ಸೋಮವಾರ, ಸೆಪ್ಟೆಂಬರ್ 23, 2019
22 °C

ಬಂಡೀಪುರ: ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಕೇರಳ ಸಿಎಂ ಒತ್ತಾಯ

Published:
Updated:
Prajavani

ತಿರುವನಂತಪುರ: ಬಂಡೀಪುರ ರಾಷ್ಟ್ರೀಯ ಉದ್ಯಾನ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಅವರಿಗೆ ಶನಿವಾರ ಪತ್ರ ಬರೆದಿರುವ ವಿಜಯನ್‌, ‘ಯೋಜನೆಗೆ ಖರ್ಚಾಗುವ ಹಣದಲ್ಲಿ ಅರ್ಧ ವೆಚ್ಚವನ್ನು ಕೇರಳ ಸರ್ಕಾರ ಭರಿಸಲಿದೆ’ ಎಂದು ವಿವರಿಸಿದ್ದಾರೆ.

‘ಈ ಮಾರ್ಗದಲ್ಲಿ ರಾತ್ರಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ವಯನಾಡ್‌, ಕೋಯಿಕ್ಕೋಡ್‌ ಹಾಗೂ ಮಲಪ್ಪುರಂ ಜಿಲ್ಲೆಯ
ಜನರು ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ರಸ್ತೆ ಮೂಲಕ ಮೈಸೂರಿಗೆ ಸಂಚರಿಸಿದರೆ, ಪ್ರಯಾಣಿಸುವ ಅಂತರ 40 ಕಿ.ಮೀ.ನಷ್ಟು ಹೆಚ್ಚಾಗಲಿದೆ. ಹೀಗಾಗಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಅಗತ್ಯ’ ಎಂದು ವಿಜಯನ್‌ ಪತ್ರದಲ್ಲಿ ವಿವರಿಸಿದ್ದಾರೆ.

ವಯನಾಡ್‌ ಭಾಗದ ಚುನಾಯಿತ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಸದಸ್ಯರನ್ನು ಒಳಗೊಂಡ ನಿಯೋಗ ಇತ್ತೀಚೆಗೆ ವಿಜಯನ್‌ ಅವರನ್ನು ಭೇಟಿ ಮಾಡಿತ್ತು. ಹುಲಿ ಸಂರಕ್ಷಿತ ಪ್ರದೇಶ ಇರುವ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾಯ್ದು ಹೋಗಿರುವ
ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.

ಈ ಹೆದ್ದಾರಿಯಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಈ ವೇಳೆಯಲ್ಲಿ ವನ್ಯಜೀವಿಗಳು ಸಂಚರಿಸುವುದರಿಂದ ಅವುಗಳ ಮುಕ್ತ ಓಡಾಟಕ್ಕೆ ಭಂಗ ಉಂಟಾಗುತ್ತದೆ ಮತ್ತು ಈ ಹಿಂದೆ ಸಾಕಷ್ಟು ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ
ಸಾವನ್ನಪ್ಪಿವೆ ಎಂಬುದು ಕರ್ನಾಟಕ ಸರ್ಕಾರದ ವಾದ.

* ರಸ್ತೆಯಿಂದ ವಯನಾಡ್‌, ಕೋಯಿಕ್ಕೋಡ್‌, ಮಲಪ್ಪುರಂ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಯೋಜನೆಗೆ ಖರ್ಚಾಗುವ ಹಣದಲ್ಲಿ ಅರ್ಧ ವೆಚ್ಚವನ್ನು ಕೇರಳ ಸರ್ಕಾರ ಭರಿಸಲಿದೆ

-ಪಿಣರಾಯಿ ವಿಜಯನ್, ಕೇರಳ ಸಿ.ಎಂ

 

Post Comments (+)