ಸೈನಿ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದ ಬೇರೆ ಭಾಗಗಳಿಂದ ಅಯೋಧ್ಯೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಏರಿಕೆ ಆಗುವ ನಿರೀಕ್ಷೆ ಇದೆ.

‘ತೀರ್ಪು ಬಂದ ಮರುದಿನವೇ ನಾವು ಅಯೋಧ್ಯೆ ದರ್ಶನ ಪಡೆದಿರುವುದು ಸಂತಸ ತಂದಿದೆ. ಭದ್ರತೆ ಸಮಸ್ಯೆ ಇಲ್ಲದೇ ಇರುವ ಕಾರಣ ಪ್ರವಾಸಿಗರು ಹೆಚ್ಚು–ಹೆಚ್ಚು ಸಂಖ್ಯೆಯಲ್ಲಿ ಬರಲಿದ್ದಾರೆ’ ಎಂದು ಪ್ರವಾಸಿಗ ಗಣೇಶ್‌ ತಾರೆ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದಿಂದ ಅವರು 55 ಜನರ ಗುಂಪಿನೊಂದಿಗೆ ಅಯೋಧ್ಯೆ ತೀರ್ಥಯಾತ್ರೆಗೆ ಬಂದಿದ್ದಾರೆ.

ರಾಮ ಮಂದಿರ ನಿರ್ಮಾಣದ ನಂತರ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಂಟಿ ಹೇಳಿಕೆ
* ಸುಪ್ರೀಂಕೋರ್ಟ್ ತೀರ್ಪಿಗೆ ಗೌರವ; ದೇಶದ ಎಲ್ಲರೂ ತೀರ್ಪಿಗೆ ಬದ್ಧರಾಗಿರಬೇಕು
* ಎಲ್ಲ ವಿಷಯಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು
* ಎಲ್ಲ ವರ್ಗಗಳ ಕೋಟ್ಯಂತರ ಜನರು ತೀರ್ಪನ್ನು ಶಾಂತಿಯುತವಾಗಿ ಸ್ವಾಗತಿಸಿದ ವಿಧಾನ ತೃಪ್ತಿದಾಯಕ
* ಮುಂದಿನ ದಿನಗಳಲ್ಲೂ ನಿರಂತರ ಮಾತುಕತೆ ಅತ್ಯಗತ್ಯ

**

ಗೊಂದಲ ಸೃಷ್ಟಿಸಲು ಕೆಲವರು ಉದ್ದೇಶಿಸಿರಬಹುದು. ಆದರೆ ಅಂತಹವರ ಯತ್ನ ಈಡೇರುವುದಿಲ್ಲ ಎಂದು ಇಂದಿನ ಸಭೆ ಸ್ಪಷ್ಟಪಡಿಸಿದೆ.
–ಸ್ವಾಮಿ ಪರಮಾತ್ಮಾನಂದ ಸರಸ್ವತಿ

**

ಹಿಂದೂ–ಮುಸ್ಲಿಮರ ವಿಷಯ ಕೊನೆಗೊಂಡು, ಎಲ್ಲರೂ ದೇಶ ಕಟ್ಟಲು ಕೊಡುಗೆ ನೀಡುವ ಸಮಯ ಬಂದಿದೆ.
–ಸೈಯದ್ ಜೈನುಲ್ಲಾ ಅಬೆದಿನ್ ಅಲಿ, ‘ಖ್ವಾಜಾ ಮೊಯಿನುದ್ದೀನ್ ಚಿಸ್ತಿ’ ಮುಖ್ಯಸ್ಥ

**

ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಮುಸ್ಲಿಮರು ಹಾಗೆಯೇ ಮಸೀದಿ ನಿರ್ಮಾಣಕ್ಕೆ ಎಲ್ಲ ಹಿಂದೂಗಳು ಕೊಡುಗೆ ನೀಡಬೇಕು. ಇಂಥ ಪ್ರಾಯೋಗಿಕ ಹೆಜ್ಜೆ ಇಡಬೇಕಿದೆ.
–ಬಾಬಾ ರಾಮದೇವ್

**

ಒಟ್ಟಿಗೆ ಪ್ರಾರ್ಥಿಸಲು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ದೇಶದ ಭದ್ರತೆ, ಮಾನವತೆ, ನೆಲ, ಪರಿಸರಕ್ಕಾಗಿ ಒಟ್ಟಾಗಿ ದುಡಿಯಲು ಸಾಧ್ಯ.
–ಸ್ವಾಮಿ ಚಿದಾನಂದ ಸರಸ್ವತಿ

ಪ್ರತಿಕ್ರಿಯಿಸಿ (+)